ADVERTISEMENT

ವಡೋದರಾ ಸೇತುವೆ ಕುಸಿಯುವ ಮೊದಲು ಭಾರೀ ಸ್ಫೋಟದ ಶಬ್ದ: ಬದುಕುಳಿದವರ ಅನುಭವದ ಮಾತು

ಏಜೆನ್ಸೀಸ್
Published 11 ಜುಲೈ 2025, 7:08 IST
Last Updated 11 ಜುಲೈ 2025, 7:08 IST
<div class="paragraphs"><p>ಗುಜರಾತ್‌ನ ವಡೋದರಾ ಜಿಲ್ಲೆಯ ಪಾದರಾ ಬಳಿ ಕುಸಿದ ಸೇತುವೆಯಿಂದಾಗಿ ನದಿಪಾಲಾದ ವಾಹನಗಳಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ</p></div>

ಗುಜರಾತ್‌ನ ವಡೋದರಾ ಜಿಲ್ಲೆಯ ಪಾದರಾ ಬಳಿ ಕುಸಿದ ಸೇತುವೆಯಿಂದಾಗಿ ನದಿಪಾಲಾದ ವಾಹನಗಳಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ

   

ಪಿಟಿಐ ಚಿತ್ರ

ವಡೋದರಾ: ‘ಗುಜರಾತ್‌ನ ವಡೋದರಾ ಜಿಲ್ಲೆಯ ಪಾದರಾದಲ್ಲಿ ಹರಿಯುವ ಮಹಿಸಾಗರ ನದಿಗೆ ಕಟ್ಟಲಾಗಿದ್ದ ‘ಗಂಭೀರ’ ಸೇತುವೆ ಕುಸಿತಕ್ಕೂ ಮೊದಲು ಭಾರೀ ಸ್ಫೋಟದ ಶಬ್ದ ಕೇಳಿಬಂತು’ ಎಂದು ದುರಂತದಲ್ಲಿ ಬದುಕುಳಿದವರು ಹೇಳಿದ್ದಾರೆ.

ADVERTISEMENT

ಬುಧವಾರ ಬೆಳಿಗ್ಗೆ 7.30ಕ್ಕೆ ಸಂಭವಿಸಿದ ಸೇತುವೆ ಕುಸಿತ ದುರಂತದಲ್ಲಿ 15 ಜನ ಮೃತಪಟ್ಟಿದ್ದಾರೆ. ಕೆಲವರು ಪವಾಡದಂತೆ ಬದುಕುಳಿದಿದ್ದಾರೆ. 23 ಪಿಲ್ಲರ್‌ಗಳಿರುವ 1985ರಲ್ಲಿ ನಿರ್ಮಾಣವಾದ ಸೇತುವೆಯ ಮಧ್ಯಭಾಗದ 10ರಿಂದ 15 ಮೀಟರ್‌ ಸ್ಲಾಬ್‌ ಕುಸಿದಿತ್ತು. ಇದರಲ್ಲಿ ಟ್ರಕ್‌, ವ್ಯಾನ್, ಕಾರು, ಆಟೊರಿಕ್ಷಾ ಹಾಗೂ ದ್ವಿಚಕ್ರ ವಾಹನಗಳು ಬಿದ್ದಿದ್ದವು. ವಿಪತ್ತು ನಿರ್ವಹಣಾ ತಂಡವು ನಿರಂತರ ಶೋಧ ನಡೆಸಿ ಹಲವು ಮೃತದೇಹಗಳನ್ನು ಹೊರಕ್ಕೆ ತೆಗೆದಿವೆ.

ಘಟನೆಯಲ್ಲಿ ಬದುಕುಳಿದ ಅನ್ವರ್‌ಭಾಯಿ ಎಂಬುವವರು ಮಾತನಾಡಿ, ‘ನಮ್ಮ ವ್ಯಾನ್‌ ಮುಂದಕ್ಕೆ ಸಾಗುತ್ತಿದ್ದಂತೆ ಹಿಂದಿನಿಂದ ಭಾರೀ ಸ್ಪೋಟದ ಶಬ್ದ ಕೇಳಿಬಂತು. ಮುಂದೆ ಸಾಗುತ್ತಿದ್ದ ವ್ಯಾನ್‌, ಹಿಂದಕ್ಕೆ ಚಲಿಸಿ ನಂತರ ತಲೆಕೆಳಗಾಗಿ ಮಹಿಸಾಗರ ನದಿಗೆ ಬಿತ್ತು. ಹಿಂದಕ್ಕೆ ಚಲಿಸಲಾರಭಿಸಿದ ಹಂತದಲ್ಲೇ ವಾಹನದಿಂದ ಹೊರಕ್ಕೆ ಹಾರಿದೆವು’ ಎಂದಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಘಟನೆಗೆ ಸಾಕ್ಷಿ ಎಂಬಂತಿದ್ದ ಸೇತುವೆಯ ಕುಸಿದ ಭಾಗದಲ್ಲಿ ಸಿಲುಕಿಕೊಂಡಿದ್ದ ಟ್ರಕ್‌ ಅನ್ನು ತೆರವುಗೊಳಿಸಲಾಗಿದೆ. ಈವರೆಗೂ ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆ ಎಂದೆನ್ನಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಅಧಿಕಾರಿ ಸುರೇಂದರ್ ಸಿಂಗ್ ಎಎನ್‌ಐಗೆ ತಿಳಿಸಿದ್ದಾರೆ.

ದುರಂತದಲ್ಲಿ ನದಿಗೆ ಬಿದ್ದ ಕಾರಿನಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಸೋನಾಲ್‌ಬೆನ್‌ ಪಧಿಯಾರ್‌ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 

‘ಸೇತುವೆ ಕುಸಿಯುತ್ತಿದ್ದಂತೆ ಕಾರಿನ ಮುಂಭಾಗ ನೆಲಮುಖವಾಗಿ ನದಿಗೆ ಬಿತ್ತು. ಮಗನನ್ನು ಉಳಿಸುವಂತೆ ಅಂಗಲಾಚಿದೆ’ ಎಂದು ವಿವರಿಸಿದ್ದಾರೆ. ಘಟನೆಯಲ್ಲಿ ಸೋನಾಲ್‌ಬೆನ್‌ ತಮ್ಮ ಕುಟುಂಬದ ಆರು ಸದಸ್ಯರನ್ನು ಕಳೆದುಕೊಂಡಿದ್ದಾರೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿ ಸ್ಕೂಟರ್‌ನಲ್ಲಿ ಮರಳುತ್ತಿದ್ದ ದಿಲೀಪ್ ಸಿನ್ಹಾ ಪಧಿಯಾರ್‌ ಅವರು ಅಪಘಾತದಲ್ಲಿ ಪಾರಾದ ಮತ್ತೊಬ್ಬ ವ್ಯಕ್ತಿ. 

‘ಎಲ್ಲಾ ವಾಹನಗಳು ಸೇತುವೆ ಮೇಲೆ ಎಂದಿನಂತೆಯೇ ಸಾಗುತ್ತಿದ್ದವು. ಸೇತುವೆ ‍ಪ್ರವೇಶಿಸಿ 100 ಮೀಟರ್‌ ಸಾಗಿದ್ದೆ. ಸೇತುವೆ ಭಾಗ ಕುಸಿಯುವ ಮೊದಲು ಬೃಹತ್ ಕಂಪನ ಉಂಟಾಯಿತು. ತಕ್ಷಣ ಸೇತುವೆಯಿಂದ ಕೆಳಕ್ಕೆ ಬಿದ್ದೆ. ಒಂದು ಕಬ್ಬಿಣದ ಸರಳು ನನ್ನನ್ನು ಹಿಡಿದಿತ್ತು. ಅಲ್ಲಿಯೇ ನೇತಾಡುತ್ತಿದ್ದೆ. ಸ್ಥಳೀಯ ಮೀನುಗಾರರೊಬ್ಬರು ಬಂದು ನನ್ನನ್ನು ಬದುಕಿಸಿದರು’ ಎಂದು ವಿವರಿಸಿದ್ದಾರೆ.

‘ನನ್ನ ಸ್ಕೂಟರ್‌ನಂತೆ ಹಲವು ವಾಹನಗಳು ಕೆಳಕ್ಕೆ ಬಿದ್ದವು. ಇದು ಭೂಕಂಪವೇ ಎಂದೆನಿಸಿತು’ ಎಂದು ದಿಲೀಪ್ ನೆನಪಿಸಿಕೊಂಡಿದ್ದಾರೆ.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯ ಪಂಚಾಯ್ತಿ ಅಧ್ಯಕ್ಷ ಅಭೇ ಸಿನ್ಹಾ ಪಾರ್ಮರ್‌, ‘ಸೇತುವೆ ಉತ್ತಮ ಸ್ಥಿತಿಯಲ್ಲಿ ಇರಲಿಲ್ಲ. ಮೇಲೆ ಹಲವು ಗುಂಡಿಗಳಿದ್ದವು. ಸೇತುವೆಯಿಂದ ಕಬ್ಬಿಣದ ಸರಳುಗಳು ಹೊರಕ್ಕೆ ಚಾಚಿದ್ದವು. ಇದನ್ನು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು’ ಎಂದು ಆರೋಪಿಸಿದ್ದಾರೆ.

ಗುಜರಾತ್ ಸರ್ಕಾರದ ವಕ್ತಾರರೂ ಆದ ಆರೋಗ್ಯ ಸಚಿವ ಋಷಿಕೇಶ್ ಪಟೇಲ್ ಮಾಹಿತಿ ನೀಡಿ, ‘ಸೇತುವೆಯನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುತ್ತಿತ್ತು. ಅದಕ್ಕೆ ಪೂರಕವಾದ ದುರಸ್ತಿ ಕಾರ್ಯವನ್ನೂ ನಡೆಸಲಾಗಿತ್ತು. ಹಳೆಯದನ್ನು ಕೆಡವಿ, ಹೊಸ ಸೇತುವೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಒಪ್ಪಿಗೆ ಸೂಚಿಸಿದ್ದರು. ಶೀಘ್ರದಲ್ಲಿ ಟೆಂಡರ್‌ ಕರೆಯುವ ಪ್ರಕ್ರಿಯೆಯಲ್ಲಿದ್ದೆವು’ ಎಂದು ತಿಳಿಸಿದ್ದಾರೆ.

137 ವರ್ಷಗಳಷ್ಟು ಹಳೆಯದಾದ ತೂಗು ಸೇತುವೆಯು 2022ರಲ್ಲಿ ಕುಸಿದಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಘಟನೆಯಲ್ಲಿ 135 ಜನ ಮೃತಪಟ್ಟಿದ್ದರು. ಪ್ರವಾಸಿಗರನ್ನು ಸೆಳೆಯುತ್ತಿದ್ದ ಮೊರ್ಬಿ ಸೇತುವೆ ದುರಸ್ತಿಯಾಗಿ ಕೆಲವೇ ದಿನಗಳಲ್ಲಿ ಕುಸಿದಿದ್ದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.