
ಚಂಡೀಗಢ: ಭಾರತದ ಮೊದಲ ಜಲಜನಕ ಚಾಲಿತ ರೈಲಿನ ಉದ್ಘಾಟನೆಗೆ ಹರಿಯಾಣ ಸಾಕ್ಷಿಯಾಗಲಿದೆ.
ಜಿಂದ್ ಮತ್ತು ಸೋನಿಪತ್ ನಡುವೆ ಕಾರ್ಯಾಚರಿಸಲಿರುವ ಉತ್ತರ ರೈಲ್ವೆಯ ಮಹತ್ವಾಕಾಂಕ್ಷೆ ಯೋಜನೆಯ ಅಂತಿಮ ಹಂತದ ಸಿದ್ಧತೆಗಳು ಪ್ರಗತಿಯಲ್ಲಿವೆ. ಜಿಂದ್‌ನಲ್ಲಿ ಸ್ಥಾಪಿಸಿರುವ ಜಲಜನಕ ಸ್ಥಾವರಕ್ಕೆ ತಡೆರಹಿತ 11 ಕೆವಿ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ಇದು ರೈಲಿನ ಅಂತಿಮ ಕಾರ್ಯಾರಂಭ ಮತ್ತು ನಿಯಮಿತ ಕಾರ್ಯಾಚರಣೆಗಳ ಸಮಯದಲ್ಲಿ ಇಂಧನವನ್ನು ಒದಗಿಸುತ್ತದೆ ಎಂದು ಹರಿಯಾಣ ಸರ್ಕಾರ ಮಂಗಳವಾರ ತಿಳಿಸಿದೆ.
ಜಲಜನಕ ಸ್ಥಾವರವು 3 ಸಾವಿರ ಕೆ.ಜಿಯಷ್ಟು ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಅದು ಅಂತಿಮ ಕಾರ್ಯಾರಂಭದ ಹಂತದಲ್ಲಿದೆ ಎಂದು ಹೇಳಿದೆ.
ಹರಿಯಾಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಅನುರಾಗ್ ರಸ್ತೋಗಿ ಅವರು ದಕ್ಷಿಣ ಹರಿಯಾಣ ವಿದ್ಯುತ್ ವಿತರಣ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ‘ಈ ಯೋಜನೆಗೆ ತಡೆರಹಿತ ವಿದ್ಯುತ್ ಪೂರೈಕೆ ವ್ಯವಸ್ಥೆಯ ಪರಿಶೀಲನೆ ನಡೆಸಬೇಕು. ಪರ್ಯಾಯ ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳನ್ನು ಬಲಪಡಿಸಬೇಕು’ ಎಂದು ಸೂಚಿಸಿದ್ದಾರೆ.
ಕಳೆದ ತಿಂಗಳು, ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ನೀಡಿದ್ದ ಲಿಖಿತ ಹೇಳಿಕೆಯಲ್ಲಿ, ‘ಭಾರತೀಯ ರೈಲ್ವೆ ತನ್ನ ಮೊದಲ ಜಲಜನಕ ರೈಲನ್ನು ಪ್ರಾಯೋಗಿಕವಾಗಿ ಓಡಿಸಲು ಅತ್ಯಾಧುನಿಕ ಯೋಜನೆಯನ್ನು ಕೈಗೆತ್ತಿಕೊಂಡಿದೆ’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.