ADVERTISEMENT

ಅಕ್ರಮ ಕಾಲ್‌ಸೆಂಟರ್‌ ಮೂಲಕ ವಂಚನೆ

ಪಿಟಿಐ
Published 10 ಫೆಬ್ರುವರಿ 2026, 16:17 IST
Last Updated 10 ಫೆಬ್ರುವರಿ 2026, 16:17 IST
   

ಹೈದರಾಬಾದ್‌: ಅಕ್ರಮ ಕಾಲ್‌ಸೆಂಟರ್‌ಗಳು ಅಮೆರಿಕ ಸರ್ಕಾರದ ಏಜೆನ್ಸಿಗಳ ಅಧಿಕಾರಿಗಳು ಅಥವಾ ಖಾಸಗಿ ಕಂಪನಿಗಳ ಪ್ರತಿನಿಧಿಗಳ ಸೋಗಿನಲ್ಲಿ ಕರೆ ಮಾಡಿ ಜನರಲ್ಲಿ ಭಯ ಹುಟ್ಟಿಸುತ್ತಿರುವುದು ಜಾರಿ ನಿರ್ದೇಶನಾಲಯದ (ಇ.ಡಿ) ಹೈದರಾಬಾದ್‌ ವಲಯ ಕಚೇರಿ ನಡೆಸಿರುವ ತನಿಖೆಯಲ್ಲಿ ಪತ್ತೆಯಾಗಿದೆ.

ಈ ಕಾಲ್‌ ಸೆಂಟರ್‌ಗಳು ಸಾಲದ ಕಂತುಗಳನ್ನು ಪಾವತಿಸಿಲ್ಲ, ತೆರಿಗೆ ಪಾವತಿಸಿಲ್ಲ ಎಂದು ಆರೋಪಿಸಿ ಜನರಿಗೆ ಬೆದರಿಕೆವೊಡ್ಡುತ್ತಿವೆ. ಗಿಫ್ಟ್‌ ಕಾರ್ಡ್‌ ಖರೀದಿ ಮಾಡುವಂತೆ ಅಥವಾ ಆನ್‌ಲೈನ್‌ ಮೂಲಕ ಹಣ ಪಾವತಿಸುವಂತೆ ಒತ್ತಾಯಿಸುತ್ತಿವೆ ಎಂದು ಇ.ಡಿ ತಿಳಿಸಿದೆ.

ಅಹಮದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಶೋಧದಲ್ಲಿ, ಪ್ರಮುಖ ಆರೋಪಿಯ ಬಳಿ 12,000 ಅಮೆರಿಕನ್‌ ಡಾಲರ್‌ ಮೌಲ್ಯಕ್ಕೆ ಸಮನಾದ ಕ್ರಿಪ್ಟೊಕರೆನ್ಸಿ ಇರುವುದನ್ನು ಪತ್ತೆ ಮಾಡಿದೆ. ಅನಧಿಕೃತ ₹13.5 ಲಕ್ಷ ನಗದನ್ನೂ ಪಶಕ್ಕೆ ಪಡೆದಿದೆ.

ADVERTISEMENT

ಪ್ರಮುಖ ಆರೋಪಿಯನ್ನು ಮಹಮ್ಮದ್ ಅನ್ಸಾರಿ ಅಲಿಯಾಸ್‌ ಮೊಹಮದ್ ಇರ್ಫಾನ್ ಅನ್ಸಾರಿ, ಅಕಿಬ್‌ ಗುಲಾಮ್‌ರಸೌಲ್‌ ಘಾಂಚಿ, ವಿಕಾಸ್‌ ಎನ್‌.ನಿಮಾರ್‌, ದಿವ್ಯಾಂಗ ರಾವಲ್ ಮತ್ತು ಪ್ರದೀಪ್ ವಿ.ರಾತೋಡ್‌ ಎಂದು ಗುರುತಿಸಲಾಗಿದೆ.

ಹಲವು ಆರೋಪಿಗಳು ಮತ್ತು ಅವರ ಸಹಚರರು ಸೇರಿ ವಿವಿಧ ಪ್ರದೇಶಗಳಿಂದ ಅಕ್ರಮ ಕಾಲ್‌ಸೆಂಟರ್‌ಗಳನ್ನು ನಡೆಸುತ್ತಿದ್ದರು. ಒಂದೇ ರೀತಿಯ ತಾಂತ್ರಿಕ ಮೂಲಸೌಕರ್ಯ, ತರಬೇತಿ ಪಡೆದ ಮಾನವ ಸಂಪನ್ಮೂಲ, ಕಾಲ್‌ ಸ್ಕ್ರಿಪ್ಟ್‌ ಮೂಲಕ ಅವುಗಳು ಕಾರ್ಯನಿರ್ವಹಿಸುತ್ತಿದ್ದವು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಶೋಧದ ವೇಳೆ ದಾಖಲೆಗಳು, ಡಿಜಿಟಲ್‌ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಗೆ ಸೇರಿದ 31 ಬ್ಯಾಂಕ್‌ ಖಾತೆಗಳು ಮತ್ತು ಬ್ಯಾಂಕ್‌ ಲಾಕರ್‌ವೊಂದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.