
ನವದೆಹಲಿ: ಭಾರತ ಮತ್ತು ಫ್ರಾನ್ಸ್ ನಡುವೆ ರಕ್ಷಣಾ ವಿಷಯಗಳಿಗೆ ಸಂಬಂಧಿಸಿದ ಆರನೇ ದ್ವಿಪಕ್ಷೀಯ ಸಭೆ ಫೆಬ್ರುವರಿ 17ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ವೇಳೆ ಉಭಯ ರಾಷ್ಟ್ರಗಳು ಹತ್ತು ವರ್ಷಗಳ ರಕ್ಷಣಾ ಸಹಕಾರ ಒಪ್ಪಂದವನ್ನು ನವೀಕರಿಸಲಿವೆ.
ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಫ್ರಾನ್ಸ್‌ನ ರಕ್ಷಣಾ ಸಚಿವೆ ಕ್ಯಾಥರಿನ್ ವೋಥಾ ಅವರು ಎರಡೂ ದೇಶಗಳ ನಡುವಿನ ರಕ್ಷಣಾ ಸಹಕಾರದ ಕುರಿತು ಮಾತುಕತೆ ನಡೆಸಲಿದ್ದಾರೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಭಾರತದಲ್ಲಿ ಹಮರ್ ಕ್ಷಿಪಣಿಗಳನ್ನು ಅಭಿವೃದ್ದಿಪಡಿಸುವುದಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಇಬ್ಬರೂ ಸಹಿ ಹಾಕಲಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಕೋಲಾರ ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಅಡ್ವಾನ್ಸ್‌ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್‌ಎಲ್) ಮತ್ತು ಏರ್‌ಬಸ್ ಜಂಟಿಯಾಗಿ ಆರಂಭಿಸಿರುವ ಎಚ್ 125 ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಇಬ್ಬರೂ ಪಾಲ್ಗೊಳ್ಳಲಿದ್ದಾರೆ. ಈ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಅವರು ವರ್ಚುವಲ್ ಆಗಿ ಉದ್ಘಾಟಿಸುವರು.
ಇದು ಭಾರತದ ಮೊದಲ ಖಾಸಗಿ ಹೆಲಿಕಾಪ್ಟರ್ ತಯಾರಿಕಾ ಘಟಕವಾಗಿದ್ದು, 2027ರಲ್ಲಿ ಮೊದಲ ಹೆಲಿಕಾಪ್ಟರ್ ಅನ್ನು ಹೊರತರುವ ನಿರೀಕ್ಷೆಯಿದೆ.
ಉಭಯ ದೇಶಗಳ ನಡುವಿನ ಐದನೇ ದ್ವಿಪಕ್ಷೀಯ ಸಭೆ ನಡೆದ ಎರಡೂವರೆ ವರ್ಷಗಳ ನಂತರ ಈ ಸಭೆ ನಡೆಯುತ್ತಿದೆ. ಕೈಗಾರಿಕಾ ವಲಯದ ಸಹಕಾರವನ್ನು ವೃದ್ಧಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.