ADVERTISEMENT

ಭಾರತ–ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದ: ಪ್ರಧಾನಿ ಮೋದಿ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2026, 5:51 IST
Last Updated 27 ಜನವರಿ 2026, 5:51 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ನವದೆಹಲಿ: ಮದರ್‌ ಆಫ್‌ ಆಲ್‌ ಡೀಲ್ಸ್‌ (ಎಲ್ಲಾ ಒಪ್ಪಂದಗಳ ತಾಯಿ) ಎಂದೇ ಕರೆಯಲ್ಪಡುವ ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ.

‘ಸೋಮವಾರ ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಒಂದು ದೊಡ್ಡ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಜನರು ಇದನ್ನು ‘ಮದರ್‌ ಆಫ್‌ ಆಲ್‌ ಡೀಲ್ಸ್‌’ (ಎಲ್ಲಾ ಒಪ್ಪಂದಗಳ ತಾಯಿ) ಎಂದು ಕರೆಯುತ್ತಿದ್ದಾರೆ. ಈ ಒಪ್ಪಂದದಿಂದಾಗಿ ಭಾರತ ಮತ್ತು ಯುರೋಪಿನ ಜನರಿಗೆ ಪ್ರಮುಖ ಅವಕಾಶಗಳು ಸಿಗಲಿವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ವಿಶ್ವದ ಎರಡು ಪ್ರಮುಖ ಆರ್ಥಿಕತೆಗಳ ನಡುವಿನ ಪಾಲುದಾರಿಕೆಯ ಪರಿಪೂರ್ಣ ಉದಾಹರಣೆಯಾಗಿದೆ. ಈ ಒಪ್ಪಂದವು ಜಾಗತಿಕ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇಕಡ 25ರಷ್ಟು ಮತ್ತು ಜಾಗತಿಕ ವ್ಯಾಪಾರದ ಮೂರನೇ ಒಂದು ಭಾಗವನ್ನು ಪ್ರತಿನಿಧಿಸುತ್ತದೆ’ ಎಂದು ಮೋದಿ ಬಣ್ಣಿಸಿದ್ದಾರೆ.

‘ಈ ಒಪ್ಪಂದವು ಪ್ರಜಾಪ್ರಭುತ್ವದ ಬದ್ಧತೆಯನ್ನು ಬಲಪಡಿಸುತ್ತದೆ. ಐರೋಪ್ಯ ಒಕ್ಕೂಟದೊಂದಿಗಿನ ಈ ಮುಕ್ತ ವ್ಯಾಪಾರ ಒಪ್ಪಂದವು ಬ್ರಿಟನ್ ಜತೆಗಿನ ಇತರೆ ಒಪ್ಪಂದಗಳಿಗೆ ಪೂರಕವಾಗಿರುತ್ತದೆ. ಇದಕ್ಕಾಗಿ ನಾನು ದೇಶದ ಜನರನ್ನು ಅಭಿನಂದಿಸುತ್ತೇನೆ’ ಎಂದೂ ಮೋದಿ ವಿವರಿಸಿದ್ದಾರೆ.

‘ಮುಕ್ತ ವ್ಯಾಪಾರ ಒಪ್ಪಂದದಿಂದ ಉತ್ಪಾದನೆಗೆ ಭಾರಿ ಉತ್ತೇಜನ ಸಿಗುತ್ತದೆ ಮತ್ತು ಸೇವಾ ವಲಯವೂ ವಿಸ್ತರಿಸುತ್ತದೆ. ಜತೆಗೆ, ಈ ಒಪ್ಪಂದವು ಹೂಡಿಕೆದಾರರು ಮತ್ತು ಉದ್ಯಮಿಗಳಲ್ಲಿ ಭಾರತದಲ್ಲಿ ಹೂಡಿಕೆ ಮಾಡುವ ವಿಶ್ವಾಸವನ್ನು ಹೆಚ್ಚಿಸುತ್ತದೆ’ ಎಂದಿದ್ದಾರೆ.

ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು (ಎಫ್‌ಟಿಎ) ಜಾರಿಗೆ ಬಂದ ನಂತರದಲ್ಲಿ ಯುರೋಪಿನ ಕಾರುಗಳು, ವೈನ್‌ನಂತಹ ಉತ್ಪನ್ನಗಳ ಬೆಲೆಯು ಭಾರತದ ಮಾರುಕಟ್ಟೆಯಲ್ಲಿ ಇಳಿಕೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ. ಎಫ್‌ಟಿಎ ಕುರಿತ ಮಾತುಕತೆಗಳು ಪೂರ್ಣಗೊಂಡಿರುವ ವಿಚಾರವನ್ನು ಭಾರತ ಹಾಗೂ ಇ.ಯು ಪ್ರಮುಖರು ಇನ್ನಷ್ಟೇ ಘೋಷಿಸಲಿದ್ದಾರೆ.

ಸೇವಾ ವಲಯಗಳಿಗೆ ಸಂಬಂಧಿಸಿದ ಹಲವು ನಿಯಮಗಳಲ್ಲಿ ಸಡಿಲಿಕೆ ತರುವ ಸಾಧ್ಯತೆ ಇದೆ ಎಂದು
ಮೂಲಗಳು ತಿಳಿಸಿವೆ. ಭಾರತದ ತನ್ನ ಜವಳಿ, ಚರ್ಮೋದ್ಯಮ, ವಸ್ತ್ರ, ಆಭರಣ ಮತ್ತು ಹರಳು, ಕರಕುಶಲ ಉತ್ಪನ್ನಗಳಿಗೆ ಯುರೋಪಿನ ಮಾರುಕಟ್ಟೆಗೆ ಸುಂಕರಹಿತವಾಗಿ ಪ್ರವೇಶಿಸಲು ಅವಕಾಶ ಸಿಗಬೇಕು ಎಂದು ಒತ್ತಾಯಿಸಿದೆ. ಭಾರತವು ಅಂತಿಮಗೊಳಿಸಿರುವ ಎಲ್ಲ ಎಫ್‌ಟಿಎಗಳಲ್ಲಿ ಇದೇ ಬೇಡಿಕೆಯನ್ನೇ ಪ್ರಮುಖವಾಗಿ ಇರಿಸಲಾಗಿದೆ. ಅಲ್ಲದೆ, ಭಾರತದ ಜೊತೆ ಎಫ್‌ಟಿಎ ಅಂತಿಮ ಗೊಳಿಸಿರುವ ಬ್ರಿಟನ್‌, ಯುಎಇ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಎಲ್ಲ ದೇಶಗಳು ಈ ಬೇಡಿಕೆಗೆ ಒಪ್ಪಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.