ADVERTISEMENT

ದೆಹಲಿ ದೇಶದ ಆರನೇ ಕಲುಷಿತ ನಗರಿ: ವರದಿ

ಪಿಟಿಐ
Published 4 ನವೆಂಬರ್ 2025, 13:39 IST
Last Updated 4 ನವೆಂಬರ್ 2025, 13:39 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೃಪೆ: ಎಐ

ನವದೆಹಲಿ: ಅಕ್ಟೋಬರ್‌ನಲ್ಲಿ ಗಾಳಿಯು ಅತಿ ಹೆಚ್ಚು ಕಲುಷಿತಗೊಂಡ ದೇಶದ 10 ನಗರಗಳ ಪಟ್ಟಿಯಲ್ಲಿ ದೆಹಲಿ ಆರನೇ ಸ್ಥಾನ ಪಡೆದಿದ್ದು, ಗಾಜಿಯಾಬಾದ್‌ ಮತ್ತು ನೊಯಿಡಾ ನಂತರದ ಸ್ಥಾನದಲ್ಲಿವೆ ಎಂದು ಅಧ್ಯಯನವೊಂದು ತಿಳಿಸಿದೆ. 

ADVERTISEMENT

ಶಕ್ತಿ ಮತ್ತು ಶುದ್ಧ ಗಾಳಿಯ ಸಂಶೋಧನಾ ಕೇಂದ್ರ (ಸಿಆರ್‌ಇಎ) ಮಂಗಳವಾರ ಬಿಡುಗಡೆ ಮಾಡಿದ ಅಕ್ಟೋಬರ್‌ ತಿಂಗಳ ವಾಯು ಗುಣಮಟ್ಟದ ವರದಿಯ ಪ್ರಕಾರ, ಹರಿಯಾಣದ ಧಾರುಹೆಡಾ ನಗರವು  ಅಕ್ಟೋಬರ್‌ನಲ್ಲಿ ವಾಯು ಮಾಲಿನ್ಯದಲ್ಲಿ ಮೊದಲ ಸ್ಥಾನದಲ್ಲಿತ್ತು. ಅಲ್ಲಿ ಪ್ರತಿ ಘನ ಮೀಟರ್‌ ಗಾಳಿಯಲ್ಲಿ 123 ಮೈಕ್ರೋ ಗ್ರಾಂನಷ್ಟು ಮಾಲಿನ್ಯಕಾರಕ ಕಣಗಳು ಪತ್ತೆಯಾಗಿದ್ದವು.

ದೇಶದಾದ್ಯಂತ ಗಾಳಿಯ ಗುಣಮಟ್ಟದಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಇಂಡೋ–ಗಂಗಾ ಬಯಲು (ಐಜಿಪಿ), ವಿಶೇಷವಾಗಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಆರ್‌ಸಿ) ಪರಿಸ್ಥಿತಿ ತೀವ್ರ ಹದಗೆಟ್ಟಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ದೆಹಲಿಯಲ್ಲಿ ಅಕ್ಟೋಬರ್‌ನಲ್ಲಿ ಪ್ರತಿ ಘನ ಮೀಟರ್‌ ಗಾಳಿಯಲ್ಲಿ ಮಾಲಿನ್ಯಕಾರಕ ಕಣಗಳ ಸಾಂದ್ರತೆಯ ಪ್ರಮಾಣ 107 ಮೈಕ್ರೋ ಗ್ರಾಂನಷ್ಟಿತ್ತು. ವಾಯು ಗುಣಮಟ್ಟದ ಆಧಾರದ ಮೇಲೆ ಈ ತಿಂಗಳಲ್ಲಿ ಎರಡು ‘ತೀವ್ರ’ ಮತ್ತು ಒಂಬತ್ತು ‘ಅತ್ಯಂತ ಕಳಪೆ’ ದಿನಗಳು ದಾಖಲಾಗಿವೆ.

ಧಾರುಹೆಡಾ ನಂತರ, ರೋಹ್ಟಕ್‌, ಗಾಜಿಯಾಬಾದ್, ನೊಯಿಡಾ, ಬಲ್ಲಭಗಢ, ದೆಹಲಿ, ಭಿವಾಡಿ, ಗ್ರೇಟರ್‌ ನೊಯಿಡಾ, ಹಾಪುರ ಮತ್ತು ಗುರುಗ್ರಾಮಗಳು ಅತಿ ಹೆಚ್ಚು ಕಲುಷಿತಗೊಂಡ ನಗರಗಳಾಗಿವೆ.

ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿ ಹುಲ್ಲು ಸುಡುವಿಕೆಯು ಶೇ 6ಕ್ಕಿಂತ ಕಡಿಮೆಯಾಗಿತ್ತು. ಆದರೂ, ವಾಯು ಮಾಲಿನ್ಯದ ಪ್ರಮಾಣ ಏರಿಕೆಯಾಗುತ್ತಲೇ ಇತ್ತು ಎಂದು ವರದಿ ತಿಳಿಸಿದೆ.

ವಾಯು ಗುಣಮಟ್ಟದ ಮೇಲ್ವಿಚಾರಣಾ ಕೇಂದ್ರದ (ಸಿಎಎಕ್ಯೂಎಂಎಸ್‌) ದತ್ತಾಂಶದ ಆಧಾರದ ಮೇಲೆ ವಿಶ್ಲೇಷಿಸಲಾಗಿದೆ. ಒಟ್ಟಾರೆಯಾಗಿ, ಅತಿ ಹೆಚ್ಚು ಕಲುಷಿತಗೊಂಡ 10 ನಗರಗಳ ಪೈಕಿ ಉತ್ತರ ಪ್ರದೇಶ ಮತ್ತು ಹರಿಯಾಣದ ತಲಾ ನಾಲ್ಕು ನಗರಗಳು ಇದ್ದು, ಎಲ್ಲವೂ ಎನ್‌ಸಿಆರ್ ವ್ಯಾಪ್ತಿಯಲ್ಲಿವೆ.

ಕರ್ನಾಟಕದಲ್ಲಿ ನಾಲ್ಕು ಸ್ವಚ್ಛ ನಗರಗಳು

ಮೊದಲ 10 ಸ್ವಚ್ಚ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ನಾಲ್ಕು ನಗರಗಳು ಸೇರಿವೆ. ಅಕ್ಟೋಬರ್‌ನಲ್ಲಿ ಮೇಘಾಲಯದ ಶಿಲ್ಲಾಂಗ್ ಭಾರತದ ಅತ್ಯಂತ ಸ್ವಚ್ಛ ನಗರವಾಗಿತ್ತು. ಅಲ್ಲಿ ಪ್ರತಿ ಘನ ಮೀಟರ್‌ ಗಾಳಿಯಲ್ಲಿನ ಮಾಲಿನಕಾರಕ ಕಣಗಳ ಸಾಂದ್ರತೆ 10 ಮೈಕ್ರೋ ಗ್ರಾಂ ಮಾತ್ರ ಇತ್ತು. ಕರ್ನಾಟಕದ ನಾಲ್ಕು ತಮಿಳುನಾಡಿನ ಮೂರು ಮೇಘಾಲಯ ಸಿಕ್ಕಿಂ ಮತ್ತು ಛತ್ತೀಸಗಢದ ತಲಾ ಒಂದು ನಗರಗಳು ಮೊದಲ ಹತ್ತು ಸ್ವಚ್ಛ ನಗರಗಳಲ್ಲಿ ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.