ADVERTISEMENT

97 ತೇಜಸ್ ಜೆಟ್, 150ಕ್ಕೂ ಅಧಿಕ ಪ್ರಚಂಡ ಹೆಲಿಕಾಪ್ಟರ್ ಖರೀದಿಗೆ ಕೇಂದ್ರದ ಒಪ್ಪಿಗೆ

ಪಿಟಿಐ
Published 30 ನವೆಂಬರ್ 2023, 10:44 IST
Last Updated 30 ನವೆಂಬರ್ 2023, 10:44 IST
<div class="paragraphs"><p>ತೇಜಸ್ ಲಘು ಯುದ್ಧ ವಿಮಾನ</p></div>

ತೇಜಸ್ ಲಘು ಯುದ್ಧ ವಿಮಾನ

   

ನವದೆಹಲಿ: ಸಶಸ್ತ್ರ ಪಡೆಗಳ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ರಕ್ಷಣಾ ಖರೀದಿ ಪರಿಷತ್ತು (ಡಿಎಸಿ), ₹2.23 ಲಕ್ಷ ಕೋಟಿ ವೆಚ್ಚದಲ್ಲಿ ವಿವಿಧ ರಕ್ಷಣಾ ಪರಿಕರಗಳ ಖರೀದಿಗೆ ಗುರುವಾರ ಅನುಮೋದನೆ ನೀಡಿದೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ನಡೆದ ಡಿಎಸಿ ಸಭೆಯು, 97 ‘ತೇಜಸ್‌’ ಲಘು ಯುದ್ಧ ವಿಮಾನಗಳು ಹಾಗೂ 156 ‘ಪ್ರಚಂಡ’ ಯುದ್ಧಹೆಲಿಕಾಪ್ಟರ್‌ಗಳನ್ನು ಖರೀದಿಸಲು ಒಪ್ಪಿಗೆ ನೀಡಿದೆ.

ADVERTISEMENT

ಒಟ್ಟು ವೆಚ್ಚ ₹ 2.23 ಲಕ್ಷ ಕೋಟಿ ಪೈಕಿ ಶೇ 98ರಷ್ಟು ಮೊತ್ತದಷ್ಟು ರಕ್ಷಣಾ ಸಾಮಗ್ರಿಗಳನ್ನು ದೇಶೀಯ ಉದ್ದಿಮೆಗಳಿಂದ ಖರೀದಿ ಮಾಡಲಾಗುತ್ತದೆ. ಈ ಕ್ರಮವು, ದೇಶೀಯ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿ (ಆತ್ಮನಿರ್ಭರತೆ) ಆಗುವ ಗುರಿ ಸಾಧನೆಗೆ ಉತ್ತೇಜನ ನೀಡಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಸುಖೋಯ್‌–30 ಯುದ್ಧ ವಿಮಾನಗಳನ್ನು ಮೇಲ್ದರ್ಜಗೇರಿಸುವ ವಾಯುಪಡೆಯ ಪ್ರಸ್ತಾವನೆಗೂ ಡಿಎಸಿ ಅನುಮೋದನೆ ನೀಡಿದೆ. ಈ ಯುದ್ಧವಿಮಾನಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯವನ್ನು ಎಚ್‌ಎಎಲ್‌ ಮಾಡಲಿದೆ.

ಎರಡು ಬಗೆಯ ಟ್ಯಾಂಕ್‌ ಪ್ರತಿಬಂಧಕ ವ್ಯವಸ್ಥೆಗಳ (ಎಡಿಎಂ ಟೈಪ್‌ 2 ಹಾಗೂ 3) ಖರೀದಿ, ಆಟೊಮ್ಯಾಟಿಕ್‌ ಟಾರ್ಗೆಟ್‌ ಟ್ರ್ಯಾಕರ್ (ಎಟಿಟಿ), ಟಿ–90 ಟ್ಯಾಂಕ್‌ಗಳಿಗೆ ಡಿಜಿಟಲ್ ಬಸಾಲ್ಟಿಕ್‌ ಕಂಪ್ಯೂಟರ್‌ (ಡಿಬಿಸಿ) ಹಾಗೂ ನೌಕಾಪಡೆಗಾಗಿ ಮಧ್ಯಮ ವ್ಯಾಪ್ತಿಯ ಯುದ್ಧನೌಕೆ ಪ್ರತಿಬಂಧಕ ಕ್ಷಿಪಣಿಗಳ (ಎಂಆರ್‌ಎಎಸ್‌ಎಚ್‌ಎಂ) ಖರೀದಿಗೂ ಡಿಎಸಿ ಅನುಮೋದನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.