ಎ.ಐ ಶೃಂಗದಲ್ಲಿ ಪ್ರಧಾನಿ ಮೋದಿ ಭಾಷಣ
–ಪಿಟಿಐ ಚಿತ್ರ
ನವದೆಹಲಿ: ಕೃತಕ ಬುದ್ಧಿಮತ್ತೆಯನ್ನು (ಎ.ಐ) ಪ್ರಜಾಸತಾತ್ಮಕಗೊಳಿಸಬೇಕು; ಅದನ್ನು ಒಳಗೊಳ್ಳುವಿಕೆ ಹಾಗೂ ಸಬಲೀಕರಣಕ್ಕೆ ಸಾಧನವಾಗಬೇಕು, ವಿಶೇಷವಾಗಿ ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಪೂರಕವಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇಂಡಿಯಾ ಎ.ಐ ಶೃಂಗದಲ್ಲಿ ಮಾತನಾಡಿದ ಅವರು, ವಿಶ್ವದ ಆರನೇ ಒಂದು ಜನಸಂಖ್ಯೆ, ವಿಶ್ವದಲ್ಲೇ ಅತಿ ಹೆಚ್ಚು ಯುವಕರು ಹಾಗೂ ಅತಿ ದೊಡ್ಡ ತಂತ್ರಜ್ಞಾನ ಪ್ರತಿಭೆಗಳಿರುವ ಭಾರತದಲ್ಲಿ ಈ ಸಮಾವೇಶ ನಡೆಯುತ್ತಿದೆ ಎಂದರು.
‘ಮಾನವ ಇತಿಹಾಸದಲ್ಲಿ ಎ.ಐ ಒಂದು ಪರಿವರ್ತನಾತ್ಮಕ ಅಧ್ಯಾಯವಾಗಿದೆ. ಭಾರತವು ಎ.ಐ ಕ್ರಾಂತಿಯ ಭಾಗ ಮಾತ್ರವಲ್ಲ, ನಾಯಕತ್ವ ವಹಿಸಿ ರೂಪ ನೀಡುತ್ತಿದೆ’ ಎಂದು ಹೇಳಿದ್ದಾರೆ.
ಸಮಾರಂಭದಲ್ಲಿ ಜಾಗತಿಕ ನಾಯಕರು ಹಾಗೂ ಸಿಇಒಗಳು ಭಾಗಿಯಾಗಿದ್ದರು.
‘ಭಾರತ ತಂತ್ರಜ್ಞಾನವನ್ನು ನಿರ್ಮಿಸುವುದು ಮಾತ್ರವಲ್ಲ, ಅದನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿದೆ. ಕೆಲವರಿಗೆ ಹೊಸ ತಂತ್ರಜ್ಞಾನಗಳ ಬಗ್ಗೆ ಅನುಮಾನವಿದೆ. ಆದರೆ ಯುವ ಪೀಳಿಗೆಯು ಎ.ಐ ಅನ್ನು ಅಳವಡಿಸಿಕೊಳ್ಳುತ್ತಿರುವ ರೀತಿ ಅಭೂತಪೂರ್ವವಾದುದು. ಇಲ್ಲಿನ ಶೃಂಗಸಭೆಯ ಪ್ರದರ್ಶನದ ಬಗ್ಗೆಯೂ ಅಪಾರ ಉತ್ಸಾಹ ವ್ಯಕ್ತವಾಗಿದೆ’ ಎಂದು ಅವರು ಹೇಳಿದ್ದಾರೆ.
‘ಮಾನವ ಇತಿಹಾಸಲ್ಲಿ, ಕೆಲವೊಂದು ತಿರುವುಗಳು ಶತಮಾನಗಳನ್ನು ರೂಪಿಸಿವೆ. ಇಂತಹ ತಿರುವುಗಳು ನಾಗರಿಕತೆಯ ದಿಕ್ಕನ್ನು ನಿರ್ಧರಿಸುತ್ತವೆ ಮತ್ತು ಅಭಿವೃದ್ಧಿಯ ವೇಗವನ್ನು ಬದಲಾಯಿಸುತ್ತವೆ. ಇತಿಹಾಸದಲ್ಲಿ ಕೃತಕ ಬುದ್ಧಿಮತ್ತೆಯು ಅಂತಹ ಒಂದು ದೊಡ್ಡ ಪರಿವರ್ತನೆಯಾಗಿದೆ‘ ಎಂದು ಅವರು ಹೇಳಿದ್ದಾರೆ.
ನಾಗರಿಕತೆಯನ್ನು ಬದಲಿಸುವ ಮತ್ತು ಅಭಿವೃದ್ಧಿಯ ವೇಗವನ್ನು ಪರಿವರ್ತಿಸುವ ಶಕ್ತಿ ಅದಕ್ಕಿದೆ. ಇತಿಹಾಸದಲ್ಲಿ ಕೃತಕ ಬುದ್ಧಿಮತ್ತೆಯು ಅಂತಹ ಒಂದು ದೊಡ್ಡ ಬದಲಾವಣೆಯಾಗಿದೆ ಎಂದಿದ್ದಾರೆ.
‘ಭಾರತ್ ಮಂಟಪ’ದಲ್ಲಿ ನಡೆಯುತ್ತಿರುವ ಈ ಶೃಂಗಸಭೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ, ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸನಾಯಕ, ಭೂತಾನ್ ಪ್ರಧಾನಿ ತ್ಶೆರಿಂಗ್ ಟೋಬ್ಗೇ, ಮಾರಿಷಸ್ ಪ್ರಧಾನಿ ನವೀನ್ ಚಂದ್ರ ರಾಮ್‌ಗೂಲಂ, ಕ್ರೊಯೇಷಿಯಾ ಪ್ರಧಾನಿ ಆಂಡ್ರೆಜ್ ಪ್ಲೆಂಕೊವಿಚ್, ಸರ್ಬಿಯಾ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್, ಸೀಶೆಲ್ಸ್ ಉಪಾಧ್ಯಕ್ಷ ಸೆಬಾಸ್ಟಿಯನ್ ಪಿಲ್ಲೆ, ಎಸ್ಟೋನಿಯಾ ಅಧ್ಯಕ್ಷ ಅಲರ್ ಕರಿಸ್ ಮತ್ತು ಫಿನ್ಲೆಂಡ್ ಪ್ರಧಾನಿ ಪೆಟ್ಟೇರಿ ಒರ್ಪೋ ಭಾಗವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.