ADVERTISEMENT

ಭಾರತ–ಚೀನಾ: ಸೇನಾಮಟ್ಟದ ಮಾತುಕತೆ ಇಂದು

ಪೂರ್ವ ಲಡಾಖ್‌ ಗಡಿಯಿಂದ ಸೇನೆಯನ್ನು ಹಿಂದಕ್ಕೆ ಕರೆಯಿಸುವ ಕಾರ್ಯ ಪೂರ್ಣ

ಪಿಟಿಐ
Published 19 ಫೆಬ್ರುವರಿ 2021, 19:30 IST
Last Updated 19 ಫೆಬ್ರುವರಿ 2021, 19:30 IST
   

ನವದೆಹಲಿ: ‘ಪ್ಯಾಂಗಾಂಗ್‌‌ ಸರೋವರದ ಉತ್ತರ ಮತ್ತು ದಕ್ಷಿಣ ತೀರಗಳಿಂದ ಭಾರತ ಹಾಗೂ ಚೀನಾದ ಸೇನೆಗಳನ್ನು ಹಿಂದಕ್ಕೆ ಕರೆಯಿಸುವ ಕಾರ್ಯ ಪೂರ್ಣಗೊಂಡಿದ್ದು, ಶನಿವಾರ (ಫೆ. 20) ಉಭಯ ಸೇನಾ ನಾಯಕರ ಉನ್ನತ ಮಟ್ಟದ ಸಭೆ ಆರಂಭವಾಗಲಿದೆ’ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಎರಡೂ ಸೇನೆಗಳ ಕಮಾಂಡರ್‌ ಮಟ್ಟದ ಹತ್ತನೇ ಸುತ್ತಿನ ಮಾತುಕತೆಗಳು ವಾಸ್ತವ ಗಡಿರೇಖೆಯ ಚೀನಾದ ಭಾಗದಲ್ಲಿರುವ ಮೋಲ್ಡೊದಲ್ಲಿ ಶನಿವಾರ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿವೆ. ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಂಡ ನಂತರ ನಡೆಯುತ್ತಿರುವ ಮೊದಲ ಮಾತುಕತೆ ಇದಾಗಿದೆ.

‘ಉತ್ತರ ಹಾಗೂ ದಕ್ಷಿಣ ತೀರದಲ್ಲಿ ಬೀಡುಬಿಟ್ಟಿದ್ದ ಸೇನೆ, ಶಸ್ತ್ರಾಸ್ತಗಳು ಹಾಗೂ ಸೇನೆಗೆ ಸಂಬಂಧಿಸಿದ ಇತರ ಉಪಕರಣಗಳನ್ನು ವಾಪಸ್‌ ತರಿಸುವುದು, ಬಂಕರ್‌, ಟೆಂಟ್‌ ಹಾಗೂ ತಾತ್ಕಾಲಿಕ ಕಟ್ಟಡಗಳನ್ನು ನಾಶಪಡಿಸುವುದೇ ಮುಂತಾದ ಕೆಲಸಗಳು ಗುರುವಾರ ಪೂರ್ಣಗೊಂಡಿವೆ. ಎರಡೂ ಕಡೆಯವರು ಇದರ ಪರಿಶೀಲನೆಯನ್ನೂ ನಡೆಸಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಶನಿವಾರ ನಡೆಯುವ ಮಾತುಕತೆಯ ಸಂದರ್ಭದಲ್ಲಿ, ಉಳಿದ ಪ್ರದೇಶಗಳಿಂದಲೂ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಕಾರ್ಯವನ್ನು ಚುರುಕುಗೊಳಿಸುವಂತೆ ಭಾರತವು ಚೀನಾವನ್ನು ಒತ್ತಾಯಿಸಲಿದೆ ಎನ್ನಲಾಗಿದೆ. ಭಾರತದ ಕಡೆಯಿಂದ ಲೆಫ್ಟಿನೆಂಟ್‌ ಜನರಲ್‌ ಪಿ.ಕೆ.ಜಿ. ಮೆನನ್‌ ಅವರು ಮಾತುಕತೆಯಲ್ಲಿ ಪಾಲ್ಗೊಳ್ಳುವರು. ಚೀನಾದ ಕಡೆಯಿಂದ ಮೇಜರ್‌ ಜನರಲ್‌ ಜೆನ್‌ ಲಿಯು ಲಿನ್‌ ಅವರು ಬರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

ಫೆಬ್ರುವರಿ 10ರಿಂದ ಉಭಯ ದೇಶಗಳು ಪ್ಯಾಂಗಾಂಗ್‌‌ ಸರೋವರದ ಬಳಿಯಿಂದ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಕಾರ್ಯವನ್ನು ಆರಂಭಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.