ADVERTISEMENT

ಮುಂದಿನ ಬಾರಿ ಸಂಯಮ ತೋರುವುದಿಲ್ಲ ಎಂದು ಪಾಕ್‌ಗೆ ಎಚ್ಚರಿಕೆ ನೀಡಿದ ಸೇನಾ ಮುಖ್ಯಸ್ಥ

ಪಿಟಿಐ
Published 3 ಅಕ್ಟೋಬರ್ 2025, 11:06 IST
Last Updated 3 ಅಕ್ಟೋಬರ್ 2025, 11:06 IST
<div class="paragraphs"><p>ಜನರಲ್ ಉಪೇಂದ್ರ ದ್ವಿವೇದಿ</p></div>

ಜನರಲ್ ಉಪೇಂದ್ರ ದ್ವಿವೇದಿ

   

ಪಿಟಿಐ ಚಿತ್ರ

ಜೈಪುರ: ‘ಭೂಪಟದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಬೇಕೆಂದರೆ ಭಯೋತ್ಪಾದನೆ ಪ್ರಾಯೋಜಿಸುವುದನ್ನು ಪಾಕಿಸ್ತಾನ ನಿಲ್ಲಿಸಬೇಕು’ ಎಂದು ಭೂಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶುಕ್ರವಾರ ಖಡಕ್ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಅನೂಪ್‌ಗಡ್‌ನಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭವಿಷ್ಯದಲ್ಲಿ ಸೇನಾ ಕಾರ್ಯಾಚರಣೆ ನಡೆದಲ್ಲಿ ಆಪರೇಷನ್ ಸಿಂಧೂರ ಸಂದರ್ಭದಲ್ಲಿ ನವದೆಹಲಿ ತೋರಿದ ಸಂಮಯಮ ಪುನರಾವರ್ತನೆಯಾಗುವುದಿಲ್ಲ. ಆಗ ತಕ್ಕ ಪಾಠ ಕಲಿಸಲು ಭಾರತೀಯ ಸೇನೆ ಸಜ್ಜಾಗಬೇಕು’ ಎಂದು ಅವರು ಹೇಳಿದ್ದಾರೆ.

‘ಮುಂದಿನ ಸಮರಕ್ಕೆ ಭಾರತ ಸಂಪೂರ್ಣವಾಗಿ ಸನ್ನದ್ಧವಾಗಿದೆ. ಆಪರೇಷನ್ ಸಿಂಧೂರ–1.0 ಸಂದರ್ಭದಲ್ಲಿ ತೋರಿದ ಯಾವುದೇ ಕರುಣೆ ಮುಂದೆ ಇರದು. ಮುಂದಿನ ಬಾರಿ ಭಾರತೀಯ ಸೇನೆ ನೀಡುವ ಉತ್ತರವು, ಪಾಕಿಸ್ತಾನವನ್ನು ಭೂಪಟದಿಂದಲೇ ನಿರ್ನಾಮ ಮಾಡಲಿದೆ. ಸೈನಿಕರು ಈಗಿನಿಂದಲೇ ಸಜ್ಜಾಗಿರಬೇಕು. ದೇವರ ಕೃಪೆ ಇದ್ದರೆ ಅವಕಾಶ ಅತಿ ಶೀಘ್ರದಲ್ಲಿ ಬರಬಹುದು’ ಎಂದಿದ್ದಾರೆ.

‘ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದಕರ ಅಡಗುತಾಣಗಳಿರುವುದನ್ನು ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಇಡೀ ಜಗತ್ತಿಗೆ ಭಾರತ ತೋರಿಸಿದೆ. ಭಾರತವು ಇದನ್ನು ತೆರೆದಿಡದಿದ್ದರೆ, ಪಾಕಿಸ್ತಾನ ಅವೆಲ್ಲವನ್ನೂ ಅಡಗಿಸಿಡುತ್ತಿತ್ತು. ಏ. 22ರ ಪಹಲ್ಗಾಮ್ ದಾಳಿಯ ನಂತರ ಭಾರತೀಯ ಸೇನೆ ಆರಂಭಿಸಿದ ಆಪರೇಷನ್ ಸಿಂಧೂರಕ್ಕೆ ಇಡೀ ಜಗತ್ತೇ ಬೆಂಬಲ ವ್ಯಕ್ತಪಡಿಸಿತು. ಪಾಕಿಸ್ತಾನದ ನೆಲದಲ್ಲೇ ಒಂಬತ್ತು ಅಡಗುತಾಣಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ದಾಳಿ ನಡೆಸಿತು. ಇದರಲ್ಲಿ ಏಳು ಅಡಗುತಾಣಗಳನ್ನು ಭೂಸೇನೆ ನಾಶಪಡಿಸಿದರೆ, ಎರಡನ್ನು ವಾಯು ಸೇನೆ ನಾಶಪಡಿಸಿತು’ ಎಂದು ವಿವರಿಸಿದ್ದಾರೆ.

‘ಭಯೋತ್ಪಾದಕರ ಅಡಗುತಾಣಗಳ ಖಚಿತ ಮಾಹಿತಿ ಆಧರಿಸಿ, ಅದನ್ನೇ ಗುರಿಯಾಗಿಸಿ ದಾಳಿ ನಡೆಸಲಾಯಿತು. ಪಾಕಿಸ್ತಾನದ ಯಾವೊಬ್ಬ ನಾಗರಿಕನಿಗೂ ಹಾನಿಯಾದ ವರದಿಯಾಗಿಲ್ಲ. ಭಯೋತ್ಪಾದಕರನ್ನು ತಾನೆಂದೂ ಪೋಷಿಸಿಲ್ಲ ಎಂದು ಹೇಳಿಕೊಂಡು ಬರುತ್ತಿದ್ದ ಪಾಕಿಸ್ತಾನದ ಕೃತ್ಯವು ಭಾರತೀಯ ಸೇನೆಯ ದಾಳಿಯಲ್ಲಿ ಬಟಾಬಯಲಾಯಿತು’ ಎಂದು ಜನರಲ್ ದ್ವಿವೇದಿ ಹೇಳಿದ್ದಾರೆ.

ಅಂತರರಾಷ್ಟ್ರೀಯ ಗಡಿರೇಖೆ ಬಳಿ ವಾಸಿಸುತ್ತಿರುವವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಗಡಿ ಭಾಗದಲ್ಲಿ ವಾಸಿಸುವವರು ಸಾಮಾನ್ಯ ಜನರಲ್ಲ. ಅವರೂ ಸೈನಿಕರಿದ್ದಂತೆ. ಪ್ರತಿ ಕದನದಲ್ಲೂ ಅವರು ಸೇನೆಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ. ಮುಂಬರುವ ಸಂಘರ್ಷವು, ಸೇನೆಯದ್ದು ಮಾತ್ರವಾಗಿರದೆ ರಾಷ್ಟ್ರದ ಸಂಘರ್ಷವಾಗಿರಲಿದೆ’ ಎಂದು ಗುಡುಗಿದ್ದಾರೆ.

‘1965 ಮತ್ತು 1971ರ ಯುದ್ಧದಲ್ಲಿ ಸಾಮಾನ್ಯ ಜನರು ಸೇನೆಗೆ ನೆರವಾಗಿದ್ದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲೂ ಜನರಿಂದ ಅದೇ ಸಹಕಾರವನ್ನು ಸೇನೆ ನಿರೀಕ್ಷಿಸುತ್ತದೆ. ಅವರ ಉತ್ಸಾಹ ನಮ್ಮ ಸೈನಿಕರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು’ ಎಂದು ಜನರಲ್ ದ್ವಿವೇದಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.