ADVERTISEMENT

Bengaluru Tech Summit | ಆರೋಗ್ಯ, ಕೃಷಿ ತಂತ್ರಜ್ಞಾನದಲ್ಲಿ ಹೂಡಿಕೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2022, 21:19 IST
Last Updated 16 ನವೆಂಬರ್ 2022, 21:19 IST
   

ಬೆಂಗಳೂರು: ದೇಶದಲ್ಲಿ ವೆಂಚರ್‌ ಕ್ಯಾಪಿಟಲ್ (ವಿ.ಸಿ.) ಹೂಡಿಕೆಯು ಎರಡು ವರ್ಷಗಳಿಂದ ಉತ್ತಮ ಬೆಳವಣಿಗೆ ಕಂಡಿದೆ. ಡೀಪ್‌ ಟೆಕ್ನಾಲಜಿ (ಕೃತಕ ಬುದ್ಧಿಮತ್ತೆ, ಐಒಟಿ), ಬ್ಲಾಕ್‌ಚೈನ್‌, ಆರೋಗ್ಯ ತಂತ್ರಜ್ಞಾನ ಮತ್ತು ಕೃಷಿ ತಂತ್ರಜ್ಞಾನದಂತಹ ಹೊಸ ವಲಯಗಳಲ್ಲಿ ಹೆಚ್ಚಿನ ಹೂಡಿಕೆ ಆಗಲಿದೆ ಎನ್ನುವ ಅಭಿಪ್ರಾಯವು ಬೆಂಗಳೂರು ತಂತ್ರಜ್ಞಾನ ಶೃಂಗದ ವಿಚಾರಗೋಷ್ಠಿಯಲ್ಲಿ ವ್ಯಕ್ತವಾಯಿತು.

‘ವೆಂಚರ್‌ ಕ್ಯಾಪಿಟಲ್ಸ್‌ ಲಾಂಗ್ ಟರ್ಮ್‌ ರೋಲ್‌ ಇನ್‌ ಡ್ರೈವಿಂಗ್‌ ಡಿಸ್‌ಪರ್ಸ್ಡ್‌ ಇನೊವೇಷನ್‌’ ವಿಷಯದ ಕುರಿತು ಬುಧವಾರ ವಿಚಾರಗೋಷ್ಠಿ ನಡೆಯಿತು. ಪ್ರಧಾನ ಭಾಷಣ ಮಾಡಿದ ಈವ್‌ಕ್ಯಾಪ್‌ ವೆಂಚರ್ಸ್‌ನ ವ್ಯವಸ್ಥಾಪಕ ಪಾಲುದಾರ ತೇಜ್‌ ಕಪೂರ್‌, ‘2012ರಿಂದ 2022ರವರೆಗಿನ ಹೂಡಿಕೆಯನ್ನು ಗಮನಿಸಿದರೆ, 2021 ಮತ್ತು 2022ರಲ್ಲಿ ಹೂಡಿಕೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಆದರೆ, ಈ ವರ್ಷ ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಅನಿಶ್ಚಿತ ಪರಿಸ್ಥಿತಿಯಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಹೂಡಿಕೆಯಲ್ಲಿ ಇಳಿಕೆ ಆಗಿದೆ’ ಎಂದು ತಿಳಿಸಿದರು.

‘ಡೀಪ್‌ ಟೆಕ್‌ ಇನ್ನೂ ಆರಂಭಿಕ ಹಂತದಲ್ಲಿದೆ. ಹೀಗಾಗಿ ಅಂತಹ ನವೋದ್ಯಮಗಳಲ್ಲಿ ಹೆಚ್ಚಿನ ಹೂಡಿಕೆ ಅಷ್ಟು ಸೂಕ್ತ ಅನ್ನಿಸುತ್ತಿಲ್ಲ. ನಾನು ಹೂಡಿಕೆ ಮಾಡುತ್ತಿರುವ ನವೋದ್ಯಮಗಳಲ್ಲಿ ಎರಡು ಮಾತ್ರವೇ ಡೀಪ್‌ ಟೆಕ್‌ಗಳು ಇವೆ’ ಎಂದು ಐಡಿಯಾಸ್ಪ್ರಿಂಗ್ ಕ್ಯಾಪಿಟಲ್‌ನ ಸ್ಥಾಪಕ ನಾಗಾನಂದ ದೊರೆಸ್ವಾಮಿ ಹೇಳಿದರು. ಆದರೆ, ಪೈ ವೆಂಚರ್ಸ್‌ನ ವ್ಯವಸ್ಥಾಪಕ ನಿರ್ದೇಶಕಿ ರೂಪನ್‌ ಅಲುಖಾ, ‘ಡೀಪ್‌ ಟೆಕ್‌ಗಳು ಉತ್ತಮ ಬೆಳವಣಿಗೆ ಕಾಣುತ್ತಿವೆ. ಅವುಗಳಿಗೆ ಆದ್ಯತೆ ನೀಡುತ್ತಿದ್ದೇವೆ’ ಎಂದರು.

ADVERTISEMENT

ಕ್ಯಾನ್ಸರ್‌ ಪತ್ತೆಗೆ ಹನಿರಕ್ತ ಸಾಕು
ಯಾವುದೇ ವ್ಯಕ್ತಿಯಲ್ಲಿ ಕ್ಯಾನ್ಸರ್‌ ಇದೆಯೇ ಎಂಬುದನ್ನು ಪತ್ತೆ ಮಾಡಲು ಅಂಗಾಂಶವನ್ನು ಬಯಾಪ್ಸಿಗಾಗಿ ಕಳುಹಿಸುವುದು ಚಾಲ್ತಿಯಲ್ಲಿರುವ ವಿಧಾನ. ಪರೀಕ್ಷೆ ಮತ್ತು ಕ್ಯಾನ್ಸರ್‌ ಪತ್ತೆಗೆ ಸಾಕಷ್ಟು ಸಮಯ ಬೇಕಾಗುತ್ತಿತ್ತು. ‘ಲಿಕ್ವಿಡ್‌ ಬಯಾಪ್ಸಿ’ ವಿಧಾನ ಈಗಷ್ಟೇ ಮುಂದುವರೆದ ದೇಶಗಳ ಕೆಲವೇ ಕ್ಯಾನ್ಸರ್‌ ಆಸ್ಪತ್ರೆಗಳಲ್ಲಿ ಕಾಲಿಟ್ಟಿದೆ. ಲಿಕ್ವಿಡ್‌ ಬಯಾಪ್ಸಿ ಎಂದರೆ ರಕ್ತದ ಹನಿಗಳ ಮೂಲಕ ಕ್ಯಾನ್ಸರ್‌ ಪತ್ತೆ ಮಾಡುವುದು. ಕ್ಯಾನ್ಸರ್‌ ಕೋಶಗಳು ರಕ್ತದಲ್ಲಿ ಹರಿಯುತ್ತಿವೆಯೇ ಅಥವಾ ಕ್ಯಾನ್ಸರ್‌ ಗಡ್ಡೆಯ ಕೋಶಗಳ ಡಿಎನ್‌ಎ ರಕ್ತದಲ್ಲಿ ಇದೆಯೇ ಎಂಬುದನ್ನು ಪತ್ತೆ ಮಾಡಲಾಗುವುದು. ಈ ವಿಧಾನದಿಂದ ಆರಂಭದ ಹಂತದಲ್ಲಿಯೇ ಕ್ಯಾನ್ಸರ್‌ ಪತ್ತೆ ಮಾಡಬಹುದು. ಅಷ್ಟೇ ಅಲ್ಲದೆ ಇದಕ್ಕೆ ಯಾವ ರೀತಿಯ ಚಿಕಿತ್ಸೆ ನೀಡಿ ಗುಣಪಡಿಸಬಹುದು ಎಂಬುದನ್ನು ವೈದ್ಯರು ನಿರ್ಧರಿಸಬಹುದು. ಶ್ವಾಸಕೋಶ ಕ್ಯಾನ್ಸರ್‌ ಇದ್ದವರಲ್ಲಿ ಮತ್ತು ವೃದ್ಧರಲ್ಲಿ ಅಂಗಾಂಶವನ್ನು ಪಡೆಯುವುದು ಕಷ್ಟ, ಇಂತಹ ರೋಗಿಗಳಿಗೆ ಲಿಕ್ವಿಡ್‌ ಬಯಾಪ್ಸಿ ಅತ್ಯುತ್ತಮ ವಿಧಾನ.

ಭವಿಷ್ಯದ ಸಾಂಕ್ರಾಮಿಕ ಎದುರಿಸಲು ವಿಶ್ವ ಸಜ್ಜು
ಜಿನೋಮಿಕ್‌ ಕ್ರಾಂತಿಯಿಂದಾಗಿ ಭವಿಷ್ಯದಲ್ಲಿ ಯಾವುದೇ ರೀತಿಯ ಸಾಂಕ್ರಾಮಿಕ ಕಾಲಿಟ್ಟರೂ ಅದನ್ನು ನಿಭಾಯಿಸಲು ಜಗತ್ತು ಸಿದ್ಧವಿದೆ. ಕೋವಿಡ್‌ಗೆ ಅತಿ ತ್ವರಿತಗತಿಯಲ್ಲಿ ಲಸಿಕೆಗಳನ್ನು ಕಂಡು ಹಿಡಿಯಲು ಸಾಧ್ಯವಾಗಿದ್ದು ಜಿನೋಮಿಕ್‌ ತಂತ್ರಜ್ಞಾನದಿಂದ ಎನ್ನುತ್ತಾರೆ ಅಮೆರಿಕಾದ ಇಲ್ಯುಮಿನಿಯಾ ಇಂಕ್‌ನ ಹಿರಿಯ ಉಪಾಧ್ಯಕ್ಷ ಡಾ.ಜಯ್‌ದೀಪ್‌ ಗೋಸ್ವಾಮಿ. ಕೋವಿಡ್‌ ಹರಡಲಾರಂಭಿಸಿದ 60 ದಿನಗಳಲ್ಲಿ ಕೋವಿಡ್‌ ಲಸಿಕೆ ಕಂಡು ಹಿಡಿಯಲಾಯಿತು, 90 ದಿನಗಳಲ್ಲಿ ಫುಡ್ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌ನಿಂದ(ಎಫ್‌ಡಿಎ) ಲಸಿಕೆ ಬಳಕೆಗೆ ಒಪ್ಪಿಗೆ ಸಿಕ್ಕಿತು. ಕೋವಿಡ್‌ನಿಂದಾಗಿ ರೂಪುಗೊಂಡಿರುವ ಸಂಶೋಧನಾ ವ್ಯವಸ್ಥೆ ಮತ್ತು ತಂತ್ರಜ್ಞಾನದಿಂದ ಭವಿಷ್ಯದ ಯಾವುದೇ ಸಾಂಕ್ರಾಮಿಕವನ್ನು ಎದುರಿಸಲು ಜಗತ್ತಿನ ವಿಜ್ಞಾನ ಸಮುದಾಯ ಸಿದ್ಧವಾಗಿದೆ ಎನ್ನುತ್ತಾರೆ ಅವರು.

ಜಿನೋಮಿಕ್‌ ಔಷಧದ ಯುಗ ಆರಂಭ
ಜಿನೋಮಿಕ್‌ ಔಷಧದ (ಮೆಡಿಸಿನ್) ಯುಗ ಆರಂಭವಾಗಿದೆ.

ರೋಗಿಯ ವಂಶವಾಹಿ ಅಥವಾ ಡಿಎನ್‌ಎ ಮತ್ತು ಅವುಗಳು ವ್ಯಕ್ತಿಯ ಆರೋಗ್ಯದ ಜತೆ ಹೇಗೆ ಸ್ಪಂದಿಸುತ್ತವೆ ಎಂಬುದನ್ನು ಅಧ್ಯಯನ ಮಾಡಲಾಗುತ್ತದೆ. ವ್ಯಕ್ತಿಯ ಜೈವಿಕ ಮಾಹಿತಿಯನ್ನು ಬಳಸಿಕೊಂಡು ಆತನ ಆರೈಕೆಯನ್ನು ನಿರ್ಧರಿಸಲಾಗುತ್ತದೆ. ಆ ಬಳಿಕ ರೋಗಿಗೆ ವ್ಯಕ್ತಿಗತವಾಗಿ ಔಷಧ ನೀಡಲಾಗುತ್ತದೆ. ಈಗ ಇರುವಂತೆ ಏಕ ಪ್ರಕಾರದ ಔಷಧವನ್ನು ಕೊಡುವುದು ಕ್ರಮೇಣ ನಿಲ್ಲಬಹುದು. ವ್ಯಕ್ತಿಯ ವಂಶವಾಹಿಗಳ ವ್ಯವಸ್ಥೆಯ ಸಂಪೂರ್ಣ ಅಧ್ಯಯನ ನಡೆಸುವುದರಿಂದ ನಿರ್ದಿಷ್ಟ ಔಷಧಿಯನ್ನು ನಿರ್ಧಿಷ್ಟ ಅವಧಿಯೊಳಗೆ ಪರಿಣಾಮಕಾರಿಯಾಗಿ ನೀಡಬಹುದು. ವಿಶೇಷವಾಗಿ ಮಧುಮೇಹ, ಹೃದ್ರೋಗ, ಕ್ಯಾನ್ಸರ್‌ ಮತ್ತು ಆಸ್ತಮಾ ನಿರ್ವಹಣೆಗೆ ಈ ವಿಧಾನ ಅನುಕೂಲಕಾರಿಎನ್ನುತ್ತಾರೆ ಡಾ.ಜಯ್‌ದೀಪ್‌ ಗೋಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.