ADVERTISEMENT

ಇಯರ್‌ಫೋನ್ ಹಾಕಿಕೊಂಡು ಹಳಿ ಮೇಲೆ ನಡೆಯುತ್ತಿದ್ದ ಮೂವರ ಮೇಲೆ ರೈಲು ಹರಿದು ಸಾವು

ಪಿಟಿಐ
Published 20 ಆಗಸ್ಟ್ 2022, 9:58 IST
Last Updated 20 ಆಗಸ್ಟ್ 2022, 9:58 IST
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)   

ಲಖನೌ: ಇಯರ್‌ಫೊನ್ ಕಿವಿಗಿಟ್ಟುಕೊಂಡು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೂವರ ಮೇಲೆ ರೈಲು ಹರಿದು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಭದೋಹಿ ಮತ್ತು ಅಹಿಮಾನ್‌ಪುರ್ ಎಂಬಲ್ಲಿ ನಡೆದಿದೆ.

ಭದೋಹಿ ರೈಲ್ವೆ ಸ್ಟೇಷನ್ ಪ್ರದೇಶದಲ್ಲಿ ಇಬ್ಬರು ಇಯರ್‌ಫೊನ್ ಕಿವಿಗಿಟ್ಟುಕೊಂಡು ಹಳಿಯಲ್ಲಿ ನಡೆಯುತ್ತಿದ್ದಾಗ ಅವರ ಮೇಲೆ ರೈಲು ಚಲಿಸಿದೆ. ಅವರಿಬ್ಬರೂ ಮೃತಪಟ್ಟಿದ್ದಾರೆ ಎಂದು ರೈಲ್ವೆ ರಕ್ಷಣಾ ಪಡೆಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಇನ್ನೊಬ್ಬ ವ್ಯಕ್ತಿ ಅಹಿಮಾನ್‌ಪುರ ರೈಲ್ವೆ ನಿಲ್ದಾಣದ ಬಳಿ ರೈಲು ಹರಿದು ಮೃತಪಟ್ಟಿದ್ದಾರೆ. ಮೂವರೂ ಊಟದ ಬಳಿಕ ಹಳಿಯಲ್ಲಿ ವಾಕಿಂಗ್ ಮಾಡುತ್ತಿದ್ದರು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಜಲಾಲ್‌ಪುರದ ಸಿವಿಲ್ ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯ ಅಶೋಕ್ ಕುಮಾರ್ ಸಿಂಗ್ (20) ಹಾಗೂ ಅವರ ಸ್ನೇಹಿತ ಮೋನು (18) ರೈಲು ನಿಲ್ದಾಣದ ಪ್ಲಾಟ್‌ಫಾರಂ ಸಂಖ್ಯೆ 2ರ ಮಧ್ಯದ ಹಳಿಯಲ್ಲಿ ವಾಕಿಂಗ್ ಮಾಡುತ್ತಿದ್ದರು. ಕಿವಿಗೆ ಇಯರ್‌ಫೋನ್ ಹಾಕಿಕೊಂಡಿದ್ದರಿಂದ ಹೌರಾ–ಲಾಲ್‌ಕುವಾನ್ ಎಕ್ಸ್‌ಪ್ರೆಸ್ ಅತಿ ವೇಗದಲ್ಲಿ ಬಂದುದು ಅವರ ಗಮನಕ್ಕೆ ಬಂದಿರಲಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ವಾಕಿಂಗ್ ತೆರಳಿದ್ದವರು ತುಂಬಾ ಹೊತ್ತಾದರೂ ಮನೆಗೆ ಮರಳದಿರುವುದರಿಂದ ಕುಟುಂಬದವರು ಹುಡುಕಾಟ ನಡೆಸಿದ್ದು, ಮೃತದೇಹಗಳು ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ.

ಮತ್ತೊಂದು ಘಟನೆಯಲ್ಲಿ, ದಲ್‌ಪಾತ್‌ಪುರದ ಪಂಕಜ್ ದುಬೆ (30) ಎಂಬುವವರು ವಾರಾಣಸಿ–ಅಲಹಾಬಾದ್ ರೈಲು ಮಾರ್ಗದಲ್ಲಿ ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.