ADVERTISEMENT

ನೌಕಾಪಡೆಗೆ 26 ರಫೇಲ್‌ ಖರೀದಿಗೆ ಅಸ್ತು: ಕೇಂದ್ರ ಸರ್ಕಾರ ಮಾಹಿತಿ

ಪಿಟಿಐ
Published 15 ಜುಲೈ 2023, 12:26 IST
Last Updated 15 ಜುಲೈ 2023, 12:26 IST
ರಫೇಲ್‌ ಯುದ್ಧ ವಿಮಾನ –ಪಿಟಿಐ ಚಿತ್ರ
ರಫೇಲ್‌ ಯುದ್ಧ ವಿಮಾನ –ಪಿಟಿಐ ಚಿತ್ರ   

ನವದೆಹಲಿ: ಭಾರತೀಯ ನೌಕಾಪಡೆಗೆ ಹೊಸ ಪೀಳಿಗೆಯ 26 ರಫೇಲ್ ಜೆಟ್‌ಗಳ ಖರೀದಿಗೆ ಕೇಂದ್ರ ಸರ್ಕಾರವು ಅಧಿಕೃತವಾಗಿ ಮುದ್ರೆ ಒತ್ತಿದೆ ಎಂದು ಫ್ರಾನ್ಸ್‌ನ ಫೈಟರ್‌ ಜೆಟ್ ರಫೇಲ್‌ ತಯಾರಿಕಾ ಕಂಪನಿಯಾದ ಡಸಾಲ್ಟ್‌ ಏವಿಯೇಷನ್‌ ಶನಿವಾರ ದೃಢಪಡಿಸಿದೆ.

ರಕ್ಷಣಾ ಸಚಿವಾಲಯವು ರಫೇಲ್‌ (ನೌಕಾಪಡೆ) ಜೆಟ್‌ಗಳ ಖರೀದಿಗೆ ಗುರುವಾರ ಒಪ್ಪಿಗೆ ನೀಡಿದೆ. ಈಗಾಗಲೇ, ಭಾರತೀಯ ವಾಯುಪಡೆಯಲ್ಲಿ 36 ರಫೇಲ್‌ ಜೆಟ್‌ಗಳಿವೆ. ಈಗ ನೌಕಾಪಡೆಗೆ ಹೊಸದಾಗಿ 26 ಜೆಟ್‌ಗಳು ಸೇರ್ಪಡೆಯಾಗುತ್ತಿದ್ದು, ರಕ್ಷಣಾ ಪಡೆಯ ಬತ್ತಳಿಕೆಯಲ್ಲಿರುವ ರಫೇಲ್‌ಗಳ ಸಂಖ್ಯೆ 62ಕ್ಕೆ ತಲುಪಲಿದೆ. ಆ ಮೂಲಕ ಭಾರತವು ವಾಯುಪಡೆ ಮತ್ತು ನೌಕಾಪಡೆ ಎರಡಕ್ಕೂ ಫ್ರಾನ್ಸ್‌ನಿಂದ ಜೆಟ್‌ಗಳನ್ನು ಖರೀದಿಸಿದ ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್‌ ಜೊತೆಗೂಡಿ ಬಿಡುಗಡೆ ಮಾಡಿದ ಪತ್ರದಲ್ಲಿ ಎಷ್ಟು ಜೆಟ್‌ಗಳನ್ನು ಖರೀದಿಸಲಾಗುತ್ತದೆ ಎಂಬ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಈಗ ಅಧಿಕೃತವಾಗಿ ಬಹಿರಂಗಗೊಂಡಿದೆ. 

ADVERTISEMENT

‘ಭಾರತೀಯ ನೌಕಾ ನೆಲೆಯಲ್ಲಿ ಈ ಜೆಟ್‌ಗಳ ಯಶಸ್ವಿ ಹಾರಾಟ, ಪ್ರದರ್ಶನದ ಬಳಿಕ ಭಾರತವು ಇವುಗಳನ್ನು ಖರೀದಿಸುತ್ತಿದೆ. ಅಲ್ಲಿನ ಯುದ್ಧ ವಿಮಾನಗಳ ವಾಹಕಗಳಿಗೆ ಅನುಗುಣವಾಗಿ ಇವುಗಳನ್ನು ತಯಾರಿಸಲಾಗಿದೆ’ ಎಂದು ಡಸಾಲ್ಟ್‌ ಕಂಪನಿ ತಿಳಿಸಿದೆ.

‘ಭಾರತದ ರಕ್ಷಣಾ ಪಡೆ ಮತ್ತು ಕಂಪನಿ ನಡುವಿನ ಸಹಭಾಗಿತ್ವಕ್ಕೆ 70 ವಸಂತಗಳು ಸಂದಿವೆ. ರಫೇಲ್‌ ಮೂಲಕ ನೌಕಾಪಡೆಯ ನಿರೀಕ್ಷೆಯನ್ನು ಸಾಕಾರಗೊಳಿಸಿದ್ದೇವೆ’ ಎಂದು ಕಂಪನಿಯ ಅಧ್ಯಕ್ಷ ಹಾಗೂ ಸಿಇಒ ಎರಿಕ್ ಟ್ರಾಪಿಯರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.