ಎಸ್. ಜೈಶಂಕರ್
ನವದೆಹಲಿ: ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿದ್ದಾರೆ ಎನ್ನಲಾದ ಭಾರತೀಯರನ್ನು ವಾಪಸ್ ಕಳುಹಿಸುವಾಗ ಅವರ ಜತೆ ‘ಅಮಾನವೀಯವಾಗಿ ವರ್ತಿಸಬಾರದು’. ಈ ಕುರಿತು ಆ ದೇಶದ ಜತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ತನ್ನ ನೆಲದಲ್ಲಿ ಅಕ್ರಮವಾಗಿ ನೆಲಸಿದ್ದ 104 ಭಾರತೀಯರನ್ನು ಅಮೆರಿಕವು ಬುಧವಾರ ವಾಪಸ್ ಕಳುಹಿಸಿದೆ. ಭಾರತೀಯರೊಂದಿಗೆ ಅಮೆರಿಕದ ಅಧಿಕಾರಿಗಳ ಅಮಾನವೀಯ ವರ್ತನೆಯು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗುರುವಾರ ಗದ್ದಲಕ್ಕೆ ಕಾರಣವಾಯಿತು. ಇದರ ನಡುವೆಯೇ ಜೈಶಂಕರ್ ಅವರು ಉಭಯ ಸದನಗಳಲ್ಲಿ ಹೇಳಿಕೆ ನೀಡಿದರು.
‘ಅಕ್ರಮವಾಗಿ ನೆಲಸಿರುವವರನ್ನು ವಾಪಸ್ ಕಳುಹಿಸುವಾಗ ಅವರನ್ನು ನಿರ್ಬಂಧದಲ್ಲಿ ಇರಿಸುವುದು ಅಮೆರಿಕವು 2012ರಿಂದಲೂ ಅನುಸರಿಸುತ್ತಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನದ (ಎಸ್‌ಒಪಿ) ಭಾಗ’ ಎಂದರು.
ಪ್ರಯಾಣದ ಉದ್ದಕ್ಕೂ ತಮಗೆ ಕೈಕೋಳ ತೊಡಿಸಿ, ಕಾಲುಗಳಿಗೆ ಸರಪಳಿ ಬಿಗಿಯಲಾಗಿತ್ತು ಎಂದು ಬುಧವಾರ ಅಮೃತಸರಕ್ಕೆ ಬಂದಿಳಿದ ವಲಸಿಗರಲ್ಲಿ ಕೆಲವರು ಹೇಳಿಕೆ ಕೊಟ್ಟಿದ್ದಾರೆ.
‘ಅಮೆರಿಕವು ಅಕ್ರಮ ವಲಸಿಗರನ್ನು ಆಯಾ ದೇಶಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದು, ವಲಸೆ ಮತ್ತು ಕಸ್ಟಮ್ಸ್ ಇಲಾಖೆ (ಐಸಿಇ) ಅಧಿಕಾರಿಗಳು ಆ ಕೆಲಸ ನಿರ್ವಹಿಸುತ್ತಾರೆ. ವಲಸಿಗರನ್ನು ಕಳುಹಿಸಲು ಮಿಲಿಟರಿ ವಿಮಾನಗಳನ್ನು ಬಳಸುವ ನಿಯಮವನ್ನು ಐಸಿಇ 2012ರಲ್ಲೇ ಜಾರಿಗೆ ತಂದಿದೆ. ಹೀಗಾಗಿ ಈ ಪ್ರಕ್ರಿಯೆ ಹೊಸತಲ್ಲ. ಹಲವಾರು ವರ್ಷಗಳಿಂದಲೂ ಇದೆ’ ಎಂದರು.
‘ಅಕ್ರಮವಾಗಿ ನೆಲಸಿರುವ ವಲಸಿಗರನ್ನು ವಾಪಸ್ ಕಳುಹಿಸುವಾಗ ಅವರನ್ನು ನಿರ್ಬಂಧದಲ್ಲಿ ಇರಿಸಲಾಗುತ್ತದೆ. ಪ್ರಯಾಣದ ವೇಳೆ ವೈದ್ಯಕೀಯ ಸೇವೆಯ ಅಗತ್ಯವಿದ್ದರೆ ಒದಗಿಸಲಾಗುತ್ತದೆ. ಆಹಾರ
ಸೇರಿದಂತೆ ಇತರ ಅಗತ್ಯಗಳನ್ನು ಪೂರೈಸಲಾಗುತ್ತದೆ. ಶೌಚಾಲಯಕ್ಕೆ ತೆರಳುವ ಸಮಯದಲ್ಲಿ ಕೈಕೋಳವನ್ನು ತಾತ್ಕಾಲಿಕವಾಗಿ ತೆಗೆಯಲಾಗುತ್ತದೆ. ವಿಶೇಷ ವಿಮಾನ, ಪ್ರಯಾಣಿಕರ ವಿಮಾನ ಮತ್ತು ಮಿಲಿಟರಿ ವಿಮಾನಗಳಿಗೆ ಈ ನಿಯಮ ಅನ್ವಯವಾಗುತ್ತದೆ. ಪ್ರಯಾಣದ ವೇಳೆ ಮಹಿಳೆಯರು ಮತ್ತು ಮಕ್ಕಳ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ. 2025ರ ಫೆಬ್ರುವರಿ 5ರಂದು ಅಮೆರಿಕದಿಂದ ಬಂದ ಮಿಲಿಟರಿ ವಿಮಾನಕ್ಕೂ ಇದೇ ನಿಯಮ ಅನ್ವಯವಾಗಿತ್ತು’ ಎಂದು ವಿವರಿಸಿದ್ದಾರೆ.
‘ವಿದೇಶದಲ್ಲಿ ಅಕ್ರಮವಾಗಿ ನೆಲಸಿರುವುದು ಕಂಡುಬಂದಲ್ಲಿ ತಮ್ಮ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳುವುದು ಎಲ್ಲಾ ದೇಶಗಳ ಬಾಧ್ಯತೆಯಾಗಿದೆ. ಇದು ಯಾವುದೋ ನಿರ್ದಿಷ್ಟ ದೇಶಕ್ಕೆ ಅನ್ವಯಿಸುವ ಅಥವಾ ಭಾರತದಲ್ಲಿ ಮಾತ್ರ ಇರುವ ನೀತಿಯಲ್ಲ’ ಎಂದು ಸಚಿವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.