ADVERTISEMENT

India Covid-19 Update: 3.17 ಲಕ್ಷ ಕೋವಿಡ್ ಪ್ರಕರಣ; ಚೇತರಿಕೆ ಪ್ರಮಾಣ ಇಳಿಕೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 5:02 IST
Last Updated 20 ಜನವರಿ 2022, 5:02 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದಾದ್ಯಂತ ಗುರುವಾರ ಬೆಳಿಗ್ಗೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ 3,17,532ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು ಚೇತರಿಕೆ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಒಂದೇ ದಿನ 441 ಸೋಂಕಿತರು ಮೃತಪಟ್ಟಿದ್ದಾರೆ. ದೈನಂದಿನ ಚೇತರಿಕೆ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದ್ದು, ಕಳೆದ ವಾರದಲ್ಲಿ ಚೇತರಿಕೆ ಪ್ರಮಾಣ ಹೆಚ್ಚಿತ್ತು. ಗುರುವಾರ 2.23 ಲಕ್ಷ ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸೋಮವಾರ, ಮಂಗಳವಾರ ದೈನಂದಿನ ಪ್ರಕರಣಗಳಲ್ಲಿ ತುಸು ಇಳಿಕೆ ಕಂಡುಬಂದಿದ್ದರೆ, ಬುಧವಾರ, ಗುರುವಾರ ಮತ್ತೆ ಕೋವಿಡ್‌ ಸೋಂಕು ಹೆಚ್ಚಳವಾಗಿದೆ. ಸದ್ಯ ದೇಶದಲ್ಲಿ 19,24,051 ಸಕ್ರಿಯ ಪ್ರಕರಣಗಳಿವೆ. ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ 16.41ಕ್ಕೆ ಏರಿಕೆಯಾಗಿದೆ.

ADVERTISEMENT

ಈವರೆಗೆ 9287 ಓಮೈಕ್ರಾನ್ ಪ್ರಕರಣಗಳು ವರದಿಯಾಗಿವೆ. ಮಂಗಳವಾರಕ್ಕೆ ಹೋಲಿಸಿದರೆ ಓಮೈಕ್ರಾನ್ ದೃಢಪಟ್ಟ ಪ್ರಕರಣಗಳ ಪ್ರಮಾಣದಲ್ಲಿ ಶೇ 3.87ರ ಹೆಚ್ಚಳ ಕಂಡುಬಂದಿದೆ.

ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು ಜನರು ಜಾಗರೂಕರಾಗಿರಬೇಕು ಎಂದು ಹೇಳಿದೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.