ನವದೆಹಲಿ: ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಜಮ್ಮು ಸೇರಿದಂತೆ ಅನೇಕ ಸ್ಥಳಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಲು ಪ್ರಯತ್ನಿಸಿತ್ತು. ಆದರೆ ಭಾರತ ದಿಟ್ಟ ಉತ್ತರ ನೀಡುವ ಮೂಲಕ ಪಾಕಿಸ್ತಾನದ ಪ್ರಯತ್ನಗಳಿಗೆ ತಣ್ಣೀರು ಎರಚಿದೆ.
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ನಾರಾಯಣ್ ಅವರು ಉತ್ತರ ಕಮಾಂಡ್‌ನ ಸೇನಾ ಅಧಿಕಾರಿಗೆ ಮಿಲಿಟರಿ ಸನ್ನದ್ಧತೆಯ ಕುರಿತು ಗೌಪ್ಯ ಪತ್ರವನ್ನು ಕಳುಹಿಸಿದ್ದಾರೆ ಎನ್ನಲಾಗುವ ಪತ್ರವೊಂದು ಹರಿದಾಡಿತ್ತು.
ಈ ಬಗ್ಗೆ 'ಪಿಐಬಿ' ಫ್ಯಾಕ್ಟ್‌ಚೆಕ್ ಪೋಸ್ಟ್ ಹಂಚಿಕೊಂಡಿದ್ದು, ಇದೊಂದು ಸುಳ್ಳು ಸುದ್ದಿಯಾಗಿದೆ. ಈ ಪತ್ರವು ಸಂಪೂರ್ಣವಾಗಿ ನಕಲಿಯಾಗಿದೆ. ಜನರಲ್ ವಿ.ಕೆ. ನಾರಾಯಣ್ ಸೇನಾ ಮುಖ್ಯಸ್ಥರಲ್ಲ. ಪರಿಶೀಲಿಸದೇ ಯಾವುದೇ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ ಮತ್ತು ಅಂತಹ ನಕಲಿ ಸುದ್ದಿಗಳನ್ನು ನಂಬಬೇಡಿ ಎಂದು ತಿಳಿಸಿದೆ.
ನಿಖರವಾದ ಮಾಹಿತಿಗಳಿಗಾಗಿ ಭಾರತ ಸರ್ಕಾರ ಅಧಿಕೃತ ಖಾತೆಗಳನ್ನು ಮಾತ್ರ ಅವಲಂಬಿಸಿ ಎಂದು 'ಪಿಐಬಿ' ಕಿವಿಮಾತು ಹೇಳಿದೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ 'ಆಪರೇಷನ್ ಸಿಂಧೂರ' ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು.
ಗುರುವಾರ ತಡರಾತ್ರಿಯೂ ಭಾರತ ಪಾಕಿಸ್ತಾನದ ವಿವಿಧ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಪಾಕ್‌ಗೆ ಮತ್ತೊಮ್ಮೆ ತಿರುಗೇಟು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.