ಭುಜ್: ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್ (ಸುಮಾರು ₹8,550 ಕೋಟಿ) ಹಣಕಾಸಿನ ನೆರವು ನೀಡುವ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಭಾರತವು ಶುಕ್ರವಾರ ಅಂತರರಾಷ್ಟ್ರೀಯ ಹಣಕಾಸು ನಿಧಿಗೆ (ಐಎಂಎಫ್) ಒತ್ತಾಯ ಮಾಡಿದೆ.
‘ಪಾಕಿಸ್ತಾನಕ್ಕೆ ಒಂದು ಬಿಲಿಯನ್ ಡಾಲರ್ ಹಣಕಾಸಿನ ನೆರವು ನೀಡುವ ನಿರ್ಧಾರವನ್ನು ಐಎಂಎಫ್ ಮರುಪರಿಶೀಲಿಸಬೇಕು ಮತ್ತು ಭವಿಷ್ಯದಲ್ಲಿ ಆ ದೇಶಕ್ಕೆ ಯಾವುದೇ ರೀತಿಯ ಸಹಾಯ ನೀಡಬಾರದು ಎಂದು ಭಾರತವು ಬಯಸುತ್ತದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಇಲ್ಲಿ ಸೇನಾ ಸಿಬ್ಬಂದಿಯನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ.
ಭಾರತವು ಐಎಂಎಫ್‌ಗೆ ನೀಡುವ ಹಣವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪಾಕಿಸ್ತಾನ ಅಥವಾ ಇತರ ಯಾವುದೇ ದೇಶದಲ್ಲಿ ಭಯೋತ್ಪಾದನೆಗೆ ಬಳಕೆಯಾಗುವುದನ್ನು ಬಯಸುವುದಿಲ್ಲ ಎಂದು ಹೇಳಿದರು.
ಒಟ್ಟಾರೆ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ಶುಕ್ರವಾರ ಬೆಳಿಗ್ಗೆ ಭುಜ್ ವಾಯುನೆಲೆಗೆ ಬಂದಿಳಿದ ಸಚಿವರು, ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಮುನ್ನಡೆಸುತ್ತಿರುವ ಭಾರತೀಯ ವಾಯುಪಡೆಯನ್ನು ಶ್ಲಾಘಿಸಿದರು. ನಾಲ್ಕು ದಿನ ನಡೆದ ಸೇನಾ ಸಂಘರ್ಷದ ವೇಳೆ ಪಾಕಿಸ್ತಾನವು ಭುಜ್ ವಾಯುನೆಲೆಯನ್ನೂ ಗುರಿಯಾಗಿಸಿತ್ತು.
ಈಗಿನ ಪರಿಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ ನೀಡುವ ಯಾವುದೇ ಹಣಕಾಸಿನ ನೆರವನ್ನು ‘ಭಯೋತ್ಪಾದಕ ನಿಧಿ’ ಎಂದರೆ ತಪ್ಪಾಗದುರಾಜನಾಥ ಸಿಂಗ್ ರಕ್ಷಣಾ ಸಚಿವ
ಉಗ್ರರಿಗೆ ಪಾಕ್ ಸರ್ಕಾರದಿಂದ ಹಣ ಭಾರತದ ದಾಳಿಯಲ್ಲಿ ನಾಶವಾಗಿರುವ ಭಯೋತ್ಪಾದನಾ ಮೂಲಸೌಕರ್ಯಗಳನ್ನು ಪಾಕಿಸ್ತಾನ ಮರು ನಿರ್ಮಾಣ ಮಾಡುವ ಕೆಲಸ ಆರಂಭಿಸಿದೆ ಎಂದು ಅವರು ಟೀಕಿಸಿದರು. ಜೈಷ್ ಎ ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮತ್ತು ಜಾಗತಿಕ ಭಯೋತ್ಪಾದಕ ಮಸೂದ್ ಅಜರ್‌ಗೆ ನೆರವಾಗಲು ಪಾಕ್ ಸರ್ಕಾರ ಅಲ್ಲಿನ ನಾಗರಿಕರಿಂದ ತೆರಿಗೆ ರೂಪದಲ್ಲಿ ಹಣ ಸಂಗ್ರಹಿಸಿದೆ. ₹14 ಕೋಟಿ ಸಂಗ್ರಹಿಸಿ ಅಜರ್‌ಗೆ ನೀಡಲು ಮುಂದಾಗಿದೆ. ಮುರೀದ್ಕೆ ಮತ್ತು ಬಹಾವಲ್ಪುರದಲ್ಲಿರುವ ಲಷ್ಕರ್ ಎ ತಯಬಾ ಹಾಗೂ ಜೆಇಂಎಂನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಪುನರ್ ನಿರ್ಮಿಸಲು ಸರ್ಕಾರ ಆರ್ಥಿಕ ನೆರವು ಘೋಷಿಸಿದೆ ಎಂದು ದೂರಿದರು. ಪಾಕಿಸ್ತಾನ ಸರ್ಕಾರವು ಭಯೋತ್ಪಾದಕ ಸಂಘಟನೆಗಳ ಜತೆ ಸಂಬಂಧ ಹೊಂದಿರುವುದರಿಂದ ಅಲ್ಲಿನ ಅಣ್ವಸ್ತ್ರಗಳು ಭಯೋತ್ಪಾದಕರ ಕೈಗೆ ಲಭಿಸುವ ಅಪಾಯವನ್ನು ತಳ್ಳಿಹಾಕುವಂತಿಲ್ಲ ಎಂದು ಎಚ್ಚರಿಸಿದರು.
‘ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ’ ‘ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ. ಇದುವರೆಗೆ ನಡೆದಿರುವುದು ಟ್ರೇಲರ್ ಮಾತ್ರ. ಅಗತ್ಯಬಿದ್ದರೆ ಪೂರ್ಣ ಸಿನಿಮಾವನ್ನು ಜಗತ್ತಿಗೆ ತೋರಿಸುತ್ತೇವೆ. ಭಯೋತ್ಪಾದಕರ ವಿರುದ್ಧ ಹೋರಾಟ ಮತ್ತು ಭಯೋತ್ಪಾದನೆಯ ನಿರ್ಮೂಲನೆಯು ನವ ಭಾರತದ ಹೊಸ ಸಂಕಲ್ಪವಾಗಿದೆ’ ಎಂದು ರಾಜನಾಥ ಸಿಂಗ್ ಹೇಳಿದರು. ‘ಪಾಕಿಸ್ತಾನ ತನ್ನ ನಡವಳಿಕೆಯನ್ನು ಸುಧಾರಿಸಿದರೆ ಆ ದೇಶಕ್ಕೆ ಒಳ್ಳೆಯದು. ನಡವಳಿಕೆ ಸರಿಪಡಿಸದಿದ್ದರೆ ಕಠಿಣ ಶಿಕ್ಷೆಗೆ ಗುರಿಪಡಿಸುವೆವು’ ಎಂದು ಎಚ್ಚರಿಸಿದರು.
‘ಬ್ರಹ್ಮೋಸ್’ ಬಳಕೆ ದೃಢಪಡಿಸಿದ ರಕ್ಷಣಾ ಸಚಿವ ‘ಆಪರೇಷನ್ ಸಿಂಧೂರ’ ಕಾರ್ಯಾಚಣೆಯಲ್ಲಿ ಭಾರತವು ‘ಬ್ರಹ್ಮೋಸ್’ ಸೂಪರ್‌ಸಾನಿಕ್ ಕ್ಷಿಪಣಿ ಬಳಸಿರುವುದರನ್ನು ರಕ್ಷಣಾ ಸಚಿವರು ಇದೇ ಮೊದಲ ಬಾರಿ ದೃಢಪಡಿಸಿದ್ದಾರೆ. ‘ಬ್ರಹ್ಮೋಸ್’ ಕ್ಷಿಪಣಿಯ ಶಕ್ತಿಯನ್ನು ಪಾಕಿಸ್ತಾನವೇ ಒಪ್ಪಿಕೊಂಡಿದೆ. ಈ ಸ್ವದೇಶಿ ನಿರ್ಮಿತ ಕ್ಷಿಪಣಿಯು ಪಾಕಿಸ್ತಾನಕ್ಕೆ ರಾತ್ರಿಯ ಅಂಧಕಾರದಲ್ಲೂ ಬೆಳಕನ್ನು ತೋರಿಸಿದೆ ಎಂದು ಅವರು ಹೇಳಿದರು. ಆಕಾಶ್ ಕ್ಷಿಪಣಿ ವ್ಯವಸ್ಥೆಗಳನ್ನು ಒಳಗೊಂಡ ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಈ ಕಾರ್ಯಾಚರಣೆಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.