ಸಾಂದರ್ಭಿಕ ಚಿತ್ರ
(ಎಐ ಚಿತ್ರ)
ನವದೆಹಲಿ: ಜಾಗತಿಕ ಲಿಂಗ ಸಮಾನತೆಯ ಅಂತರದ ರ‍್ಯಾಂಕಿಂಗ್‌ನಲ್ಲಿ ಭಾರತವು ಎರಡು ಸ್ಥಾನ ಕುಸಿತ ಕಂಡಿದ್ದು, 131ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಅದು 129ನೇ ಸ್ಥಾನದಲ್ಲಿತ್ತು.
ವಿಶ್ವ ಆರ್ಥಿಕ ವೇದಿಕೆ ಗುರುವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಸತತ 16ನೇ ವರ್ಷವೂ ಐಸ್‌ಲ್ಯಾಂಡ್ ಅಗ್ರಸ್ಥಾನದಲ್ಲಿದೆ. ಫಿನ್‌ಲ್ಯಾಂಡ್ ಎರಡನೇ ಸ್ಥಾನದಲ್ಲಿದ್ದರೆ, ನಾರ್ವೆ, ಬ್ರಿಟನ್ ಮತ್ತು ನ್ಯೂಜಿಲೆಂಡ್ ನಂತರದ ಸ್ಥಾನದಲ್ಲಿವೆ.
ಭಾರತವು ಕೇವಲ ಶೇ 64.1ರಷ್ಟು ಅಂಕಗಳೊಂದಿಗೆ ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಕಡಿಮೆ ಶ್ರೇಯಾಂಕಿತ ದೇಶಗಳಲ್ಲಿ ಒಂದಾಗಿದೆ.
ಜಾಗತಿಕವಾಗಿ ಪ್ರಮುಖ ಉದ್ಯಮಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ ಎಷ್ಟಿದೆ ಎಂಬುದನ್ನು ವರದಿ ವಿಶ್ಲೇಷಿಸಿದೆ. ಜಾಗತಿಕ ಲಿಂಗ ಅಂತರ ಸೂಚ್ಯಂಕವನ್ನು ಪ್ರಮುಖ 4 ಅಂಶಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಆರ್ಥಿಕ ಪಾಲ್ಗೊಳ್ಳುವಿಕೆ (ಉದ್ಯೋಗ)
ಶೈಕ್ಷಣಿಕ ಸಾಧನೆ (ಶಿಕ್ಷಣ)
ಆರೋಗ್ಯ
ರಾಜಕೀಯ ಸಬಲೀಕರಣ
ಉದ್ಯೋಗ, ಶಿಕ್ಷಣ, ರಾಜಕೀಯದಲ್ಲಿ ಮಹಿಳೆಯರಿಗೆ ಇರುವ ಅವಕಾಶಗಳು, ಪುರುಷರಿಗೆ ಇರುವ ಅವಕಾಶಗಳಿಗಿಂತ ತೀರಾ ಕಡಿಮೆ ಇದೆ. ಈ ಕ್ಷೇತ್ರಗಳಲ್ಲಿ ಪುರುಷರಿಗೆ ದೊರೆಯುತ್ತಿರುವ ಅವಕಾಶಗಳು ಮತ್ತು ಮಹಿಳೆಯರಿಗೆ ಲಭ್ಯವಿರುವ ಅವಕಾಶಗಳ ನಡುವಣ ವ್ಯತ್ಯಾಸವನ್ನೇ ‘ಲಿಂಗ ಸಮಾನತೆಯ ಅಂತರ’ ಎನ್ನಲಾಗುತ್ತದೆ.
ವಿಶ್ವದ 148 ದೇಶಗಳನ್ನು ಅಧ್ಯಯನಕ್ಕೆ ಒಳಪಡಿಸಿ ಈ ರ‍್ಯಾಂಕಿಂಗ್ ಅನ್ನು ಸಿದ್ಧಪಡಿಸಲಾಗಿದೆ. ಜಾಗತಿಕವಾಗಿ ಲಿಂಗ ಅಂತರವು ಶೇ 68.8ಕ್ಕೆ ಇಳಿದಿದೆ ಎಂದು ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.