ADVERTISEMENT

ಕೋವಿಡ್–19 ಲಸಿಕೆ: ಮೊದಲ ಹಂತದ ಕಾರ್ಯಕ್ರಮಕ್ಕೆ ಭಾರತಕ್ಕೆ ಬೇಕು 180 ಕೋಟಿ ಡಾಲರ್

ರಾಯಿಟರ್ಸ್
Published 18 ಡಿಸೆಂಬರ್ 2020, 6:33 IST
Last Updated 18 ಡಿಸೆಂಬರ್ 2020, 6:33 IST
ಕೋವಿಡ್ ಲಸಿಕೆಯ ಸಾಂದರ್ಭಿಕ ಚಿತ್ರ (ಕೃಪೆ: ಎಎಫ್‌ಪಿ)
ಕೋವಿಡ್ ಲಸಿಕೆಯ ಸಾಂದರ್ಭಿಕ ಚಿತ್ರ (ಕೃಪೆ: ಎಎಫ್‌ಪಿ)   

ನವದೆಹಲಿ: ದೇಶದಲ್ಲಿ ಮೊದಲ ಹಂತದ ಕೊರೊನಾ ಲಸಿಕೆ ಹಾಕಿಸುವ ಕಾರ್ಯಕ್ರಮಕ್ಕೆ 140 ಕೋಟಿಯಿಂದ 180 ಕೋಟಿ ಡಾಲರ್ ಖರ್ಚಾಗಬಹುದು. ಜಾಗತಿಕ ಲಸಿಕೆ ಹಂಚಿಕೆ ಯೋಜನೆ ‘ಕೊವ್ಯಾಕ್ಸ್’ ಬೆಂಬಲದ ಹೊರತಾಗಿಯೂ ಇಷ್ಟು ವೆಚ್ಚವಾಗಬಹುದು ಎಂದು ಬಡ ದೇಶಗಳಲ್ಲಿ ಲಸಿಕೆ ನೀಡಿಕೆ ಹೆಚ್ಚಿಸುವ ಗುರಿಯೊಂದಿಗೆ ಖಾಸಗಿ, ಸರ್ಕಾರಿ ಸಹಭಾಗಿತ್ವದಲ್ಲಿ ರೂಪಿಸಲಾಗಿರುವ ಮೈತ್ರಿಕೂಟ ಜಿಎವಿಐ ಅಂದಾಜಿಸಿದೆ.

ಜಾಗತಿಕವಾಗಿ ಅತಿಹೆಚ್ಚು ಮಂದಿಗೆ ಕೊರೊನಾ ಸೋಂಕು ತಗುಲಿರುವ ದೇಶಗಳ ಯಾದಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಮುಂದಿನ 6ರಿಂದ 8 ತಿಂಗಳುಗಳಲ್ಲಿ 30 ಕೋಟಿ ಜನರಿಗೆ ಲಸಿಕೆ ಹಾಕಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಆಸ್ಟ್ರಾಜೆನೆಕಾ, ರಷ್ಯಾದ ಸ್ಪುಟ್ನಿಕ್ ವಿ, ಝೈಡಸ್ ಕ್ಯಾಡಿಲಾ ಹಾಗೂ ದೇಶೀಯ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಗಳನ್ನು ಭಾರತ ಬಳಸಿಕೊಳ್ಳುವ ನಿರೀಕ್ಷೆ ಇದೆ.

ಹೆಚ್ಚು ಅಪಾಯದಲ್ಲಿರುವವರು ಸೇರಿದಂತೆ ಮೊದಲ ಹಂತವೊಂದರಲ್ಲೇ ಭಾರತದಲ್ಲಿ 60 ಕೋಟಿ ಜನರಿಗೆ ಲಸಿಕೆ ನೀಡಬೇಕಾಗಬಹುದು. ಇದಕ್ಕೆ ಭಾರತ ಎದುರಿಸುವ ಹಣಕಾಸು ಸವಾಲಿನ ಬಗ್ಗೆ ‘ರಾಯಿಟರ್ಸ್’ ಪರಿಶೀಲಿಸಿರುವ ದಾಖಲೆಗಳು ಬೆಳಕುಚೆಲ್ಲಿವೆ.

‘ಕೊವ್ಯಾಕ್ಸ್’ ಯೋಜನೆಯಡಿ ಭಾರತಕ್ಕೆ 19ರಿಂದ 25 ಕೋಟಿಯಷ್ಟು ಡೋಸ್‌ಗಳು ದೊರೆತರೆ ಉತ್ತಮ. ಉಳಿದ ಡೋಸ್‌ಗಳಿಗಾಗಿ ಸರ್ಕಾರವು 140 ಕೋಟಿ ಡಾಲರ್ ವ್ಯಯಿಸಬೇಕಾಗಬಹುದು ಎಂದು ಜಿಎವಿಐನ ಮೂರು ದಿನಗಳ ಸಭೆಯಲ್ಲಿ ಸಿದ್ಧಪಡಿಸಲಾಗಿರುವ ಅಪ್ರಕಟಿತ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮತ್ತೊಂದೆಡೆ, ‘ಕೊವ್ಯಾಕ್ಸ್’ ಯೋಜನೆಯಡಿ 9.5 ಕೋಟಿಯಿಂದ 12.5 ಕೋಟಿಯಷ್ಟು ಡೋಸ್ ಮಾತ್ರ ದೊರೆತಲ್ಲಿ ಸರ್ಕಾರವು 180 ಕೋಟಿ ಡಾಲರ್ ಮೊತ್ತ ವ್ಯಯಿಸಬೇಕಾಗಬಹುದು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.