ಪಣಜಿ: ‘ಭಾರತವು ನಕ್ಸಲ್–ಮಾವೋವಾದಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಹಾದಿಯಲ್ಲಿದೆ. ಈ ಪಿಡುಗಿನಿಂದ ಮುಕ್ತವಾದ 100ಕ್ಕೂ ಹೆಚ್ಚು ಜಿಲ್ಲೆಗಳು ಈ ವರ್ಷ ದೀಪಾವಳಿಯನ್ನು ಗೌರವ, ಘನತೆಯಿಂದ ಆಚರಿಸಲಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಗೋವಾ ಕರಾವಳಿಯಲ್ಲಿ ಐಎನ್ಎಸ್ ವಿಕ್ರಾಂತ್‌ನಲ್ಲಿ ಸಶಸ್ತ್ರ ಪಡೆಗಳನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಪ್ರಧಾನಿ, ‘ನಮ್ಮ ಭದ್ರತಾ ಪಡೆಗಳ ಶೌರ್ಯ, ಧೈರ್ಯದಿಂದಾಗಿ ದೇಶವು ಕಳೆದ ಕೆಲವು ವರ್ಷಗಳಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ಸಾಧಿಸಿದೆ. 2014ಕ್ಕಿಂತ ಮೊದಲು ದೇಶದಾದ್ಯಂತ ಸುಮಾರು 125 ಜಿಲ್ಲೆಗಳು ಮಾವೋವಾದಿಗಳ ಹಿಡಿತದಲ್ಲಿದ್ದವು. ಕಳೆದ ದಶಕದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳಿಂದಾಗಿ ಮಾವೋವಾದಿಗಳ ಚಟುವಟಿಕೆ ಕೇವಲ 11 ಜಿಲ್ಲೆಗಳಿಗೆ ಸೀಮಿತಗೊಂಡಿದೆ’ ಎಂದು ತಿಳಿಸಿದರು.
‘ಈ 11 ಜಿಲ್ಲೆಗಳ ಪೈಕಿ ಮೂರರಲ್ಲಿ ಮಾತ್ರ ಮಾಮೋವಾದಿಗಳ ಪ್ರಭಾವವಿದೆ. 100ಕ್ಕೂ ಹೆಚ್ಚು ಜಿಲ್ಲೆಗಳು ಮೊದಲ ಬಾರಿಗೆ ಪರಿಶುದ್ಧ ಗಾಳಿಯನ್ನು ಉಸಿರಾಡುತ್ತಿವೆ ಮತ್ತು ಭವ್ಯವಾದ ದೀಪಾವಳಿಯನ್ನು ಆಚರಿಸುತ್ತಿವೆ’ ಎಂದು ಹೇಳಿದರು.
‘ಈ ಪ್ರದೇಶಗಳಲ್ಲಿ ಶಾಲೆ, ರಸ್ತೆ ಮತ್ತು ಆಸ್ಪತ್ರೆಗಳನ್ನು ನಿರ್ಮಿಸಲು ಮಾವೋವಾದಿಗಳು ಅವಕಾಶ ನೀಡಿರಲಿಲ್ಲ. ಶಾಲೆ ಮತ್ತು ಆಸ್ಪತ್ರೆಗಳನ್ನು ಸ್ಫೋಟಿಸುತ್ತಿದ್ದರು. ವೈದ್ಯರನ್ನು ಗುಂಡಿಕ್ಕಿ ಕೊಲ್ಲುತ್ತಿದ್ದರು. ಅದೇ ಪ್ರದೇಶಗಳಲ್ಲಿ ಈಗ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ. ಹೊಸ ವ್ಯವಹಾರಗಳು ಬೇರೂರುತ್ತಿವೆ. ಶಾಲೆ ಮತ್ತು ಆಸ್ಪತ್ರೆಗಳು ಮಕ್ಕಳಿಗೆ ಹೊಸ ಭವಿಷ್ಯವನ್ನು ನಿರ್ಮಿಸುತ್ತಿವೆ. ಭದ್ರತಾ ಪಡೆಗಳ ತಪಸ್ಸು, ತ್ಯಾಗ ಮತ್ತು ಧೈರ್ಯದಿಂದಾಗಿ ಈ ಯಶಸ್ಸು ಸಾಧ್ಯವಾಗಿದೆ’ ಎಂದು ತಿಳಿಸಿದರು.
ಶ್ರೇಷ್ಠ ಸಂಕೇತ: ‘ಐಎನ್‌ಎಸ್ ವಿಕ್ರಾಂತ್ ಆತ್ಮನಿರ್ಭರ ಭಾರತದ ಶ್ರೇಷ್ಠ ಸಂಕೇತ. ಇದು ಕೇವಲ ಯುದ್ಧನೌಕೆಯಲ್ಲ. 21ನೇ ಶತಮಾನದ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಪ್ರಭಾವ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ಬ್ರಹ್ಮೋಸ್ ಹೆಸರೇ ಕೆಲವರ ಮನಸ್ಸಿನಲ್ಲಿ ಭಯ ಹುಟ್ಟಿಸುತ್ತದೆ. ಈಗ ಅನೇಕ ದೇಶಗಳು ಈ ಕ್ಷಿಪಣಿಗಳನ್ನು ಖರೀದಿಸಲು ಉತ್ಸುಕವಾಗಿವೆ’ ಎಂದು ಮೋದಿ ಹೇಳಿದರು.
ಭೂಸೇನೆ ವಾಯುಸೇನೆ ಹಾಗೂ ನೌಕಾಸೇನೆಯ ನಡುವಿನ ಅಸಾಧಾರಣ ಸಮನ್ವಯವು ಆಪರೇಷನ್ ಸಿಂಧೂರ ಸಮಯದಲ್ಲಿ ಪಾಕಿಸ್ತಾನ ಶರಣಾಗುವಂತೆ ಮಾಡಿತು.ನರೇಂದ್ರ ಮೋದಿ, ಪ್ರಧಾನಿ
‘ಭಾರತವನ್ನು ವಿಶ್ವದ ಅಗ್ರ ರಕ್ಷಣಾ ರಫ್ತುದಾರ ದೇಶಗಳಲ್ಲಿ ಒಂದನ್ನಾಗಿ ಮಾಡುವುದು ನಮ್ಮ ಸರ್ಕಾರದ ಗುರಿಯಾಗಿದೆ. 2014ರಿಂದ ನಮ್ಮ ಶಿಪ್‌ಯಾರ್ಡ್‌ಗಳಲ್ಲಿ 40ಕ್ಕೂ ಹೆಚ್ಚು ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲಾಗಿದೆ’ ಎಂದು ತಿಳಿಸಿದರು.
ನೌಕಾಪಡೆಯೊಂದಿಗೆ ಪ್ರಧಾನಿ ದೀಪಾವಳಿ ಆಚರಣೆ
ಯುದ್ಧನೌಕೆ ಐಎನ್ಎಸ್ ವಿಕ್ರಾಂತ್‌ನಲ್ಲಿರುವ ನೌಕಾಪಡೆಯ ಯೋಧರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಹಬ್ಬವನ್ನು ಆಚರಿಸಿದರು.
ಭಾನುವಾರ ಸಂಜೆ ಗೋವಾದ ಕರಾವಳಿಗೆ ಆಗಮಿಸಿದ ಪ್ರಧಾನಿ ಸ್ವದೇಶಿ ನಿರ್ಮಿತ ಯುದ್ಧನೌಕೆಯನ್ನು ಹತ್ತಿದರು. ಬಳಿಕ ಮಿಗ್ 29ಕೆ ಯುದ್ಧ ವಿಮಾನಗಳಿಂದ ಸುತ್ತುವರಿದ ಫ್ಲೈಟ್‌ಡೆಕ್‌ಗೆ ಹೋದರು. ಹಗಲು ಹಾಗೂ ರಾತ್ರಿಯಲ್ಲಿ ಯುದ್ಧನೌಕೆಯ ಸಣ್ಣ ರನ್‌ವೇಯಲ್ಲಿ ಮಿಗ್ 29 ಯುದ್ಧ ವಿಮಾನಗಳ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಅನ್ನು ವೀಕ್ಷಿಸಿದರು.
ಭಾರತೀಯ ನೌಕಾಪಡೆಯ ಅಧಿಕಾರಿಗಳು ಮತ್ತು ನಾವಿಕರು ವಿವಿಧ ದೇಶಭಕ್ತಿ ಗೀತೆಗಳನ್ನು ಹಾಡಿದರು. ರೋಮಾಂಚಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಮೋದಿ ಸಾಕ್ಷಿಯಾದರು. ಇದರಲ್ಲಿ ಭಾರತೀಯ ಸಶಸ್ತ್ರ ಪಡೆಗಳ ‘ಆಪರೇಷನ್ ಸಿಂಧೂರ’ದ ಯಶಸ್ಸನ್ನು ಸ್ಮರಿಸಲು ಅವರು ವಿಶೇಷವಾಗಿ ಬರೆದ ಹಾಡು ಸಹ ಸೇರಿದೆ. ಬಳಿಕ ಪ್ರಧಾನಿಯು ನೌಕಾಪಡೆ ಸಿಬ್ಬಂದಿಯ ಕುಟುಂಬದವರೊಂದಿಗೆ ಊಟ ಸವಿದರು.
ಸೋಮವಾರ ಬೆಳಿಗ್ಗೆ ಮೋದಿ ಐಎನ್ಎಸ್ ವಿಕ್ರಾಂತ್‌ನ ಡೆಕ್‌ನಲ್ಲಿ ನಡೆದ ಯೋಗಾಸನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಯುದ್ಧನೌಕೆಗಳ ಅದ್ಭುತ ಹಾರಾಟವನ್ನು ವೀಕ್ಷಿಸಿದರು. ನೌಕಾಪಡೆಯ ಸಿಬ್ಬಂದಿಗೆ ಸಿಹಿ ತಿನ್ನಿಸಿದರು. ಪ್ರಧಾನಿಯು 2014ರಿಂದಲೂ ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿ ಆಚರಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.