
ನವದೆಹಲಿಯ ‘ಹೈದರಾಬಾದ್ ಹೌಸ್’ನಲ್ಲಿ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಜತೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಾತುಕತೆ ನಡೆಸಿದರು
–ಪಿಟಿಐ ಚಿತ್ರ
ನವದೆಹಲಿ: ಯುರೇನಿಯಂ ಮತ್ತು ನಿರ್ಣಾಯಕ ಖನಿಜಗಳ ಪೂರೈಕೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ಮಹತ್ವದ ಒಪ್ಪಂದಗಳಿಗೆ ಸೋಮವಾರ ಸಹಿ ಮಾಡಿವೆ. ಇದಲ್ಲದೆ ಉಭಯ ದೇಶಗಳು ಶೀಘ್ರದಲ್ಲಿಯೇ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು ಅಂತಿಮಗೊಳಿಸುವುದಾಗಿ ತಿಳಿಸಿವೆ.
ಭಾರತ ಪ್ರವಾಸದಲ್ಲಿರುವ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದ ಬಳಿಕ ಈ ಮಹತ್ವದ ಒಪ್ಪಂದಗಳಿಗೆ ಬರಲಾಗಿದೆ.
ದ್ವಿಪಕ್ಷೀಯ ವಾರ್ಷಿಕ ವ್ಯಾಪಾರವನ್ನು 2030ರವೇಳೆಗೆ ₹4.58 ಲಕ್ಷ ಕೋಟಿಯಷ್ಟು (50 ಶತಕೋಟಿ ಡಾಲರ್) ವಿಸ್ತರಿಸುವ ಗುರಿ ಸೇರಿದಂತೆ ಎರಡೂ ದೇಶಗಳ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಉಭಯ ನಾಯಕರು ಹೊಸ ಸ್ವರೂಪವನ್ನು ಶೀಘ್ರದಲ್ಲಿಯೇ ಅಂತಿಮಗೊಳಿಸಿದ್ದಾರೆ.
ರಕ್ಷಣಾ, ನಿರ್ಣಾಯಕ ತಂತ್ರಜ್ಞಾನ, ಪರಮಾಣು ಸ್ಥಾವರಗಳು, ಶಿಕ್ಷಣ, ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಸಲು ಇಬ್ಬರೂ ನಾಯಕರು ಬದ್ಧತೆ ವ್ಯಕ್ತಪಡಿಸಿದರು. ಯುರೇನಿಯಂ ಪೂರೈಕೆ ಒಪ್ಪಂದದ ಅಡಿಯಲ್ಲಿ ಭಾರತದ ನಾಗರಿಕ ಪರಮಾಣು ಇಂಧನ ವಲಯವನ್ನು ಕೆನಡಾ ಬೆಂಬಲಿಸಿದೆ.
‘ನಾಗರಿಕ ಪರಮಾಣ ಇಂಧನ ಕ್ಷೇತ್ರದಲ್ಲಿ ನಾವು ದೀರ್ಘಾವದಿಯ ಯುರೇನಿಯಂ ಪೂರೈಕೆಗಾಗಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಸಣ್ಣ ಮತ್ತು ಸುಧಾರಿತ ರಿಯಾಕ್ಟರ್‌ಗಳ ಮೇಲೂ ನಾವು ಒಟ್ಟಿಗೆ ದುಡಿಯಲಿದ್ದೇವೆ’ ಎಂದರು.
‘ಭಾರತ– ಕೆನಡಾ ನಡುವಿನ ಈ ಎಲ್ಲ ಒಪ್ಪಂದಗಳು ಹೊಸ, ಸಮೃದ್ಧ ಸಂಬಂಧದ ಆರಂಭವನ್ನು ತೋರಿಸುತ್ತದೆ. ಇದು ಎರಡೂ ದೇಶಗಳ ನಡುವೆ ಭವಿಷ್ಯದಲ್ಲೂ ವ್ಯವಹಾರ ವೃದ್ಧಿ ಮತ್ತು ಕಾರ್ಮಿಕರಿಗೆ ಅವಕಾಶಗಳನ್ನು ಒದಗಿಸುತ್ತದೆ’ ಎಂದು ಕೆನಡಾದ ಪ್ರಧಾನಿ ಕಾರ್ನಿ ಪ್ರತಿಕ್ರಿಯಿಸಿದರು.
‘ಪರಸ್ಪರ ನಂಬಿಕೆ, ಹೊಸ ಶಕ್ತಿ’: ‘ಈ ಒಪ್ಪಂದಗಳು ಮತ್ತು ಬದ್ಧತೆಗಳ ಮೂಲಕ ಉಭಯ ದೇಶಗಳ ನಡುವಿನ ಸಂಬಂಧಗಳು ಪರಸ್ಪರ ನಂಬಿಕೆ, ಹೊಸ ಶಕ್ತಿ ಮತ್ತು ಸಕಾರಾತ್ಮಕತೆಯಿಂದ ತುಂಬಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.
‘ಭಯೋತ್ಪಾದನೆ, ತೀವ್ರವಾದ, ಮೂಲಭೂತವಾದಗಳು ಭಾರತ ಮತ್ತು ಕೆನಡಾ ದೇಶಗಳಿಗೆ ಮಾತ್ರವಲ್ಲದೆ, ಮಾನವೀಯತೆಗೆ ಗಂಭೀರ ಸವಾಲುಗಳಾಗಿವೆ ಎಂಬುದನ್ನು ಎರಡೂ ಕಡೆಯವರು ಒಪ್ಪಿಕೊಂಡಿದ್ದೇವೆ. ಜಾಗತಿಕ ಶಾಂತಿ ಮತ್ತು ಸ್ಥಿರತೆಗಳಾಗಿ ಎರಡೂ ದೇಶಗಳು ನಿಕಟ ಸಹಕಾರದಿಂದ ಕಾರ್ಯನಿರ್ವಹಿಸಲು ಸಹಮತ ವ್ಯಕ್ತಪಡಿಸಿವೆ’ ಎಂದು ಮೋದಿ ಹೇಳಿದರು.
ಉಭಯ ದೇಶಗಳು 2030ರ ವೇಳೆಗೆ 50 ಶತಕೋಟಿ ಡಾಲರ್ ವ್ಯಾಪಾರ ತಲುಪುವ ಗುರಿ ಹೊಂದಿವೆ. ಇದಕ್ಕಾಗಿ ಆರ್ಥಿಕ ಸಹಕಾರ ವೃದ್ಧಿಸಲು ಆದ್ಯತೆ ನೀಡಿದ್ದೇವೆ. ಶೀಘ್ರದಲ್ಲಿಯೇ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು ಅಂತಿಮಗೊಳಿಸಲು ನಿರ್ಧರಿಸಿದ್ದೇವೆ ಎಂದು ಮೋದಿ ತಿಳಿಸಿದರು. ಇದರಿಂದ ಎರಡೂ ದೇಶಗಳಲ್ಲಿ ಹೊಸ ಹೂಡಿಕೆ, ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದರು.
ಇಂಧನ ವಲಯದಲ್ಲಿ ಮಹತ್ವದ ನಡೆ: ‘ಇಂಧನ ಕ್ಷೇತ್ರದಲ್ಲಿ ಮುಂದಿನ ಪೀಳಿಗೆಗೂ ಪಾಲುದಾರಿಕೆಯನ್ನು ನಿರ್ಮಿಸುತ್ತಿದ್ದೇವೆ. ಹೈಡ್ರೋಕಾರ್ಬನ್‌ಗಳು ಮತ್ತು ನವೀಕರಿಸಬಹುದಾದ ಇಂಧನ, ಹಸಿರು ಹೈಡ್ರೋಜನ್ ಮತ್ತು ಇಂಧನ ಸಂಗ್ರಹಣೆ ಮೇಲೆ ಕೇಂದ್ರೀಕರಿಸಲಾಗಿದೆ’ ಎಂದು ಮೋದಿ ವಿವರಿಸಿದರು.
ಶಿಕ್ಷಣ ಕ್ಷೇತ್ರದಲ್ಲೂ ಸಂಬಂಧಗಳ ವಿಸ್ತರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಕೃತಕ ಬುದ್ಧಿಮತ್ತೆ, ಆರೋಗ್ಯ, ರಕ್ಷಣೆ, ಕೃಷಿ, ನಾವೀನ್ಯತೆಯಲ್ಲಿ ಹಲವು ವಿಶ್ವವಿದ್ಯಾಲಯಗಳ ಜತೆಗೆ ಹೊಸ ಪಾಲುದಾರಿಕೆ ಹೊಂದಲಿದ್ದೇವೆ. ಕೆನಡಾದ ವಿಶ್ವವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್‌ಗಳನ್ನು ತೆರೆಯಲೂ ಒಪ್ಪಿಕೊಂಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಕೆನಡಾದಲ್ಲಿ 2023ರಲ್ಲಿ ಖಾಲಿಸ್ತಾನ ಪ್ರತ್ಯೇಕತವಾದಿಯ ಹತ್ಯೆ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹಳಿತಪ್ಪಿತ್ತು. ಅದನ್ನು ಪುನಃ ಸ್ಥಾಪಿಸಲು ನಡೆದ ನಿರಂತರ ಪ್ರಯತ್ನಗಳ ಭಾಗವಾಗಿ ಈ ಹೊಸ ಕ್ರಮಗಳು ನಡೆದಿವೆ.
ಇನ್ನೊಂದೆಡೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಜತೆಗೆ ಕೆನಡಾದ ಆರ್ಥಿಕ ಸಂಬಂಧಗಳು ಹದಗೆಡುತ್ತಿವೆ. ಈ ವೇಳೆಯಲ್ಲಿ ಕೆನಡಾವು ಭಾರತ ಜತೆಗೆ ಮಾತುಕತೆ ಮೂಲಕ ವ್ಯಾಪಾರ ಸಂಬಂಧಗಳನ್ನು ವಿಸ್ತರಿಸಲು ಯೋಜಿಸಿದೆ.
ಪಶ್ಚಿಮ ಏಷ್ಯಾದಲ್ಲಿನ ಅನಿಶ್ಚಿತ ಭದ್ರತಾ ಪರಿಸ್ಥಿತ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಚರ್ಚೆ ನಡೆಸಿದರು. ಪಶ್ಚಿಮ ಏಷ್ಯದಲ್ಲಿನ ಈಗಿನ ಪರಿಸ್ಥಿತಿ ಬಗ್ಗೆ ಇಬ್ಬರೂ ನಾಯಕರು ತೀವ್ರ ಕಳವಳ ವ್ಯಕ್ತಪಡಿಸಿದರು.
‘ಭಾರತವು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಎಲ್ಲ ಸಂಘರ್ಷ ವಿವಾದಗಳಿಗೆ ಪರಿಹಾರ ಕಂಡುಕೊಳ್ಳುವುದನ್ನು ಬೆಂಬಲಿಸುತ್ತದೆ’ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.
‘ಸಂಘರ್ಷ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಭಾರತೀಯ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ದೇಶಗಳ ಜತೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ’ ಎಂದು ಮೋದಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.