ADVERTISEMENT

ಭಯೋತ್ಪಾದನೆ ಸಂಹಾರಕ್ಕೆ ಭಾರತದಿಂದ ‘ಪ್ರಹಾರ್’ ನೀತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2026, 10:35 IST
Last Updated 25 ಫೆಬ್ರುವರಿ 2026, 10:35 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿತ್ರ ಕೃಪೆ; ಎಐ

2025ರ ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿ, ಪ್ರವಾಸಿಗರ ಸಾವಿಗೆ ಕಾರಣವಾಗಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ ಹೆಸರಿನ ಸೇನಾ ಕಾರ್ಯಾಚರಣೆ ನಡೆಸಿತ್ತು. ಇದಾದ ಕೆಲ ದಿನಗಳ ಬಳಿಕ ದೆಹಲಿಯ ಕೆಂಪು ಕೋಟೆ ಸಮೀಪ ಬಾಂಬ್ ಸ್ಫೋಟವಾಗಿ 15 ಮಂದಿ ಪ್ರಾಣ ಕಳೆದುಕೊಂಡರು. ಈ ಘಟನೆಯ ಬಳಿಕ ಭಾರತದ ಭದ್ರತೆ ಕುರಿತು ಕಳವಳ ವ್ಯಕ್ತವಾಗುತ್ತಿದೆ. ಇದೀಗ ಉಗ್ರ ಚಟುವಟಿಕೆಗಳನ್ನು ತ್ವರಿತವಾಗಿ ನಿಗ್ರಹಿಸಲು ಬಹು ಆಯಾಮದ ನೀತಿ ‘ಪ್ರಹಾರ್’ ಜಾರಿಯಾಗಿದೆ. ಭಾರತದ ಈ ಹೊಸ ನೀತಿ ಏನು? ಇದು ಹೇಗೆ ಕೆಲಸ ಮಾಡುತ್ತದೆ? ಭಯೋತ್ಪಾದಕರನ್ನು ಮಟ್ಟಹಾಕುವಲ್ಲಿ ಇದರ ಪಾತ್ರವೇನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಹತ್ತಿಕ್ಕಲು ಮತ್ತು ಉಗ್ರ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡುವ ಕಾರ್ಯತಂತ್ರವನ್ನು ರೂಪಿಸುವ ಉದ್ದೇಶದಿಂದ ಜಾರಿಗೆ ತಂದ ನೀತಿಯೇ ‘ಪ್ರಹಾರ್‌’. ದೇಶದಲ್ಲಿ ಇದೇ ಮೊದಲ ಬಾರಿಗೆ ಭಯೋತ್ಪಾದಕ ನಿಗ್ರಹ ನೀತಿ 'ಪ್ರಹಾರ್' ಅನ್ನು ಕೇಂದ್ರ ಗೃಹ ಸಚಿವಾಲಯ ಸೋಮವಾರ ಜಾರಿಗೆ ತಂದಿದೆ. ಇದು ಭಾರತದ ರಕ್ಷಣಾ ವಲಯದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ADVERTISEMENT

2024ರಲ್ಲಿ ಕೇಂದ್ರ ಗೃಹ ಸಚಿವ ಅಮೀತ್ ಶಾ ‘ಇಂದಿನ ಭಯೋತ್ಪಾದನೆ ನಾನಾ ಆಯಾಮಗಳನ್ನು ಪಡೆದುಕೊಂಡಿದೆ. ಕೇವಲ ಸ್ಪೋಟಕ ಸಿಡಿಸುವುದು ಮಾತ್ರವಲ್ಲದೇ ಮಾದಕ ಪದಾರ್ಥಗಳ ಸರಬರಾಜು, ಸೈಬರ್ ಕೃತ್ಯ ಇತ್ಯಾದಿ ರೂಪ ಪಡೆದಿದೆ. ಭಾರತ ಇದನ್ನು ಸಮಗ್ರವಾಗಿ ಎದುರಿಸಬೇಕಾದರೆ,  ಹೊಸದೊಂದು ನೀತಿ ರಚನೆಯಾಗಬೇಕು’ ಎಂದು ಹೇಳಿದ್ದರು. ಇದಾದ ಕೆಲವೇ ವರ್ಷಗಳಲ್ಲಿ ಭಯೋತ್ಪಾದನೆ ವಿರುದ್ಧ ಹೊಸ ನೀತಿ ಜಾರಿಯಾಗಿದೆ. ಈ ನೀತಿಯ ಮೂಲ ಉದ್ದೇಶ 2029ರ ಒಳಗೆ ಭಯೋತ್ಪಾದನೆ ಮುಕ್ತ ದೇಶವನ್ನಾಗಿಸುವುದಾಗಿದೆ. ಅಲ್ಲದೇ ಎಲ್ಲಾ ಭದ್ರತಾ ಸಂಸ್ಥೆಗಳು ಹಾಗೂ ಸ್ಥಳೀಯ ಪೊಲೀಸರೊಂದಿಗೆ ಸಮನ್ವಯತೆ ಸಾಧಿಸುವುದಾಗಿದೆ.

ಗೃಹ ಸಚಿವಾಲಯ ಸಿದ್ಧಪಡಿಸಿರುವ 9 ಪುಟಗಳ 'ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ ಮತ್ತು ಕಾರ್ಯತಂತ್ರ' ನೀತಿಯನ್ನು ಜಾರಿಗೆ ತಂದಿದೆ.

ಪ್ರಹಾರ್ (PRAHAAR) ನೀತಿಯ 7 ಆಧಾರ ಸ್ತಂಭಗಳಿವು

  • P- prevention –ಭಯೋತ್ಪಾದಕ ದಾಳಿಗಳನ್ನು ಸಮಗ್ರವಾಗಿ ತಡೆಗಟ್ಟುವುದು

  • R- respones- ದೇಶಕ್ಕೆ ಎದುರಾಗುವ ದಾಳಿಗಳಿಗೆ ತಕ್ಕ ಹಾಗೂ ತಕ್ಷಣ  ಪ್ರತಿಕ್ರಿಯೆ ನೀಡುವುದು 

  • A- aggregating- ದೇಶದಲ್ಲಿರುವ ಭದ್ರತೆಗೆ ಸಂಬಂಧಿಸಿದಂತೆ ಇರುವ ಎಲ್ಲ ಸರ್ಕಾರಿ ಇಲಾಖೆಗಳು ಹಾಗೂ ಭದ್ರತಾ ಸಂಸ್ಥೆಗಳ ನಡುವೆ ಸಂಪರ್ಕ ಮತ್ತು ಸಮನ್ವಯತೆ 

  • H- human rights -ದಾಳಿ ವೇಳೆ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಎಚ್ಚರವಹಿಸುವುದು.

  • A- attenuating - ಉಗ್ರವಾದಕ್ಕೆ ಕುಮ್ಮಕ್ಕು ಕೊಡುವ ಪರಿಸ್ಥತಿಗಳನ್ನು ಬೇರು ಸಮೇತ ನಿರ್ಮೂಲನೆ ಮಾಡುವುದು. ಮತ್ತು ಉಗ್ರವಾದದ ಕಡೆಗೆ ಯುವಕರ ಮನಃಪರಿವರ್ತನೆ ತಪ್ಪಿಸುವುದು.

  • A- aligning - ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಯನ್ನು ಮಟ್ಟಹಾಕಲು ಇತರೆ ದೇಶಗಳೊಂದಿಗೆ ಕೈ ಜೋಡಿಸುವುದು

  • R- recovery-  ಭಯೋತ್ಪಾದಕ ದಾಳಿ ನಡೆದರೆ ಸಂಪೂರ್ಣ ಸಮಾಜವನ್ನು ತೊಡಗಿಸಿಕೊಂಡು ಪುನರ್ರಚನೆ ಮತ್ತು ಪುನಶ್ಚಾತನಕ್ಕೆ ಪ್ರಯತ್ನಿಸುವುದು.

ದೇಶ ಎದುರಿಸುತ್ತಿರುವ ಬೆದರಿಕೆ...

  • ಅಲ್ ಕೈದಾ, ಐಸಿಸ್ ಸೇರಿದಂತೆ ಇತರ ಭಯೋತ್ಪಾದಕರ ಸಂಘಟನೆಗಳ ಗುರಿಯಾಗಿರುವುದು

  • ಗಡಿಯಾಚೆಗಿನ ಹ್ಯಾಂಡ್ಲರ್‌ಗಳಿಂದ ಡೋನ್‌ಗಳು ಸೇರಿದಂತೆ ಆಧುನಿಕ ತಂತ್ರಜ್ಞಾನದ ಬಳಕೆ

  • ಕ್ರಿಮಿನಲ್‌ ನೆಟ್‌ವರ್ಕ್‌ಗಳನ್ನು ಬಳಸಿ ಉಗ್ರರನ್ನು ನೇಮಿಸಿ ಕೊಳ್ಳುವುದು

  • ಉಗ್ರರಿಂದ ಕೋಡ್ ವರ್ಡ್‌ಗಳು, ಡಾರ್ಕ್ ವೆಬ್, ಕ್ರಿಪ್ರೊ ವ್ಯಾಲೆಟ್‌ಗಳ ಬಳಕೆ

  • ಡೋನ್‌ಗಳು, ರೊಬಾಟಿಕ್ಸ್ ಗಳ ದುರುಪಯೋಗ

  • ಕ್ರಿಮಿನಲ್‌ ಹ್ಯಾಕರ್‌ಗಳು, ಸೈಬರ್ ದಾಳಿ ಮೂಲಕ ದೇಶವನ್ನು ಗುರಿಯಾಗಿಸಿರುವುದು

ದಾಳಿಗೆ ಮುನ್ನ ಉಗ್ರರ ಸಂಹಾರ...

ಈ ಮೊದಲು ದಾಳಿ ನಡೆಸಿದ ಉಗ್ರರನ್ನು ಬಂಧಿಸಿ ಅವರ ವಿರುದ್ದ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಮಾಡುತ್ತಿದ್ದರು. ಅವರಿಗೆ ಸರಿಯಾದ ಶಿಕ್ಷೆಯಾಗುವುದರ ಯಾವುದೇ ಖಾತರಿ ಇರಲಿಲ್ಲ. ಆದರೆ ಈ ಪಾಲಿಸಿ, ಇದರಿಂದ ಸಂಪೂರ್ಣ ಭಿನ್ನವಾಗಿದೆ. ಉಗ್ರರನ್ನು ಬಂಧಿಸುವುದರಿಂದ ಹಿಡಿದು ನ್ಯಾಯಾಲಯಕ್ಕೆ ಹಾಜರು ಪಡಿಸುವವರೆಗೂ ಕಾನೂನು ತಜ್ಞರು ಜತೆಗೆ ಇರಲಿದ್ದಾರೆ. ಇದರಿಂದ ಉಗ್ರರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ನೀತಿ ಉಲ್ಲೇಖಿಸಿದೆ. ಅಲ್ಲದೆ ದಾಳಿಗೂ ಮುನ್ನ ಗುಪ್ತಚರ ಇಲಾಖೆ ಮಾಹಿತಿಯನ್ನು ಆಧರಿಸಿ ಉಗ್ರರನ್ನು ಸಂಹಾರ ಮಾಡುವ ತಂತ್ರವೂ ಇದೆ. ಇದಕ್ಕೆ ಎಂಎಸಿ ಮತ್ತು ಜೆಟಿಎಫ್‌ಐ ಸಂಸ್ಥೆಗಳು ಕೈಜೋಡಿಸಲಿವೆ. ಮಾಹಿತಿ ಸರಬರಾಜಿಗೂ ವೇಗ ಸಿಗಲಿದೆ.

ಭದ್ರತಾ ‍ಪಡೆಗಳೊಂದಿಗೆ ಸಮನ್ವಯ

ಭಯೋತ್ಪಾದನೆ ವಿರುದ್ಧ 'ಶೂನ್ಯ ಸಹಿಷ್ಣುತೆ' ಅನುಸರಿಸುವುದು, ಭಯೋತ್ಪಾದನೆ ನಿಗ್ರಹ ಕಾರ್ಯದಲ್ಲಿ ತೊಡಗಿರುವ ಏಜೆನ್ಸಿಗಳ ನಡುವೆ ಸಮನ್ವಯತೆ ಸಾಧಿಸುವುದು ನೀತಿಯ ಮುಖ್ಯ ಗುರಿಗಳಲ್ಲಿ ಒಂದು. ದೇಶದಲ್ಲಿ ಏಕರೂಪವಾದ ಉಗ್ರ ನಿಗ್ರಹ ದಳದ ಪಾಲಿಸಿಯನ್ನು ಜಾರಿ ಮಾಡಲಾಗುತ್ತದೆ. ಇದರಿಂದಾಗಿ ದೇಶದ ಯಾವುದೇ ಮೂಲೆಯಲ್ಲಿ ಉಗ್ರ ಚಟುವಟಿಕೆ ನಡೆದರೆ ತಕ್ಷಣ ಎಲ್ಲಾ ರಾಜ್ಯದ ಪೊಲೀಸರಿಗೆ ಮಾಹಿತಿ ರವಾನೆಯಾಗುತ್ತದೆ. ಅಲ್ಲದೇ ಪೊಲೀಸ್‌ ಸಹಯೋಗದಲ್ಲಿ ಕಾರ್ಯಚರಣೆಗಳು ನಡೆಯುತ್ತವೆ. ಈ ಹಿಂದೆ ಕೆಲ ಬಾರಿ ಕಾರ್ಯಚರಣೆಗಳಲ್ಲಿ ಸಮನ್ವಯತೆ ಕುರಿತ ಗೊಂದಲ ಉಂಟಾಗಿದ್ದವು. ಇದು ಉಗ್ರರಿಗೆ ನೆರವಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಸಮನ್ವಯತೆ ನೀತಿ ಜಾರಿಗೆ ತಂದಿದೆ. ಒಟ್ಟಾರೆ ರಾಜ್ಯಗಳನ್ನು ದೇಶದ ಭದ್ರತಾ ಪಡೆಗಳಲ ನೆಟ್‌ವರ್ಕ್‌ನೊಂದಿಗೆ ಜೋಡಿಸಲಾಗುತ್ತದೆ. 

ಡ್ರೋನ್‌ ಮತ್ತು ಡಾರ್ಕ್‌ ವೆಬ್‌

ಪ್ರಸ್ತುತ ಉಗ್ರರು ತಮ್ಮ ಕೃತ್ಯಗಳಲ್ಲಿ ತಂತ್ರಜ್ಞಾನದ ಬಳಕೆ ಮಾಡುತ್ತಿದ್ದಾರೆ. ಡ್ರೋನ್‌ಗಳ ಮೂಲಕ ಮಾದಕ ಪದಾರ್ಥ, ಆಯುಧ ಸೇರಿದಂತೆ ಉಗ್ರರಿಗೆ ಬೇಕಾದ ಇತರೆ ಸಲಕರಣೆಗಳನ್ನು ತಲುಪಿಸುತ್ತಿರುವುದು ವರದಿಯಾಗಿದೆ. ಮತ್ತೊಂದೆಡೆ ಕಂಪ್ಯೂಟರ್‌ ಮೂಲಕ ಡಾರ್ಕ್‌ ವೆಬ್‌, ಸೈಬರ್‌ ದಾಳಿಗಳು ನಡೆಸುತ್ತಿದ್ದಾರೆ. ಇದನ್ನು ಸಮಗ್ರವಾಗಿ ಎದುರಿಸಲು ಸಿಬಿಆರ್‌ಎನ್‌ಇಡಿ ಇನ್ನಷ್ಟು ಬಲಿಷ್ಟವಾಗಲಿದೆ. ಜತೆಗೆ ಭಯೋತ್ಪಾದಕರಿಗೆ ಸಿಗುತ್ತಿರುವ ಹಣಕಾಸಿನಿ ನೇರವನ್ನು ತಪ್ಪಿಸುವ ಯೋಜನೆ ಇದೆ.

ಭಯೋತ್ಪಾದನೆ ಜಾತಿ ಧರ್ಮ ಆಧರಿತವಲ್ಲ.

ಈ ನೀತಿಯಲ್ಲಿ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಭಯೋತ್ಪಾದನೆ ಯಾವುದೇ ಜಾತಿ, ಧರ್ಮ, ರಾಷ್ಟೀಯತೆಗೆ ಸಿಮೀತವಾಗಿಲ್ಲ. ದೇಶದಲ್ಲಿ ಆಶಾಂತಿ ಸೃಷ್ಟಿಸುವವರು ಹಾಗೂ ಕಾನೂನು ಉಲ್ಲಂಘನೆ ಮಾಡಿದವರಿಗೆ ಶಿಕ್ಷೆಯಾಗಲಿದೆ. ಭಾರತವು ಹಿಂದಿನಿಂದಲೂ ಗಡಿಯಾಚೆಗಿನ ಭಯೋತ್ಪಾದನೆಯಿಂದ ಬಹಳ ತೊಂದರೆ ಅನುಭವಿಸಿದೆ. ಜಿಹಾದಿ ಭಯೋತ್ಪಾದಕ ಸಂಘಟನೆಗಳು ಮತ್ತು ಅವುಗಳ ಅಂಗ ಸಂಸ್ಥೆಗಳು ಭಯೋತ್ಪಾದಕ ದಾಳಿ ಯೋಜಿಸುವುದು, ಸಂಘಟಿಸುವುದು ಮತ್ತು ಕಾರ್ಯಗತಗೊಳಿಸುವುದನ್ನು ಮುಂದುವರಿಸಿವೆ. ಸ್ವೀಪರ್ ಸೆಲ್‌ಗಳ ಮೂಲಕ ದೇಶದಲ್ಲಿ ಹಿಂಸೆ ಹರಡಲು ಪ್ರಯತ್ನಿಸುತ್ತಿರುವ ಅಲ್‌ಕೈದಾ ಮತ್ತು ಐಸಿಸ್‌ನಂತಹ ಜಾಗತಿಕ ಭಯೋತ್ಪಾದಕ ಸಂಘಟನೆಗಳಿಗೆ ಭಾರತ ಗುರಿಯಾಗಿದೆ. ಇದು ಉಗ್ರರ ವಿರುದ್ಧದ ಹೊರಟ, ಯಾವುದೇ ಧರ್ಮದ ವಿರುದ್ಧ ಅಲ್ಲ ಎಂದು ವರದಿಯಲ್ಲಿ ಹೇಳಿದೆ.

ಯುವಕರ ಬ್ರೈನ್‌ವಾಷ್‌ಗೆ ಕಡಿವಾಣ

ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಯುವಕರನ್ನು ಮನಃಪರಿವರ್ತನೆ ಮಾಡಿ ಭಯೋತ್ಪಾದಕ ಕೃತ್ಯದಲ್ಲಿ ಭಾಗಿ ಮಾಡಲಾಗುತಿತ್ತು. ಈ ಹೊಸ ನೀತಿ ಇದಕ್ಕೆ ಕಡಿವಾಣ ಹಾಕಲಿದೆ. ದೇಶದಲ್ಲಿ ಯಾವೊಬ್ಬ ಯುವಕ ಭಯೋತ್ಪಾದನೆಯ ಪ್ರಭಾವಕ್ಕೆ ಒಳಗಾಗುತ್ತಿದ್ದಾನೆ ಎಂದು ತಿಳದ ತಕ್ಷಣ ಆತನ್ನು ಬಂಧಿಸುವುದಿಲ್ಲ. ಬದಲಾಗಿ ಆತನಿಗೆ ಸೂಕ್ತವಾದ ಕೌನ್ಸಿಲಿಂಗ್ ಕೊಡಿಸಲಾಗುತ್ತದೆ. ಜೊತೆಗೆ ಜೈಲುಗಳಲ್ಲಿಯೂ ಉಗ್ರರಿಂದ ನಡೆಯುವ ಮನಃಪರಿವರ್ತನೆ ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗಿದೆ. ಆರ್ಥಿಕವಾಗಿ ಹಿಂದುಳಿದ ಯುವಕರಿಗೆ ಉದ್ಯೋಗ ಹಾಗೂ ಪ್ರೋತ್ಸಾಹ ಧನ ಯೋಜನೆಯನ್ನು ಜಾರಿ ಮಾಡಲಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.