ADVERTISEMENT

ಭಾರತ–ಚೀನಾ ಗಡಿ ಪರಿಸ್ಥಿತಿ: ಮುಂದಿನ ವಾರ 17ನೇ ಸುತ್ತಿನ ಸಭೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2022, 21:06 IST
Last Updated 16 ಅಕ್ಟೋಬರ್ 2022, 21:06 IST
   

ನವದೆಹಲಿ: ಭಾರತ –ಚೀನಾ ಗಡಿಯಲ್ಲಿ ಸಹಜ ಸ್ಥಿತಿ ಸ್ಥಾಪನೆ ಕುರಿತು ಚರ್ಚಿಸಲು ಉಭಯ ದೇಶಗಳ ಸೇನೆಯ ಹಿರಿಯ ಕಮಾಂಡರ್‌ಗಳು ಮುಂದಿನವಾರ ಸಭೆ ಸೇರುವರು. ಗಡಿಭಾಗದಲ್ಲಿ ನಿಯೋಜಿಸಿರುವ ಸೇನೆ ವಾಪಸಿಗೆ ಭಾರತ ಸಭೆಯಲ್ಲಿ ಪಟ್ಟುಹಿಡಿಯುವ ಸಂಭವವಿದೆ.

ಗಡಿ ರೇಖೆಗೆ ಹೊಂದಿಕೊಂಡು ಗೋಗ್ರಾ ಹಾಟ್‌ಸ್ಪ್ರಿಂಗ್ ವಲಯದ ಗಸ್ತು ತಾಣ ಪಾಯಿಂಟ್ 15ರ ಬಳಿ ನಿಯೋಜಿಸಿದ್ದ ಸೇನೆ ವಾಪಸಿಗೆ ಕಳೆದ ತಿಂಗಳು ನಡೆದಿದ್ದ ಸಭೆಯಲ್ಲಿ ನಿರ್ಧರಿಸಿದ ನಂತರ ಪೂರ್ವ ಲಡಾಖ್‌ನಲ್ಲಿ ಸಹಜ ಸ್ಥಿತಿ ಮರಳುತ್ತಿದೆ ಎಂದು ಚೀನಾ ಪ್ರತಿಪಾದಿಸಿದೆ.

ಆದರೆ. ಚೀನಾದ ಈ ಪ್ರತಿಪಾದನೆಯನ್ನು ಭಾರತ ತಳ್ಳಿಹಾಕಿದೆ. ‘ಗಡಿಯಲ್ಲಿ ಇನ್ನೂ ಹಲವು ಸಮಸ್ಯೆಗಳು ಉಳಿದಿವೆ. ಸಹಜ ಪರಿಸ್ಥಿತಿಯನ್ನು ಮರುಸ್ಥಾಪಿಸಲು ಹಲವು ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ’ ಎಂದು ಭಾರತವು ಸ್ಪಷ್ಟವಾಗಿ ಹೇಳಿದೆ.

ADVERTISEMENT

ಡೆಮ್‌ಚೋಕ್‌ ಮತ್ತು ಡೆಪ್‌ಸಂಗ್‌ ವ್ಯಾಪ್ತಿಯಲ್ಲಿ ಹಲವು ಗಸ್ತು ತಾಣಗಳಿಗೆ ಭಾರತದ ಯೋಧರು ಹೋಗದಂತೆ ಚೀನಾದ ಸೇನೆ ತಡೆಯೊಡ್ಡುತ್ತಿದೆ. ಹೀಗಾಗಿ, ಚೀನಾದ ಪ್ರತಿಪಾದನೆ ‘ಸಹಜ ಸ್ಥಿತಿ ಮರಳುತ್ತಿದೆ’ ಎಂದು ಒಪ್ಪಿಕೊಳ್ಳುವಂತೆ ಭಾರತದ ಮೇಲೆ ಒತ್ತಡ ಹೇರುವ ತಂತ್ರ ಎನ್ನಲಾಗಿದೆ.

ಉಭಯ ದೇಶಗಳ ರಾಜತಾಂತ್ರಿಕರ ನಡುವೆ ಕಳೆದ ಶುಕ್ರವಾರ ವಿಡಿಯೊ ಕಾನ್ಫರೆನ್ಸ್ ಸಭೆ ನಡೆದಿತ್ತು. ಆಗ ಸೇನೆಗಳ ಮುಖ್ಯಸ್ಥರು ಮತ್ತೊಂದು ಸುತ್ತಿನ ಸಭೆ ನಡೆಸಬೇಕು ಎಂದು ನಿರ್ಧರಿಸಲಾಗಿತ್ತು. ಅದರಂತೆ, ಮುಂದಿನ ವಾರ ಸಭೆ ಸೇರಲಿದ್ದು, 17ನೇ ಸುತ್ತಿನ ಸಭೆ ಇದಾಗಿದೆ.

ಡೆಪ್‌ಸಂಗ್‌ ಮತ್ತು ಡೆಮ್‌ಚೋಕ್‌ ಪ್ರದೇಶದಲ್ಲಿ ಸೇನೆಗಳ ಮುಖಾಮುಖಿ ಆಗುವು ದನ್ನು ತಪ್ಪಿಸಲು ಒಪ್ಪಂದಕ್ಕೆ ಬರುವ ಕುರಿತಂತೆ ಭಾರತ ಒತ್ತು ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.