ADVERTISEMENT

ಪಾಕ್‌ ಹೈಕಮಿಷನ್‌ ಸಿಬ್ಬಂದಿ ಸಂಖ್ಯೆ ಅರ್ಧಕ್ಕೆ ಇಳಿಸಲು ಭಾರತ ಸೂಚನೆ

ಪಿಟಿಐ
Published 23 ಜೂನ್ 2020, 14:42 IST
Last Updated 23 ಜೂನ್ 2020, 14:42 IST
ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ ಕಚೇರಿ
ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ ಕಚೇರಿ   

ನವದೆಹಲಿ: ಪಾಕಿಸ್ತಾನದ ಜತೆಗಿನ ರಾಜತಾಂತ್ರಿಕ ಸಂಬಂಧವನ್ನು ಗಣನೀಯವಾಗಿ ಕುಗ್ಗಿಸಲು ಭಾರತ ನಿರ್ಧರಿಸಿದೆ. ಭಾರತದಲ್ಲಿರುವ ಆ ದೇಶದ ಹೈಕಮಿಷನ್‌ ಕಚೇರಿಯ ಸಿಬ್ಬಂದಿಯನ್ನು ಏಳು ದಿನಗಳೊಳಗೆ ಅರ್ಧದಷ್ಟು ಕಡಿತ ಮಾಡಲು ಸೂಚಿಸಿದೆ. ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನ್‌ ಕಚೇರಿಯ ಸಿಬ್ಬಂದಿಯ ಸಂಖ್ಯೆಯೂ ಇದೇ ಪ್ರಮಾಣದಲ್ಲಿ ಕಡಿತ ಆಗಲಿದೆ.

ಹೈಕಮಿಷನ್‌ನಲ್ಲಿ ಇರುವ ಅಧಿಕಾರಿಗಳು ಗೂಢಚರ್ಯೆಯಲ್ಲಿ ತೊಡಗಿದ್ದಾರೆ ಮತ್ತು ಭಯೋತ್ಪಾದಕ ಸಂಘಟನೆಗಳ ಜತೆಗೆ ನಂಟು ಹೊಂದಿದ್ದಾರೆ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. ಪಾಕಿಸ್ತಾನ ಹೈಕಮಿಷನ್‌ ಮುಖ್ಯಸ್ಥರನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಸಿ, ಸರ್ಕಾರದ ನಿರ್ಧಾರವನ್ನು ತಿಳಿಸಲಾಗಿದೆ.

‘ಪಾಕಿಸ್ತಾನದ ರಾಜತಾಂತ್ರಿಕ ಮತ್ತು ಕಾನ್ಸಲ್‌ ಅಧಿಕಾರಿಗಳ ವರ್ತನೆಯು ವಿಯೆನ್ನಾ ಒಪ್ಪಂದ ಮತ್ತು ಇತರ ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿ ಇಲ್ಲ. ಅದರ ಬದಲಿಗೆ, ಗಡಿಯಾಚೆಯಿಂದ ನಡೆಯುವ ಹಿಂಸಾಚಾರ ಮತ್ತು ಭಯೋತ್ಪಾದನೆಗೆ ಬೆಂಬಲ ನೀಡುವ ಪಾಕಿಸ್ತಾನದ ನೀತಿಗೆ ಪೂರಕವಾಗಿದೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ADVERTISEMENT

ಹೈಕಮಿಷನ್‌ ಅಧಿಕಾರಿಗಳ ಇಂತಹ ವರ್ತನೆ ಬಗ್ಗೆ ಹಲವು ಬಾರಿ ಕಳವಳ ವ್ಯಕ್ತಪಡಿಸಲಾಗಿದೆ. ಹಾಗಿದ್ದರೂ ಯಾವುದೇ ಬದಲಾವಣೆ ಆಗಿಲ್ಲ. ಗೂಢಚರ್ಯೆ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡುವ ವರ್ತನೆ ಮುಂದುವರಿದಿದೆ. ಇಂತಹ ಚಟುವಟಿಕೆಯಲ್ಲಿ ತೊಡಗಿದ್ದ ಇಬ್ಬರು ಅಧಿಕಾರಿಗಳು ಸಿಕ್ಕಿಬಿದ್ದಿದ್ದರು. ಅವರನ್ನು ಮೇ 31ರಂದು ಹಿಂದಕ್ಕೆ ಕಳುಹಿಸಲಾಗಿದೆ. ಇದು ಒಂದು ಉದಾಹರಣೆ ಮಾತ್ರ ಎಂದು ಪಾಕಿಸ್ತಾನ ಹೈಕಮಿಷನ್‌ ಮುಖ್ಯಸ್ಥರಿಗೆ ತಿಳಿಸಲಾಗಿದೆ.

ಜಮ್ಮು–ಕಾಶ್ಮೀರದ ವಿಶೇಷಾಧಿಕಾರವನ್ನು ಭಾರತವು ಕಳೆದ ವರ್ಷ ರದ್ದುಪಡಿಸಿದ ಬಳಿಕ, ಭಾರತದ ಹೈಕಮಿಷನರ್‌ ಅವರನ್ನು ಪಾಕಿಸ್ತಾನವು ಉಚ್ಚಾಟಿಸಿತ್ತು.

ಕಿರುಕುಳ ವೃತ್ತಾಂತ

ರಾಜತಾಂತ್ರಿಕ ಹೊಣೆಯನ್ನು ನ್ಯಾಯಬದ್ಧವಾಗಿ ನಿರ್ವಹಿಸುತ್ತಿರುವ ಭಾರತೀಯ ಹೈಕಮಿಷನ್‌ನ ಅಧಿಕಾರಿಗಳಿಗೆ ಪಾಕಿಸ್ತಾನದಲ್ಲಿ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

‘ಭಾರತದ ಇಬ್ಬರು ಅಧಿಕಾರಿಗಳನ್ನು ಬಂದೂಕು ತೋರಿಸಿ ಅಪಹರಿಸಲಾಗಿತ್ತು. ಅಧಿಕಾರಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಕಿರುಕುಳ ನೀಡಿಕೆಯಲ್ಲಿ ಪಾಕಿಸ್ತಾನವು ಯಾವ ಮಟ್ಟಕ್ಕೆ ಇಳಿದಿದೆ ಎಂಬುದಕ್ಕೆ ಇದು ಸೂಚನೆ’ ಎಂದು ಹೇಳಲಾಗಿದೆ.

‘ಪಾಕಿಸ್ತಾನದ ಆಧಿಕಾರಿಗಳು ಯಾವ ರೀತಿ ಅನಾಗರಿಕವಾಗಿ ನಡೆದುಕೊಂಡರು ಎಂಬುದರ ಸ್ಪಷ್ಟ ಚಿತ್ರಣವನ್ನು ಇದೇ 22ರಂದು ಭಾರತಕ್ಕೆ ಹಿಂದಿರುಗಿದ ಅಧಿಕಾರಿಗಳು ನೀಡಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.