ಕೌಲಾಲಂಪುರ: ಆಮದು ಕಡಿಮೆ ಮಾಡಿ, ದೇಶೀಯವಾಗಿ ತಾಳೆ ಕೃಷಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತವು ಕ್ರಮ ಕೈಗೊಂಡಿದೆ. ಹೀಗಾಗಿ ಮಲೇಷ್ಯಾದಿಂದ ಮೊಳಕೆಯೊಡೆದ ತಾಳೆ ಬೀಜ ಖರೀದಿಸಿರುವ ಅಗ್ರ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.
2024ರಲ್ಲಿ 33 ಲಕ್ಷ ಟನ್‌ನಷ್ಟು ತಾಳೆ ಬೀಜವನ್ನು ಮಲೇಷ್ಯಾದಿಂದ ಭಾರತವು ಖರೀದಿಸಿದೆ. ತಾಳೆ ಎಣ್ಣೆ ಖರೀದಿಯಲ್ಲಿ ಶೇ 17.9ರಷ್ಟನ್ನು ಮಲೇಷ್ಯಾದಿಂದಲೇ ಖರೀದಿಸಿದ್ದು, ಆ ವಹಿವಾಟಿನಲ್ಲೂ ಮೊದಲ ರಾಷ್ಟ್ರವೆನಿಸಿದೆ.
‘ದೇಶದಲ್ಲಿ ಬಿಕರಿಯಾಗುವ ತಾಳೆ ಬೀಜಕ್ಕೆ ಗರಿಷ್ಠ ಪ್ರಮಾಣದ ಬೇಡಿಕೆ ಸೃಷ್ಟಿಯಾಗಿದ್ದು, ವಿಶೇಷವಾಗಿ ಭಾರತವೇ ಹೆಚ್ಚಿನ ಪಾಲನ್ನು ಖರೀದಿಸಿದೆ’ ಎಂದು ಮಲೇಷ್ಯಾ ತಾಳೆ ಎಣ್ಣೆ ಬೋರ್ಡ್‌ನ ಮಹಾ ನಿರ್ದೇಶಕ ಜನರಲ್ ಅಹಮ್ಮದ್ ಪರ್ವೇಜ್ ಗುಲಾಮ್ ಖಾದಿರ್ ತಿಳಿಸಿದ್ದಾರೆ.
‘ಖಾದ್ಯ ತೈಲ–ತಾಳೆ ಎಣ್ಣೆ ರಾಷ್ಟ್ರೀಯ ಯೋಜನೆ ಅಡಿ’ಯಲ್ಲಿ 2025–26ರಲ್ಲಿ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಮರ ನೆಡಲು ಉದ್ದೇಶಿಸಿದ್ದು, 2029–30ರ ವೇಳೆಗೆ 28 ದಶಲಕ್ಷ ಟನ್ ತಾಳೆ ಎಣ್ಣೆ ಉತ್ಪಾದಿಸುವ ಗುರಿ ಹೊಂದಿದೆ.
ಪ್ರಸಕ್ತ ಮಲೇಷ್ಯಾದಲ್ಲಿ 3.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಎಣ್ಣೆ ಕೃಷಿ ನಡೆಯುತ್ತಿದ್ದು, ಈಶಾನ್ಯ ರಾಜ್ಯ ಹಾಗೂ ದ್ವೀಪಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ.
‘ಬೀಜ ಖರೀದಿ ವ್ಯವಹಾರವು ಹೆಚ್ಚಾಗಿ ಅನೌಪಾಚರಿಕವಾಗಿಯೇ ನಡೆಯುತ್ತಿದ್ದು, ಅಧಿಕೃತ ಹಾಗೂ ದೀರ್ಘಕಾಲಿಕ ಒಪ್ಪಂದದ ಮೇಳೆ ನಡೆಯುತ್ತಿಲ್ಲ’ ಎಂದು ಖಾದಿರ್ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.