ADVERTISEMENT

ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಒತ್ತೆಯಾಳುಗಳಾಗಿಲ್ಲ: ವಿದೇಶಾಂಗ ಇಲಾಖೆ

ಏಜೆನ್ಸೀಸ್
Published 3 ಮಾರ್ಚ್ 2022, 6:12 IST
Last Updated 3 ಮಾರ್ಚ್ 2022, 6:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿದೆ ಎಂಬ ರಷ್ಯಾದ ಹೇಳಿಕೆಯನ್ನು ಭಾರತವು ಗುರುವಾರ ನಿರಾಕರಿಸಿದೆ. ಭಾರತೀಯರನ್ನು ಸ್ಥಳಾಂತರ ಮಾಡಲು ನೆರವು ನೀಡಿದ ಕಾರಣಕ್ಕಾಗಿ ಉಕ್ರೇನ್‌ಗೆ ಭಾರತ ಧನ್ಯವಾದಗಳನ್ನು ಅರ್ಪಿಸಿದೆ.

‘ಉಕ್ರೇನಿಯನ್ ಅಧಿಕಾರಿಗಳ ಸಹಕಾರದೊಂದಿಗೆ ಬುಧವಾರ ಅನೇಕ ವಿದ್ಯಾರ್ಥಿಗಳು ಹಾರ್ಕಿವ್ ತೊರೆದಿದ್ದಾರೆ ಎಂಬುದು ನಮ್ಮ ಗಮನಕ್ಕೆ ಬಂದಿದೆ’ ಎಂದು ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

‘ಭಾರತದ ಯಾವುದೇ ವಿದ್ಯಾರ್ಥಿಯನ್ನು ಒತ್ತೆಯಾಗಿರಿಸಿಕೊಂಡ ಯಾವುದೇ ವರದಿ ನಮಗೆ ಬಂದಿಲ್ಲ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಹಾರ್ಕಿವ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್‌ನ ಭದ್ರತಾ ಪಡೆಗಳು ‘ಮಾನವ ಗುರಾಣಿ’ಯನ್ನಾಗಿ ಬಳಸುತ್ತಿವೆ ಎಂದು ರಷ್ಯಾ ಹೇಳಿತ್ತು. ಇದೇ ಹಿನ್ನೆಲೆಯಲ್ಲಿ ಭಾರತದಿಂದ ಹೇಳಿಕೆ ಹೊರಬಿದ್ದಿದೆ.

‘ವಿದ್ಯಾರ್ಥಿಗಳನ್ನು ಉಕ್ರೇನ್‌ ಪಡೆಗಳು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿವೆ. ಅವರನ್ನು ಮಾನವ ಗುರಾಣಿಯಾಗಿ ಬಳಸಲಾಗುತ್ತಿದೆ. ವಿದ್ಯಾರ್ಥಿಗಳು ರಷ್ಯಾದ ಕಡೆ ತೆರಳುವುದನ್ನು ತಡೆಯಲು ಎಲ್ಲವನ್ನೂ ಮಾಡಲಾಗುತ್ತಿದೆ. ಭಾರತೀಯರನ್ನು ಮಾನವೀಯ ನೆಲೆಯಲ್ಲಿ ಸ್ಥಳಾಂತರ ಮಾಡಲು ರಷ್ಯಾ ಪ್ರಯತ್ನಿಸುತ್ತಿದೆ’ ಎಂದು ರಷ್ಯಾ ಸರ್ಕಾರ ತಿಳಿಸಿತ್ತು. ಇದಕ್ಕೂ ಮೊದಲು ವ್ಲಾಡಿಮಿರ್ ಪುಟಿನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ವಿಡಿಯೊ ಕನ್ಫರೆನ್ಸ್‌ ನಡೆದಿತ್ತು.

‘ಉಕ್ರೇನ್‌ನ ಕೀವ್‌ನಲ್ಲಿ ಕೆಲವು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಅವರ ಸ್ಥಳಾಂತರದ ಕುರಿತು ನಾವು ಚರ್ಚೆ ನಡೆಸಿದ್ದೇವೆ’ ಎಂದು ಪ್ರಧಾನಿ ಕಚೇರಿಯಿಂದ ಹೇಳಿಕೆ ಬಿಡುಗಡೆ ಮಾಡಲಾಗಿತ್ತು.

ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳಲಾಗಿದೆ ಎಂಬ ಆರೋಪವನ್ನು ಉಕ್ರೇನ್‌ ಕೂಡ ನಿರಾಕರಿಸಿದೆ ಎಂದು ವರದಿಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.