ADVERTISEMENT

ಬಿಹಾರ: ಮೂರು ಪಕ್ಷಗಳ ರ‍್ಯಾಲಿ ಇಂದು

ಬಿಜೆಪಿಯಿಂದ ಫೇಸ್‌ಬುಕ್‌ನಲ್ಲಿ ಚುನಾವಣಾ ಪ್ರಚಾರ; ಅರ್‌ಜೆಡಿ, ಎಡರಂಗ ಪ್ರತಿಭಟನೆ

ಏಜೆನ್ಸೀಸ್
Published 6 ಜೂನ್ 2020, 20:13 IST
Last Updated 6 ಜೂನ್ 2020, 20:13 IST

ಪಾಟ್ನಾ: ಚುನಾವಣೆಗೆ ಸನ್ನದ್ಧವಾಗುತ್ತಿರುವ ಬಿಹಾರದಲ್ಲಿ ವಿಭಿನ್ನ ಚಿಂತನೆ, ಸಿದ್ಧಾಂತವನ್ನು ಹೊಂದಿರುವ ಮೂರು ಪಕ್ಷಗಳು ಈ ಭಾನುವಾರ ಒಂದೇ ದಿನ ಪ್ರತ್ಯೇಕವಾಗಿ ಪ್ರತಿಭಟನೆ, ಜಾಥಾ ಹಮ್ಮಿಕೊಂಡಿವೆ. ಬಿಹಾರದಲ್ಲಿ ಈ ವರ್ಷ ಅಕ್ಟೋಬರ್–ನವೆಂಬರ್‌ ತಿಂಗಳಲ್ಲಿ ಚುನಾವಣೆ ನಡೆಯುವ ಸಂಭವವಿದೆ.

ಸಿಪಿಐ, ಸಿಪಿಎಂ ಮತ್ತು ಸಿಪಿಎಂ–ಎಂಎಲ್‌ ಒಳಗೊಂಡ ಎಡರಂಗ, ಬಿಜೆಪಿ ಮತ್ತು ಬಿಹಾರದ ಪ್ರಮುಖ ವಿರೋಧಪಕ್ಷವಾದ ಆರ್‌.ಜೆ.ಡಿ ಹೀಗೆ ರ‍್ಯಾಲಿ ಹಮ್ಮಿಕೊಂಡಿವೆ. ಈ ಪೈಕಿ ಬಿಜೆಪಿ ಮೊದಲಿಗೆ ತಾನು ಡಿಜಿಟಲ್ ಸ್ವರೂಪದಲ್ಲಿ ರ‍್ಯಾಲಿ ನಡೆಸುವುದಾಗಿ ಪ್ರಕಟಿಸಿದೆ.

ಫೇಸ್‌ಬುಕ್‌ ಲೈವ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾತನಾಡಲಿದ್ದಾರೆ. ಈ ಮೂಲಕ ಸುಮಾರು ಒಂದು ಲಕ್ಷ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಬಿಹಾರ ಘಟಕದ ಅಧ್ಯಕ್ಷ ಸಂಜಯ್‌ ಜೈಸ್ವಾಲ್ ತಿಳಿಸಿದರು

ADVERTISEMENT

ಬಿಜೆಪಿಯ ಕೆಲ ನಾಯಕರು ಹಾಗೂ ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್‌ ಅವರ ಆಕ್ಷೇಪದ ನಡುವೆಯೂ ಚುನಾವಣೆಯನ್ನು ನಿತಿಶ್ ಕುಮಾರ್ ಅವರ ನೇತೃತ್ವದಲ್ಲಿಯೇ ಎದುರಿಸುವ ತೀರ್ಮಾನವನ್ನು ಶಾ ಪ್ರತಿಪಾದಿಸುವ ನಿರೀಕ್ಷೆಯಿದೆ.

ಇನ್ನೊಂದೆಡೆ, ಆರ್‌ಜೆಡಿ ಪಕ್ಷವು ಜೂನ್‌ 7ರಂದು ‘ಗರೀಬ್‌ ಅಧಿಕಾರ್ ದಿವಸ್’ ಆಗಿ ಆಚರಿಸಲು ತೀರ್ಮಾನಿಸಿದೆ. ಕೋವಿಡ್‌–19 ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಚುನಾವಣೆ ಪ್ರಚಾರ ಮಾಡುವ ಬಿಜೆಪಿ ನಿಲುವನ್ನು ಖಂಡಿಸುವುದು ಇದರ ಉದ್ದೇಶ.

‘ಜನರಿಗೆ ತಿನ್ನಲು ಊಟವಿಲ್ಲ. ಇಂಥ ಸಂದರ್ಭದಲ್ಲಿ ಅವರು ಡೇಟಾ ತೆಗೆದುಕೊಂಡು ಏನು ಮಾಡಬೇಕು’ ಎಂದು ತೇಜಸ್ವಿ ಪ್ರಶ್ನಿಸಿದರು. ನಿತಿಶ್‌ ಕುಮಾರ್ ಮತ್ತು ಬಿಜೆಪಿ ನಿರಂತರವಾಗಿ ಡಿಜಿಟಲ್‌ ರ್‍ಯಾಲಿ ನಡೆಸುತ್ತಿರುವುದನ್ನು ಅವರು ತರಾಟೆಗೆ ತೆಗೆದುಕೊಂಡರು.

ಉಳಿದಂತೆ, ಎಡರಂಗವು ಜೂನ್‌ 7ರಂದು ‘ವಿಶ್ವಾಸಘಾತ ಧಿಕ್ಕಾರ ದಿನ’ ಆಚರಿಸಲು ನಿರ್ಧರಿಸಿದೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಜೆಪಿ ನಡೆಸುತ್ತಿರುವ ಡಿಜಿಟಲ್ ಸ್ವರೂಪದ ರ‍್ಯಾಲಿಯನ್ನು ಖಂಡಿಸುವುದು ಇದರ ಉದ್ದೇಶ. ‘ಬಿಹಾರದಲ್ಲಿ ಜೋಡಿ ಎಂಜಿನ್‌ನ ಎನ್‌ಡಿಎ ಸರ್ಕಾರ ಎಲ್ಲ ಹಂತದಲ್ಲಿಯೂ ವಿಫಲವಾಗಿದೆ’ ಎಂದು ಸಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸತ್ಯ ನಾರಾಯಣ ಸಿಂಗ್ ಅವರು ರಾಜ್ಯದ ಮೈತ್ರಿ ಸರ್ಕಾರದ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.