ADVERTISEMENT

ಅಚಾತುರ್ಯದಿಂದ ಪಾಕ್‌ಗೆ ಕ್ಷಿಪಣಿ ಉಡಾವಣೆ, ತನಿಖೆಗೆ ಆದೇಶ: ಭಾರತ

ಏಜೆನ್ಸೀಸ್
Published 11 ಮಾರ್ಚ್ 2022, 14:27 IST
Last Updated 11 ಮಾರ್ಚ್ 2022, 14:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ಸೇನೆಯಿಂದ ಅಚಾತುರ್ಯವಾಗಿ ಪಾಕಿಸ್ತಾನದಲ್ಲಿ ಕ್ಷಿಪಣಿ ಉಡಾವಣೆ ಆಗಿತ್ತು ಎಂದು ಭಾರತದ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ. ಅಲ್ಲದೆ ಈ ಘಟನೆ ಬಗ್ಗೆ ರಕ್ಷಣಾ ಇಲಾಖೆ ತೀವ್ರ ವಿಷಾದ ವ್ಯಕ್ತಪಡಿಸಿದೆ.

ಭಾರತ ಕ್ಷಿಪಣಿಯೊಂದನ್ನು ತನ್ನ ದೇಶದತ್ತ ಉಡಾಯಿಸುವ ಮೂಲಕ ವಾಯುಗಡಿ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಪಾಕಿಸ್ತಾನ ಭಾರತದ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದ ಬೆನ್ನಲ್ಲೇ, ಭಾರತ ಸರ್ಕಾರದ ಈ ಹೇಳಿಕೆ ಹೊರಬಿದ್ದಿದೆ.

ಈ ಸಂಬಂಧ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿರುವ ರಕ್ಷಣಾ ಇಲಾಖೆ, 'ಸಾಮಾನ್ಯ ನಿರ್ವಹಣೆ ಹಂತದಲ್ಲಿ ಆಗಿರುವ ತಾಂತ್ರಿಕ ದೋಷದಿಂದಾಗಿ ಬುಧವಾರ ಪಾಕಿಸ್ತಾನದ ಭೂ ಪ್ರದೇಶಕ್ಕೆ ಕ್ಷಿಪಣಿ ಚಿಮ್ಮಿದೆ. ಈ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ' ಎಂದು ಹೇಳಿದೆ.

ADVERTISEMENT

ಪಾಕಿಸ್ತಾನದ ಆತಂಕ:

ಇದಕ್ಕೂ ಮುನ್ನ ಈ ಘಟನೆಗೆ ಸಂಬಂಧಿಸಿದಂತೆ ಗುರುವಾರ ರಾತ್ರಿ ಭಾರತದ ರಾಜತಾಂತ್ರಿಕ ಅಧಿಕಾರಿಯನ್ನು ಕರೆಸಿಕೊಂಡಿದ್ದ ಪಾಕಿಸ್ತಾನ, ಈ ಘಟನೆ ಬಗ್ಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿತ್ತು.ಅಲ್ಲದೆ ಈ ಬಗ್ಗೆ ಪಾರದರ್ಶಕ ಮತ್ತು ವಸ್ತುನಿಷ್ಠ ತನಿಖೆಯಾಗಬೇಕು ಎಂದು ಒತ್ತಾಯಿಸಿತ್ತು.

ಈ ಘಟನೆಯಲ್ಲಿ ಸಾರ್ವಜನಿಕರ ಆಸ್ತಿಗೆ ಹಾನಿಯಾಗಿದೆ. ಅಲ್ಲದೆ ಇಂಥ ಘಟನೆಗಳಿಂದ ಮನುಷ್ಯರಿಗೆ ಅಪಾಯ ಇದ್ದೇ ಇದೆ. ಜತೆಗೆ ಪಾಕಿಸ್ತಾನದ ವಾಯುಗಡಿ ವ್ಯಾಪ್ತಿಯಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಿಗೂ ಅಪಾಯ ತಪ್ಪಿದ್ದಲ್ಲ. ಇದು ಗಂಭೀರ ಸ್ವರೂಪದ ವಿಮಾನಯಾನ ಅಪಘಾತಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.