ADVERTISEMENT

ಅಂಡಾಣು ಮಾರಾಟ | ಬೆಂಗಳೂರಿಗೂ ನಂಟು: ಮಹಾರಾಷ್ಟ್ರದಲ್ಲಿ ನಾಲ್ವರ ಬಂಧನ

ಪಿಟಿಐ
Published 25 ಫೆಬ್ರುವರಿ 2026, 21:56 IST
Last Updated 25 ಫೆಬ್ರುವರಿ 2026, 21:56 IST
   

ಠಾಣೆ: ಮಹಿಳೆಯರಿಗೆ ಹಣದ ಆಮಿಷವೊಡ್ಡಿ ಅಂಡಾಣು ದಂಧೆ ನಡೆಸುತ್ತಿದ್ದ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ಭೇದಿಸಿದ್ದು, ತನಿಖೆಯಲ್ಲಿ ಬೆಂಗಳೂರು, ತೆಲಂಗಾಣದೊಂದಿಗೆ ನಂಟು ಹೊಂದಿರುವುದನ್ನು ಪತ್ತೆ ಮಾಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು  ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂಡಾಣು ಮಾರಾಟ ದಂಧೆಯಲ್ಲಿ 40ಕ್ಕೂ ಅಧಿಕ ಮಹಿಳೆಯರನ್ನು ಶೋಷಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

‘ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಆರೋಪಿ ಸೋನಲ್‌ ಗರೇವಾಲ್‌ ಅವರನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ’ ಎಂದು ಡಿಸಿಪಿ (ವಲಯ–4) ಸಚಿನ್‌ ಗೋರೆ ಮಾಹಿತಿ ನೀಡಿದ್ದಾರೆ. 

‘ಯಾವುದೇ ವೈದ್ಯಕೀಯ ಪದವಿ ಪಡೆಯದಿದ್ದರೂ ಕೂಡ ಸೋನಲ್‌ ಅಕ್ರಮವಾಗಿ ಸೋನೋಗ್ರಾಫಿ (ಹೊಟ್ಟೆಯ ಸ್ಕ್ಯಾನಿಂಗ್‌)ಗೆ ಸಹಾಯ ಮಾಡುತ್ತಿದ್ದಳು. ಅಂಡೋತ್ಪತ್ತಿ ಉತ್ತೇಜಿಸುವ ಉಪಕರಣಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದಳು. ಪಂಚನಾಮೆ ನಡೆಸಿ, ಮೂರು ಸ್ಥಳಗಳಿಂದ ₹9.50 ಲಕ್ಷದಿಂದ ₹10 ಲಕ್ಷ ಮೌಲ್ಯದ ಇಂಜೆಕ್ಷನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ ಮತ್ತಷ್ಟು ವ್ಯಕ್ತಿಗಳನ್ನು ಹಾಗೂ ಕೇಂದ್ರಗಳನ್ನು ಪತ್ತೆಹಚ್ಚಲು ನಾಲ್ಕು ತಂಡಗಳನ್ನು ರಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ..?

ಅಂಡಾಣು ಮಾರಾಟ ಮಾಡಿದರೂ ಕೂಡ ನೀಡಿದ ವಾಗ್ದಾನದಂತೆ ಹಣ ನೀಡಿಲ್ಲ ಎಂದು ಮಹಿಳೆಯೊಬ್ಬರು ನೀಡಿದ ದೂರಿನ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.  ಪ್ರಮುಖ ಸೂತ್ರಧಾರಿ ಸುಲಕ್ಷಣ ಗಡೇಕರ್‌ (44) ಅವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಹಾರ್ಮೊನಲ್‌ ಇಂಜೆಕ್ಷನ್‌ಗಳು ಪತ್ತೆಯಾಗಿವೆ. ಇದಾದ ಬಳಿಕ ಅಶ್ವಿನಿ ಛಬುಸ್ಕವಾರ್‌ (29) ಮಂಜುಷಾ ವಾಖಂಡೆ (46) ಅವರನ್ನು ಬಂಧಿಸಲಾಗಿದೆ.

ಪ್ರಕರಣವು ಅಂತರ ರಾಜ್ಯಗಳ ನಡುವೆ ಬೆಸೆದಿದೆ ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಬಂಧಿತರ ಮೊಬೈಲ್‌ನಿಂದ ಸಂಗ್ರಹಿಸಿದ ದತ್ತಾಂಶಗಳ ಪ್ರಕಾರ, ಅಂಡಾಣು ನೀಡಲು ಮುಂದೆ ಬರುವ ಮಹಿಳೆಯರಿಗೆ ₹25 ಸಾವಿರದಿಂದ ₹30 ಸಾವಿರ ನೀಡಲಾಗುವುದು ಎಂದು ಆಮಿಷ ಒಡ್ಡಲಾಗಿತ್ತು. ಗಡೇಕರ್‌ ನಿವಾಸದಲ್ಲಿ ಹಾರ್ಮೋನಲ್‌ ಇಂಜೆಕ್ಷನ್‌ ನೀಡಿದ ಬಳಿಕ ಅವರನ್ನು ಬೆಂಗಳೂರು, ತೆಲಂಗಾಣ, ನಾಗ್ಪುರ, ಪುಣೆ ಹಾಗೂ ನಾಸಿಕ್‌ಗೆ ಕರೆದೊಯ್ದು ಅಂಡಾಣು ಪಡೆಯಲಾಗುತ್ತಿತ್ತು.

ವಿಸ್ತೃತ ತನಿಖೆಗೆ ಸೂಚನೆ ನೀಡಲಾಗಿದ್ದು, ಅಂಡಾಣುವನ್ನು ವಾಣಿಜ್ಯ ಉದ್ದೇಶದಿಂದ ಮಾರಾಟ ಮಾಡಿದ್ದರೆ, ವೈದ್ಯರು, ಏಜೆಂಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು
ಪ್ರಕಾಶ್‌ ಅಬಿಟ್ಕರ್‌, ಆರೋಗ್ಯ ಸಚಿವ, ಮಹಾರಾಷ್ಟ್ರ
ಆಘಾತಕಾರಿ ಅಂಶ ಬಯಲು
‘ಸಾಮಾನ್ಯವಾಗಿ ಆರೋಗ್ಯವಂತ ಮಹಿಳೆಯರಿಂದ ಜೀವಿತಾವಧಿಯಲ್ಲಿ ಒಂದು ಸಲ ಮಾತ್ರ ಅಂಡಾಣು ತೆಗೆಯಲು ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಕಾಯ್ದೆ –2021ರ ಅಡಿಯಲ್ಲಿ ಅವಕಾಶವಿದೆ. ಆದರೆ, ಆರೋಪಿಗಳು ಮಹಿಳೆಯರಿಂದ 33 ಸಲ ಅಂಡಾಣು ತೆಗೆದಿದ್ದಾರೆ. ಇದೇ ರೀತಿ 40ಕ್ಕೂ ಅಧಿಕ ಮಹಿಳೆಯರನ್ನು ಶೋಷಣೆಗೆ ಒಳಪಡಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ವೈದ್ಯರ ಸಲಹಾ ಚೀಟಿ ಇಲ್ಲದೇ, ಸೋನೋಗ್ರಾಫಿ ನಡೆಸಿದ ಉಲ್ಲಾಸನಗರ ಹಾಗೂ ಠಾಣೆಯ ಎರಡು ಆಸ್ಪತ್ರೆಗಳ ಮೇಲೆ ನಿಗಾ ವಹಿಸಿದ್ದು, ಆಸ್ಪತ್ರೆಯ ವೈದ್ಯಕೀಯ ದಾಖಲೆಗಳನ್ನು ಸಂಪೂರ್ಣ ಪರಿಶೀಲನೆಗೆ ಒಳಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.