
ನವದೆಹಲಿ/ಢಾಕಾ: ಬಾಂಗ್ಲಾದೇಶದ ಹಿತಾಸಕ್ತಿಗಳಿಗೆ ವಿರುದ್ಧವಾದ ಚಟುವಟಿಕೆಗಳಿಗೆ ತನ್ನ ನೆಲವನ್ನು ಬಳಸಿಕೊಳ್ಳುವುದಕ್ಕೆ ಎಂದಿಗೂ ಅವಕಾಶ ನೀಡಿಲ್ಲ ಎಂದು ಭಾರತ ಭಾನುವಾರ ಹೇಳಿದೆ.
‘ಮುಂಬರುವ ಸಾರ್ವತ್ರಿಕ ಚುನಾವಣೆಗಳನ್ನು ಬಾಂಗ್ಲಾದೇಶ ಶಾಂತಿಯುತವಾಗಿ ನಡೆಸಲಿ’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಭಾರತದಲ್ಲಿ ಆಶ್ರಯ ಪಡೆದಿರುವ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ‘ಪ್ರಚೋದನಕಾರಿ’ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ಭಾರತದ ಹೈಕಮಿಷನರ್ ಪ್ರಣಯ್ ವರ್ಮಾ ಅವರನ್ನು ಕರೆಸಿಕೊಂಡಿರುವ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ತನ್ನ ಪ್ರತಿಭಟನೆ ದಾಖಲಿಸಿತ್ತು. ಇದರ ಬೆನ್ನಲ್ಲೇ ಭಾರತದಿಂದ ಈ ಪ್ರತಿಕ್ರಿಯೆ ಹೊರಬಿದ್ದಿದೆ.
ಹಸೀನಾ ನೇತೃತ್ವದ ಅವಾಮಿ ಲೀಗ್‌ನ ಕೆಲ ಸದಸ್ಯರು ಭಾರತದಲ್ಲಿ ಇದ್ದು, ಅವರು ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆಯೂ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ತನ್ನ ಕಳವಳ ವ್ಯಕ್ತಪಡಿಸಿದೆ.
‘ಬಾಂಗ್ಲಾದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವಂತೆ ಹಸೀನಾ ಅವರು ತನ್ನ ಬೆಂಬಲಿಗರಿಗೆ ಕರೆ ನೀಡುತ್ತಿದ್ದಾರೆ. ದೇಶದಲ್ಲಿ ಮುಂಬರುವ ಸಂಸತ್ ಚುನಾವಣೆಗಳಿಗೆ ಅಡ್ಡಿಪಡಿಸುವ ಉದ್ದೇಶದಿಂದ ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದೂ ಹೇಳಿದೆ.
ಈ ಆರೋಪಗಳನ್ನು ತಳ್ಳಿ ಹಾಕಿರುವ ಭಾರತ, ‘ಬಾಂಗ್ಲಾದೇಶದಲ್ಲಿ ಯಾವತ್ತಿಗೂ ಮುಕ್ತ, ನ್ಯಾಯಸಮ್ಮತ, ಎಲ್ಲರನ್ನೂ ಒಳಗೊಳ್ಳುವ ಹಾಗೂ ವಿಶ್ವಾಸಾರ್ಹ ಚುನಾವಣೆಗಳು ನಡೆಯಬೇಕು ಎಂಬುದು ಭಾರತದ ನಿಲುವಾಗಿದೆ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.