ನವದೆಹಲಿ: ‘ಅಮೆರಿಕ ಮತ್ತು ಭಾರತದ ನಡುವಿನ ಪಾಲುದಾರಿಕೆ ದ್ವಿಪಕ್ಷೀಯ ಸಂಬಂಧ ಹಲವು ಸ್ಥಿತ್ಯಂತರಗಳನ್ನು ಕಂಡಿದೆ. ಅನೇಕ ಸವಾಲುಗಳನ್ನು ಮೆಟ್ಟಿನಿಂತು ಮುಂದುವರಿದಿದೆ’ ಎಂದು ಭಾರತ ಶುಕ್ರವಾರ ಹೇಳಿದೆ.
ದೇಶದ ಮೇಲೆ ಶೇ 25ರಷ್ಟು ಸುಂಕ ವಿಧಿಸಿದ್ದಲ್ಲದೇ ‘ಭಾರತದ್ದು ‘ಸತ್ತ’ ಆರ್ಥಿಕತೆ’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಈ ಮೂಲಕ ತಿರುಗೇಟು ನೀಡಿದೆ.
‘ಭಾರತ ಮತ್ತು ಅಮೆರಿಕ ಸಮಗ್ರ ಪಾಲುದಾರಿಕೆ ಹೊಂದಿರುವ ರಾಷ್ಟ್ರಗಳಾಗಿವೆ. ಪ್ರಜಾಸತ್ತಾತ್ಮಕ ಮೌಲ್ಯಗಳು ಜನರ ನಡುವೆ ಉತ್ತಮ ಬಾಂಧವ್ಯದಿಂದ ಹಿಡಿದು ಹಲವಾರು ಸಾಮಾನ್ಯ ಹಿತಾಸಕ್ತಿಗಳು ಉಭಯ ದೇಶಗಳನ್ನು ಬೆಸೆದಿವೆ’ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ ಜೈಸ್ವಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
‘ಉಭಯ ದೇಶಗಳ ನಡುವಿನ ಪಾಲುದಾರಿಕೆ ಹಲವು ಸಂಕಷ್ಟಗಳನ್ನು ಎದುರಿಸಿಯೂ ಮುಂದುವರಿದಿದೆ. ಭವಿಷ್ಯದಲ್ಲಿಯೂ ಇದು ಮುಂದುವರಿಯಲಿದೆ ಎಂಬ ವಿಶ್ವಾಸ ನಮಗಿದೆ’ ಎಂದು ಹೇಳಿದ್ದಾರೆ.
‘ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿ ಎರಡೂ ದೇಶಗಳು ದೃಢವಾದ ಪಾಲುದಾರಿಕೆ ಹೊಂದಿವೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಇಂಧನ ಖರೀದಿ ಕುರಿತ ಮತ್ತೊಂದು ಪ್ರಶ್ನೆಗೆ ‘ಬೇರೆ ದೇಶಗಳಿಂದ ಇಂಧನ ಖರೀದಿಸುವ ವಿಚಾರವು ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಆಧರಿಸಿದೆ. ಪ್ರಚಲಿತ ಜಾಗತಿಕ ಸನ್ನಿವೇಶಗಳು ಹಾಗೂ ಮಾರುಕಟ್ಟೆ ವಿದ್ಯಮಾನಗಳ ಆಧಾರದಲ್ಲಿ ಇಂಧನ ಖರೀದಿ ಪ್ರಕ್ರಿಯೆ ನಡೆಯುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.