ADVERTISEMENT

ಕೊರೊನಾ ಕಾಲದಲ್ಲಿ ಪಿಪಿಇ ಕಿಟ್‌ ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 20:09 IST
Last Updated 9 ಏಪ್ರಿಲ್ 2020, 20:09 IST
ಪಿಪಿಈ ಕಿಟ್ ಧರಿಸಿರುವ ಸಿಬ್ಬಂದಿ
ಪಿಪಿಈ ಕಿಟ್ ಧರಿಸಿರುವ ಸಿಬ್ಬಂದಿ   
""

ಕೊರೊನಾ ವೈರಸ್ ಸೋಂಕಿತರಿಗೆ ಮತ್ತು ಕೋವಿಡ್–19 ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿ, ವೈರಸ್‌ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ವೈಯಕ್ತಿಕ ರಕ್ಷಣಾ ಪರಿಕರಗಳನ್ನು (ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್‌ಮೆಂಟ್‌–ಪಿಪಿಇ) ಧರಿಸುವುದು ಅನಿವಾರ್ಯ. ಆದರೆ, ದೇಶದ ಹಲವು ರಾಜ್ಯಗಳಲ್ಲಿ ಪಿಪಿಇ ಕಿಟ್‌ಗಳ ಕೊರತೆ ಇದೆ. ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್ ಲಭ್ಯವಿರುವಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿ, ಅದನ್ನು ಸರ್ಕಾರ ನಿಭಾಯಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇದರ ಬೆನ್ನಲ್ಲೇ ಪಿಪಿಇ ಕಿಟ್‌ಗಳ ಖರೀದಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ಪಿಪಿಇ ಕಿಟ್‌ಗಳನ್ನು ಔಚಿತ್ಯಪೂರ್ಣವಾಗಿ ಬಳಸಿ ಎಂದೂ ಸರ್ಕಾರ ಹೇಳಿದೆ.

ಲಭ್ಯತೆ ಮತ್ತು ತಯಾರಿಕೆ

‘ಅಗತ್ಯವಿರುವಷ್ಟು ಪಿಪಿಇ ಕಿಟ್‌ಗಳು ದೇಶದಲ್ಲಿ ಇವೆ. ಹೀಗಾಗಿ ಯಾರೂ ಗಾಬರಿಯಾಗಬೇಕಾದ ಅವಶ್ಯಕತೆ ಇಲ್ಲ. ಆದರೆ ಅವನ್ನು ಮನಸೋಇಚ್ಛೆ ಬಳಸಬೇಡಿ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ADVERTISEMENT

‘ವೈದ್ಯಕೀಯ ಸಿಬ್ಬಂದಿಗೆ ಈ ಕಿಟ್‌ಗಳ ಅವಶ್ಯಕತೆ ಇದೆ. ಹೀಗಾಗಿ ಎಲ್ಲರೂ ಇದನ್ನು ಬಳಸಬಾರದು. ವೈದ್ಯಕೀಯ ಸಿಬ್ಬಂದಿ ಸಹ ಇವುಗಳನ್ನು ಸಮಯೋಚಿತವಾಗಿ ಬಳಸಬೇಕು. ಒಬ್ಬ ವೈದ್ಯ ಒಂದು ಗಂಟೆಯಲ್ಲೇ ನಾಲ್ಕು ಮಾಸ್ಕ್‌ಗಳನ್ನು ಬದಲಿಸಬಹುದು. ಹಾಗೆಯೇ ಇಡೀ ದಿನ ಒಂದೇ ಮಾಸ್ಕ ಬಳಸಬಹುದು. ಈ ಕಿಟ್‌ಗಳನ್ನು ರಾಜ್ಯಗಳಿಗೆ ಒದಗಿಸಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ. ಆದರೆ ಈ ಕಿಟ್‌ಗಳನ್ನು ವಿವೇಚನಾಯುತವಾಗಿ ಬಳಸಬೇಕು. ಇದು ರಾಜ್ಯ ಸರ್ಕಾರಗಳ ಜವಾಬ್ದಾರಿಯೂ ಹೌದು’ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದ್ದಾರೆ.

ದೇಶದಲ್ಲಿ 20 ಕಂಪನಿಗಳು ಈ ಕಿಟ್‌ಗಳನ್ನು ತಯಾರಿಸುತ್ತವೆ. ಕೇಂದ್ರ ಸರ್ಕಾರವು 1.7 ಕೋಟಿ ಕಿಟ್‌ಗಳ ಖರೀದಿಗೆ ಮುಂದಾಗಿದೆ ಎಂದು ಲವ ಅಗರ್ವಾಲ್ ಹೇಳಿದ್ದಾರೆ. ಆದರೆ, ಯಾವ ಕಂಪನಿಗಳು ಈ ಕಿಟ್‌ ತಯಾರಿಸುತ್ತವೆ ಮತ್ತು 1.7 ಕೋಟಿ ಕಿಟ್‌ಗಳು ಯಾವಾಗ ಪೂರೈಕೆಯಾಗುತ್ತವೆ ಎಂಬುದರ ಬಗ್ಗೆ ಅವರು ಮಾಹಿತಿ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.