ADVERTISEMENT

President Speech | ಲಿಂಗ ಸಮಾನತೆಯಿಂದ ಸೇನೆಯು ಇನ್ನಷ್ಟು ಬಲವಾಗಲಿದೆ: ಕೋವಿಂದ್‌

ಪಿಟಿಐ
Published 25 ಜನವರಿ 2022, 19:07 IST
Last Updated 25 ಜನವರಿ 2022, 19:07 IST
ರಾಷ್ಟ್ರಪತಿ ರಾಮನಾಥ ಕೋವಿಂದ್‌
ರಾಷ್ಟ್ರಪತಿ ರಾಮನಾಥ ಕೋವಿಂದ್‌   

ನವದೆಹಲಿ: ‘ನಮ್ಮ ಹೆಣ್ಣುಮಕ್ಕಳು ಗಾಜಿನ ಮನೆಯಿಂದ ಹೊರ ಬಂದಿದ್ದಾರೆ. ಸೇನೆಗೆ ಮಹಿಳಾ ಅಧಿಕಾರಿಗಳು ಸೇರಿದ್ದಾರೆ. ಲಿಂಗ ಸಮಾನತೆಯಿಂದ ಸೇನೆಯು ಇನ್ನಷ್ಟು ಬಲವಾಗಲಿದೆ. ಸೈನಿಕ ಶಾಲೆ, ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಪ್ರತಿಭಾನ್ವಿತರು ರೂಪುತಳೆಯುತ್ತಿದ್ದಾರೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹೇಳಿದ್ದಾರೆ.

ಗಣರಾಜ್ಯೋತ್ಸವ ಮುನ್ನಾದಿನವಾದ ಮಂಗಳವಾರ ದೇಶವನ್ನು ಉದ್ದೇಶಿಸಿ ಮಾಡಿದ ಅವರು, ‘ಪ್ರಜಾಪ್ರಭುತ್ವ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ದೇಶವನ್ನು ಸದೃಢಗೊಳಿಸಿದೆ.ಮೂಲಭೂತ ಹಕ್ಕುಗಳನ್ನು ಸಂಭ್ರಮಿಸಲು ಸಂವಿಧಾನದಲ್ಲಿ ತಿಳಿಸಿದ ಮೂಲಭೂತ ಕರ್ತವ್ಯಗಳು ಪೂರಕ ವಾತಾವರಣ ಸೃಷ್ಟಿಸಿದೆ’ ಎಂದು ಪ್ರತಿಪಾದಿಸಿದರು.

‘ಕೋವಿಡ್‌ ರೂಪದ ಸವಾಲನ್ನು ದೇಶ ದೃಢವಾಗಿ ಎದುರಿಸಿದೆ. ಈಗ ದೃಢ ಮತ್ತು ಸೂಕ್ಷ್ಮತೆಯ ಭಾರತ ರೂಪುತಳೆಯುತ್ತಿದೆ. 73ನೇ ಗಣರಾಜ್ಯೋತ್ಸವದಲ್ಲಿ ಜನರು ‘ಭಾರತೀಯಕರಣ’ವನ್ನು ಸಂಭ್ರಮಿಸಬೇಕು’ ಎಂದೂ ಕರೆ ನೀಡಿದರು.

ADVERTISEMENT

‘ಭಾರತದ ಪ್ರಜಾಪ್ರಭುತ್ವದ ವೈವಿಧ್ಯ ಮತ್ತು ಅನುರಣತೆಗೆ ವಿಶ್ವವ್ಯಾಪಿ ಶ್ಲಾಘನೆಯಿದೆ. ಏಕತೆ ಮತ್ತು ನಾವೆಲ್ಲರೂ ಒಂದು ಎಂಬ ಸ್ಫೂರ್ತಿಯಿಂದಲೇ ಪ್ರತಿವರ್ಷ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ವರ್ಷ ಕೋವಿಡ್‌ನಿಂದಾಗಿ ಆ ಸಂಭ್ರಮವು ಮುಸುಕಾಗಿರಬಹುದು, ಆದರೆ ಉತ್ಸಾಹವು ಕುಗ್ಗಿಲ್ಲ’ ಎಂದು ಹೇಳಿದರು.

ಜನಸಂಖ್ಯೆ ಕಾರಣದಿಂದಾಗಿ ಕೋವಿಡ್‌ ನಿರ್ವಹಣೆಯು ಹೆಚ್ಚು ಸಂಕೀರ್ಣವಾಗಿತ್ತು. ಇಂತಹ ಸಂಕಷ್ಟ ಸ್ಥಿತಿಯಲ್ಲೂ ನಾವು ಸ್ಥಿರತೆ ಕಾಯ್ದುಕೊಂಡೆವು. ವೈದ್ಯಕೀಯ ಕ್ಷೇತ್ರದವರು ಅವಿರತ ದುಡಿದರು. ನಾಯಕತ್ವ, ನೀತಿ, ನಿರೂಪಕರು, ಆಡಳಿತಗಾರರು, ಸಕಾಲದಲ್ಲಿ ಮಧ್ಯಪ್ರವೇಶಿಸಿ ನಿರ್ಧಾರ ಕೈಗೊಂಡರು. ಆರ್ಥಿಕತೆಯ ದೃಷ್ಟಿಯಿಂದ ಇದು ಸವಾಲಿನದಾಗಿತ್ತು. ಆದರೆ, ಈ ಹಣಕಾಸು ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ ಎಂದರು.

ಕೃಷಿ ಮತ್ತು ಉತ್ಪಾದಕ ವಲಯದಲ್ಲಿನ ಪ್ರಗತಿಯಿಂದಾಗಿ ಆರ್ಥಿಕತೆಯ ಸಾಧನೆ ಸಾಧ್ಯವಾಗಿದೆ. ಕೃಷಿಕರು ಮುಖ್ಯವಾಗಿ ಯುವಕೃಷಿಕರು ಸಹಜ ಕೃಷಿ ಪದ್ಧತಿ ಅಳವಡಿಸಿಕೊಳ್ಳುತ್ತಿದ್ದಾರೆ. ಇದು, ಸಂತಸದ ಬೆಳವಣಿಗೆ ಎಂದರು.

ಮಹಾತ್ಮಗಾಂಧಿ ಅವರನ್ನು ಭಾಷಣದಲ್ಲಿ ಉಲ್ಲೇಖಿಸಿ, ‘ಉತ್ತಮ ಭಾರತ, ಜಗತ್ತು ನಿರ್ಮಿಸಲು ಗಣನೀಯ ಕೊಡುಗೆ ನೀಡುವುದು ಮತ್ತು ಉತ್ತಮ ಮನುಷ್ಯರಾಗಿ ಗಣರಾಜ್ಯೊತ್ಸವ ಆಚರಿಸುವುದು ಅವರಿಗೆ ಇಷ್ಟವಾಗಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.