ADVERTISEMENT

ದೇಶದಲ್ಲಿ 1,515 ಐಎಎಸ್‌ ಅಧಿಕಾರಿಗಳ ಕೊರತೆ: ಸಂಸತ್ತಿಗೆ ಕೇಂದ್ರದ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮಾರ್ಚ್ 2022, 1:40 IST
Last Updated 25 ಮಾರ್ಚ್ 2022, 1:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ 1,515 ಭಾರತೀಯ ಆಡಳಿತ ಸೇವೆ (ಐಎಎಸ್‌) ಅಧಿಕಾರಿಗಳ ಕೊರತೆ ಇರುವುದಾಗಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಸಂಸತ್ತಿಗೆ ತಿಳಿಸಿದ್ದಾರೆ. ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ 59 ಐಎಎಸ್‌ ಅಧಿಕಾರಿಗಳಿದ್ದು, ಅಲ್ಲಿ 137 ಅಧಿಕಾರಿಗಳ ಅವಶ್ಯಕತೆ ಇದೆ ಎಂದಿದ್ದಾರೆ.

ಅವಶ್ಯವಿರುವ ಒಟ್ಟು ಅಧಿಕಾರಿಗಳ ಸಂಖ್ಯೆಯಲ್ಲಿ ತಮಿಳುನಾಡಿನಲ್ಲಿ ಅತಿ ಹೆಚ್ಚು ಸಂಖ್ಯೆಯ ಐಎಎಸ್‌ ಅಧಿಕಾರಿಗಳಿದ್ದು (ಶೇಕಡ 85), ಉತ್ತರ ಪ್ರದೇಶ, ಹರಿಯಾಣ ಹಾಗೂ ಮಧ್ಯ ಪ್ರದೇಶದಲ್ಲಿ ತಲಾ ಶೇಕಡ 84ರಷ್ಟು ಅಧಿಕಾರಿಗಳಿದ್ದಾರೆ. ದೇಶದಾದ್ಯಂತ ಐಎಎಸ್‌ ಅಧಿಕಾರಿಗಳು ನಿರ್ವಹಿಸಬಹುದಾದ 6,746 ಹುದ್ದೆಗಳಿರುವುದಾಗಿ ಜಿತೇಂದ್ರ ಸಿಂಗ್‌ ಬುಧವಾರ ಹೇಳಿದ್ದಾರೆ.

ಐಎಎಸ್‌ ಅಧಿಕಾರಿಗಳ ನೇಮಕಾತಿ ಹೆಚ್ಚಿಸುವ ಕೇಂದ್ರದ ಉದ್ದೇಶವನ್ನು ಅವರು ಉಲ್ಲೇಖಿಸಿದರು. ನಾಗರಿಕ ಸೇವಾ ಪರೀಕ್ಷೆಗಳ ಮೂಲಕ ವಾರ್ಷಿಕ ನೇಮಕ ಮಾಡುವ ಐಎಎಸ್‌ ಅಧಿಕಾರಿಗಳ ಸಂಖ್ಯೆಯನ್ನು 180ಕ್ಕೆ ಹೆಚ್ಚಿಸಲಾಗಿದೆ. 2020ರಿಂದ ಐಪಿಎಸ್‌ ಅಧಿಕಾರಿಗಳ ನೇಮಕಾತಿ ಪ್ರಮಾಣವನ್ನು 150ರಿಂದ 200ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅವಶ್ಯವಿರುವಷ್ಟು ಸಂಖ್ಯೆಯ ಅಧಿಕಾರಿಗಳನ್ನು ರಾಜ್ಯ ಸರ್ಕಾರಗಳು ಕಳುಹಿಸಿಕೊಡುತ್ತಿಲ್ಲ ಎಂದು ಸಂಸತ್ತಿಗೆ ತಿಳಿಸಿದ್ದಾರೆ.

ADVERTISEMENT

ಅವಶ್ಯವಿರುವ ಹುದ್ದೆಗಳಿಗೆ ನಿಯೋಜಿಸಲು ಲಭ್ಯವಿರುವ ಐಎಎಸ್‌ ಅಧಿಕಾರಿಗಳ ಸಂಖ್ಯೆ ಇಳಿಮುಖವಾಗಿದೆ. 2011ರಲ್ಲಿ ನಿಯೋಜನೆಗೆ ಲಭ್ಯರಿದ್ದ ಐಎಎಸ್‌ ಅಧಿಕಾರಿಗಳ ಸಂಖ್ಯೆ 309 ರಿಂದ 2022ರಲ್ಲಿ 223ಕ್ಕೆ ಇಳಿಕೆಯಾಗಿದೆ.

ನಾಗರಿಕ ಸೇವಾ ಪರೀಕ್ಷೆಗಳ ಮೂಲಕ 2022 ರಿಂದ 2030ರ ವರೆಗಿನ ಅವಧಿಯಲ್ಲಿ ಐಎಎಸ್‌ ಅಧಿಕಾರಿಗಳ ನೇರ ನೇಮಕಾತಿಗೆ ಸಂಬಂಧಿಸಿ ಶಿಫಾರಸುಗಳನ್ನು ಮಾಡಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.