ADVERTISEMENT

ಪಾಕ್‌ ಸೇನೆ ಉಗ್ರರ ಪರ ನಿಂತದ್ದೇ ಸಂಘರ್ಷಕ್ಕೆ ಕಾರಣ: ಏರ್‌ ಮಾರ್ಷಲ್ ಎಕೆ ಭಾರ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮೇ 2025, 10:15 IST
Last Updated 12 ಮೇ 2025, 10:15 IST
<div class="paragraphs"><p>ಏರ್ ಮಾರ್ಷಲ್ ಎ.ಕೆ.ಭಾರ್ತಿ</p></div>

ಏರ್ ಮಾರ್ಷಲ್ ಎ.ಕೆ.ಭಾರ್ತಿ

   

ನವದೆಹಲಿ: ‘ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಲ್ಲಿ ಪಾಕ್ ಸೇನೆಯು ಭಯೋತ್ಪಾದಕರ ಪರ ನಿಂತದ್ದೇ ಸೇನಾ ಸಂಘರ್ಷಕ್ಕೆ ಕಾರಣವಾಯಿತು’ ಎಂದು ಏರ್‌ ಮಾರ್ಷಲ್‌ ಎ.ಕೆ. ಭಾರ್ತಿ ತಿಳಿಸಿದ್ದಾರೆ.

ಆಪರೇಷನ್ ಸಿಂಧೂರ ಕುರಿತು ಸೇನಾ ಕಾರ್ಯಾಚರಣೆ ಕುರಿತು ಸೋಮವಾರ ಅವರು ಮಾಹಿತಿ ನೀಡಿದರು.

ADVERTISEMENT

‘ಭಾರತ ಮೇಲಿನ ದಾಳಿಯಲ್ಲಿ ಪಾಕಿಸ್ತಾನ ಸೇನೆಯು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಡ್ರೋನ್‌ಗಳು ಮತ್ತು ಮಾನವ ರಹಿತ ವಿಮಾನಗಳನ್ನು ಬಳಕೆ ಮಾಡಿತು. ಆದರೆ ಭಾರತದ ವಾಯು ರಕ್ಷಣಾ ವ್ಯವಸ್ಥೆಯಿಂದಾಗಿ ಅವರ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಲಾಯಿತು’ ಎಂದಿದ್ದಾರೆ.

‘ಚೀನಾ ನಿರ್ಮಿತ ಪಿಎಲ್‌–15 ಕ್ಷಿಪಣಿಯನ್ನು ಭಾರತದ ಮೇಲೆ ಪಾಕಿಸ್ತಾನ ಪ್ರಯೋಗಿಸಿದೆ. ಆದರೆ ಗುರಿ ತಲುಪುವಲ್ಲಿ ಅದು ವಿಫಲವಾಗಿದೆ. ಅವರು ಹಾರಿಸಿದ ರಾಕೇಟ್ ಮತ್ತು ಮಾನವ ಸಹಿತ ವಿಮಾನಗಳನ್ನು ಭಾರತೀಯ ವಾಯು ಸೇನೆಯ ನುರಿತ ಯೋಧರು ಮತ್ತು ವಾಯು ರಕ್ಷಣಾ ವ್ಯವಸ್ಥೆ ವಿಫಲಗೊಳಿಸಿದೆ’ ಎಂದು ವಿವರಿಸಿದ್ದಾರೆ.

‘ಭಾರತೀಯ ಸೇನೆಯ ಯೋಜನಾಬದ್ಧ ರಕ್ಷಣೆಯಿಂದಾಗಿ ನಮ್ಮ ಎಲ್ಲಾ ಸೇನಾ ನೆಲೆಗಳು ಸುರಕ್ಷಿತವಾಗಿವೆ. ಜತೆಗೆ ರಕ್ಷಣಾ ಸಾಮಗ್ರಿಗಳು ಎಂದಿನಂತೆಯೇ ಪರಿಪೂರ್ಣವಾಗಿ ಕಾರ್ ನಿರ್ವಹಿಸುತ್ತಿವೆ. ಆಕಾಶ್‌ ಕ್ಷಿಪಣಿ ಬಳಸಿ ಶತ್ರುಗಳ ಕ್ಷಿಪಣಿಯನ್ನು ನಾಶಪಡಿಸಿದ್ದೇವೆ’ ಎಂದಿದ್ದಾರೆ.

ಲೆಫ್ಟಿನೆಂಟ್ ಜನರಲ್ ರಾಜೀವ್ ಗಾಯಿ ಮಾಹಿತಿ ನೀಡಿ, ‘ನಮ್ಮ ವಾಯು ನೆಲೆಯನ್ನು ಗುರಿಯಾಗಿಸುವುದು ಬಹಳಾ ಕಷ್ಟ. ನಾನು ಬಹುವಾಗಿ ಇಷ್ಟಪಡುವ ವಿರಾಟ್ ಕೊಹ್ಲಿ ಇಂದು ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ 1970ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ನಡುವಿನ ಪಂದ್ಯ ನಡೆದಿತ್ತು. ಆಸೀಸ್‌ನ ದೈತ್ಯ ಬೌಲರ್‌ಗಳು ಇಂಗ್ಲೆಂಡ್‌ ಬ್ಯಾಟರ್‌ಗಳನ್ನು ಪುಡಿಗಟ್ಟಿದ್ದರು. ಆ ಸಂರ್ಭದಲ್ಲಿ ಆಸ್ಟ್ರೇಲಿಯಾ ಒಂದು ಒಕ್ಕಣೆ ಬರೆದುಕೊಂಡಿತ್ತು. ‘ಬೂದಿಗೆ ಬೂದಿ, ದೂಳಿಗೆ ದೂಳು, ಥಾಮ್ಸನ್‌ ವಿಕೆಟ್‌ ಪಡೆಯದಿದ್ದರೆ, ಲಿಲ್ಲಿ ಖಂಡಿತವಾಗಿಯೂ ಪಡೆಯುತ್ತಾರೆ’ ಎಂದಿತ್ತು. ಹಾಗೆಯೇ ಭಾರತದ ಹಲವು ಹಂತಗಳ ರಕ್ಷಣಾ ಕೋಟೆಯನ್ನು ಭೇದಿಸಲು ಕನಿಷ್ಠ ಒಂದರಲ್ಲಾದರೂ ಪೆಟ್ಟು ತಿನ್ನುವುದು ಖಚಿತ’ ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಘೋಷಣೆಯಾಗಿದ್ದು, ಈ ಕುರಿತು ಉಭಯ ರಾಷ್ಟ್ರಗಳ ಮಿಲಿಟರಿ ಕಾರ್ಯಾಚರಣೆಯ ಸೇನಾ ಜನರಲ್‌ಗಳ ಸಭೆ ಇಂದು (ಸೋಮವಾರ) ಸಂಜೆ ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.