ADVERTISEMENT

ಜನವರಿ ಅಂತ್ಯದ ವೇಳೆಗೆ ನಿತ್ಯ 10 ಲಕ್ಷ ಕೋವಿಡ್‌ ಪ್ರಕರಣ: ಐಐಎಸ್‌ಸಿ-ಐಎಸ್‌ಐ ತಂಡ

ಐಎಎನ್ಎಸ್
Published 8 ಜನವರಿ 2022, 3:45 IST
Last Updated 8 ಜನವರಿ 2022, 3:45 IST
   

ನವದೆಹಲಿ: ಜನವರಿ ಅಂತ್ಯ ಅಥವಾ ಫೆಬ್ರುವರಿ ಆರಂಭದಲ್ಲಿ ಭಾರತದಲ್ಲಿ ನಿತ್ಯ 10 ಲಕ್ಷಕ್ಕೂ ಅಧಿಕ ಕೋವಿಡ್‌ ಪ್ರಕರಣಗಳು ವರದಿಯಾಗಬಹುದು ಎಂದು ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ಸಾಂಖ್ಯಿಕ ಸಂಸ್ಥೆ ಹೇಳಿದೆ.

ಬೆಂಗಳೂರಿನ ಐಐಎಸ್‌ಸಿ-ಐಎಸ್‌ಐನ ‘ಸೆಂಟರ್ ಫಾರ್ ನೆಟ್‌ವರ್ಕ್ಡ್ ಇಂಟೆಲಿಜೆನ್ಸ್‌ನ’ ಪ್ರೊಫೆಸರ್ ಶಿವ ಆತ್ರೇಯ, ಪ್ರೊಫೆಸರ್ ರಾಜೇಶ್ ಸುಂದರೇಶನ್ ಮತ್ತು ತಂಡ ಕೋವಿಡ್‌ ಅಲೆಯ ಮಾದರಿಯನ್ನು ಸಿದ್ಧಪಡಿಸಿದೆ. ಕೋವಿಡ್ ಮೂರನೇ ಅಲೆಯು ಜನವರಿ ಅಂತ್ಯ ಅಥವಾ ಫೆಬ್ರುವರಿ ಆರಂಭದಲ್ಲಿ ಉತ್ತುಂಗಕ್ಕೇರಬಹುದು ಎಂದು 'ಪ್ರೊಜೆಕ್ಷನ್ಸ್ ಜನವರಿ-ಮಾರ್ಚ್ 2022 ಐಐಎಸ್‌ಸಿ-ಐಎಸ್‌ಐ ಮಾಡೆಲ್'ನಲ್ಲಿ ಭವಿಷ್ಯ ನುಡಿದಿದೆ.

ಮೂರನೇ ಅಲೆಯು ವಿವಿಧ ರಾಜ್ಯಗಳಲ್ಲಿ ವಿವಿಧ ಬಗೆಯಲ್ಲಿರುತ್ತದೆ. ಮಾರ್ಚ್ ಆರಂಭದ ವೇಳೆಗೆ ಅಲೆಯು ತಗ್ಗಲಾರಂಭಿಸುತ್ತದೆ ಎಂದು ತಂಡ ತಿಳಿಸಿದೆ.

ADVERTISEMENT

ಐಐಎಸ್‌ಸಿಯ ಮಾದರಿಯನ್ನು ಶೇ 30, ಶೇ 60, ಶೇ 100 ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.

ಶೇ 30ರಲ್ಲಿ ದೇಶದಲ್ಲಿ ನಿತ್ಯ 3 ಲಕ್ಷ ಮಂದಿ ಸೋಂಕಿಗೆ ಒಳಗಾಗಲಿದ್ದಾರೆ. ಶೇ 60 ರಲ್ಲಿ 6 ಲಕ್ಷ ಪ್ರಕರಣಗಳು ವರದಿಯಾಗಲಿವೆ. ಶೇ 100 ರಲ್ಲಿ ನಿತ್ಯ 10 ಲಕ್ಷಕ್ಕೂ ಅಧಿಕ ಕೋವಿಡ್‌ ಪ್ರಕರಣಗಳು ಪತ್ತೆಯಾಗಲಿವೆ ಎಂದು ಮಾದರಿಯಲ್ಲಿ ಉಲ್ಲೇಖಿಸಲಾಗಿದೆ.

ಎಂದಿನಂತೆಯೇ ಮಹಾರಾಷ್ಟ್ರವು ಈ ಬಾರಿಯೂ ಅತಿ ಹೆಚ್ಚು ಪ್ರಕರಣಗಳನ್ನು ಕಾಣಲಿದೆ. ಅಲ್ಲಿ ನಿತ್ಯ 1,75,000 ಪ್ರಕರಣಗಳು ವರದಿಯಾಗಲಿವೆ ಎಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.