ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ನವದೆಹಲಿ: ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿ ಮೂಲಕ ಹಾಯ್ದುಹೋಗುವ ದೇಶದ ಮೊದಲ ರಸ್ತೆ ಮತ್ತು ರೈಲು ಮಾರ್ಗ ಒಳಗೊಂಡ ‘ಟ್ವಿನ್ ಟ್ಯೂಬ್ ಸುರಂಗ’ ನಿರ್ಮಾಣಕ್ಕೆ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಶನಿವಾರ ಅನುಮೋದನೆ ನೀಡಿದೆ.
ಉದ್ದೇಶಿತ ಈ ಸುರಂಗ ಮಾರ್ಗವು ಗೋಹಪುರ ಹಾಗೂ ನುಮಾಲಿಗಢ ನಡುವೆ ಸಂಪರ್ಕ ಕಲ್ಪಿಸಲಿದೆ. 34 ಕಿ.ಮೀ. ಉದ್ದದ ಈ ಮಾರ್ಗವನ್ನು ₹18,662 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯು ಒಪ್ಪಿಗೆ ನೀಡಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್,‘ಹೂಗ್ಲಿ ನದಿ ಮೂಲಕ ಹಾಯ್ದು ಹೋಗುವ ದೇಶದ ಮೊದಲ ಸುರಂಗ ಮಾರ್ಗವನ್ನು ಕೋಲ್ಕತ್ತದಲ್ಲಿ ನಿರ್ಮಿಸಲಾಗಿದೆ. ಈ ಮಾರ್ಗದಲ್ಲಿ ಮೆಟ್ರೊ ರೈಲು ಸಂಚರಿಸುತ್ತವೆ’ ಎಂದು ಹೇಳಿದರು.
‘ಅಹಮದಾಬಾದ್–ಮುಂಬೈ ನಡುವಿನ ಬುಲೆಟ್ ರೈಲು ಮಾರ್ಗವು ಸಮುದ್ರದ ಮೂಲಕ ಹಾಯ್ದು ಹೋಗಲಿದ್ದು, ಈ ಸುರಂಗಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಇದು ಸಮುದ್ರಗೊಳಗೆ ನಿರ್ಮಿಸಲಾಗುತ್ತಿರುವ ದೇಶದ ಮೊದಲ ಸುರಂಗವಾಗಿದೆ’ ಎಂದು ಹೇಳಿದರು.
‘ರಸ್ತೆ, ರೈಲು ಮಾರ್ಗ ಅಕ್ಕಪಕ್ಕ’: ಉದ್ದೇಶಿತ ಗೋಹಪುರ–ನುಮಾಲಿಗಢ ನಡುವಿನ ಟ್ವಿನ್ ಟ್ಯೂಬ್ ಸುರಂಗದಲ್ಲಿ ರಸ್ತೆ ಹಾಗೂ ರೈಲು ಮಾರ್ಗ ಅಕ್ಕಪಕ್ಕವೇ ಇರಲಿವೆ. ಇಂತಹ ಸೌಕರ್ಯವುಳ್ಳ ದೇಶದ ಮೊದಲ ಸುರಂಗ ಮಾರ್ಗ ಇದಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ರಾ.ಹೆ–715ರಲ್ಲಿರುವ ನುಮಾಲಿಗಢ ಹಾಗೂ ರಾ.ಹೆ–15ರ ಮೇಲಿರುವ ಗೋಹಪುರ ನಡುವಿನ ಅಂತರ 240 ಕಿ.ಮೀ. ಇದ್ದು, ಪ್ರಯಾಣಕ್ಕೆ 6 ಗಂಟೆ ಬೇಕಾಗುತ್ತದೆ. ಬ್ರಹ್ಮಪುತ್ರ ನದಿಯೊಳಗಿನಿಂದ 34 ಕಿ.ಮೀ. ಉದ್ದದ ಟ್ವಿನ್ ಟ್ಯೂಬ್ ಸುರಂಗ ಮಾರ್ಗ ನಿರ್ಮಿಸಿದಲ್ಲಿ ಪ್ರಯಾಣಕ್ಕೆ ತಗಲುವ ಅವಧಿ 30 ನಿಮಿಷಕ್ಕೆ ಇಳಿಯಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಈ ಸುರಂಗ ಮಾರ್ಗದಿಂದ ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಹಾಗೂ ಈಶಾನ್ಯ ರಾಜ್ಯಗಳ ಇತರ ಪ್ರದೇಶಗಳಿಗೆ ಹೆಚ್ಚು ಪ್ರಯೋಜನವಾಗಲಿದೆ’ ಎಂದೂ ಹೇಳಿದ್ದಾರೆ.
ಇದು ರಸ್ತೆ ಹಾಗೂ ರೈಲು ಮಾರ್ಗ ಒಳಗೊಂಡ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ‘ಟ್ವಿನ್ ಟ್ಯೂಬ್ ಸುರಂಗ’
ಸರಕು ಸಾಗಣೆ ಸುಲಲಿತವಾಗಲಿದ್ದು ವೆಚ್ಚವೂ ಕಡಿಮೆಯಾಗಲಿದೆ
ಎರಡು ರಾಷ್ಟ್ರೀಯ ಹೆದ್ದಾರಿಗಳು(ರಾ.ಹೆ–15 ಹಾಗೂ ರಾ.ಹೆ–75) ಹಾಗೂ ಎರಡು ರೈಲು ಮಾರ್ಗಗಳನ್ನು ಜೋಡಿಸಲಿದೆ. ನಾರ್ತ್ ಫ್ರಂಟಿಯರ್ ರೈಲ್ವೆಯ ರಂಗಿಯಾ ವಿಭಾಗದ ರಂಗಿಯಾ–ಮುಕೊಂಗ್‌ಸೆಲೆಕ್ ರೈಲ್ವೆ ಸೆಕ್ಷನ್ (ಗೋಹಪುರ ಕಡೆ) ಹಾಗೂ ತೀನ್‌ಸುಕಿಯಾ ವಿಭಾಗದ ಫುರ್‌ಕಟಿಂಗ್–ಮರಿಯಾನಿ ಸೆಕ್ಷನ್(ನುಮಾಲಿಗಢ ಕಡೆ) ನಡುವೆ ಸಂಪರ್ಕ ಕಲ್ಪಿಸುತ್ತದೆ
ನಾಲ್ಕು ಪ್ರಮುಖ ರೈಲು ನಿಲ್ದಾಣಗಳು ಎರಡು ವಿಮಾನ ನಿಲ್ದಾಣಗಳು ಹಾಗೂ ಎರಡು ಒಳನಾಡು ಜಲಮಾರ್ಗಗಳಿಗೆ ಸಂಪರ್ಕ ಕಲ್ಪಿಸಿ ಪ್ರಯಾಣಿಕರ ಸಂಚಾರ ಸರಕುಗಳ ಸಾಗಣೆಗೆ ಹಾಗೂ ಪ್ರವಾಸೋದ್ಯಮಕ್ಕೆ ನೆರವಾಗಲಿದೆ
ಈ ಯೋಜನೆಯಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 80 ಲಕ್ಷ ಮಾನವ ದಿನಗಳಷ್ಟು ಉದ್ಯೋಗ ಸೃಷ್ಟಿಯಾಗಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.