ADVERTISEMENT

ಭಾರತ–ಚೀನಾ ಗಡಿ ವಿವಾದ: ವಾಯು ಸೇನೆ ಗಸ್ತು ಪ್ರಾರಂಭ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಡಿಸೆಂಬರ್ 2022, 9:34 IST
Last Updated 13 ಡಿಸೆಂಬರ್ 2022, 9:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ವಾಯು ಸೇನಾ ಚಟುವಟಿಕೆ ಗಮನಕ್ಕೆ ಬಂದಿರುವ ಬೆನ್ನಲ್ಲೇ ಭಾರತೀಯ ವಾಯುಸೇನೆ ಕೂಡ ಗಸ್ತು ಪ್ರಾರಂಭಿಸಿದೆ ಎಂದು ವರದಿ ಹೇಳಿದೆ.

ಅರುಣಾಚಲದ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ಚೀನಾ ಜೆಟ್‌ಗಳ ಹಾರಾಟ ಕಂಡುಬಂದಿದೆ. ಡಿ.9ರ ಗಡಿಭಾಗದ ತವಾಂಗ್‌ನಲ್ಲಿನ ಕದನದ ಬಳಿಕ ಈ ಬೆಳವಣಿಗೆಯಾಗಿದೆ. ಹೀಗಾಗಿ ವಾರದಲ್ಲಿ 2–3 ಸಲ ಭಾರತೀಯ ಫೈಟರ್‌ ಜೆಟ್‌ ಗಸ್ತು ನಡೆಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಎಲ್‌ಎಸಿ ಉಲ್ಲಂಘಿಸುವ ಚೀನಾ ಸೈನಿಕರ ಪ್ರಯತ್ನವನ್ನು ಡಿಸೆಂಬರ್ 9 ರಂದು ಭಾರತೀಯ ಯೋಧರು ವಿಫಲಗೊಳಿಸಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಸಂಸತ್ತಿಗೆ ತಿಳಿಸಿದ್ದಾರೆ.‌ ಘಟನೆಯಲ್ಲಿ ಭಾರತದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಯಾರಿಗೂ ದೊಡ್ಡಮಟ್ಟದ ಗಾಯಗಳಾಗಿಲ್ಲ ಎಂದು ರಾಜನಾಥ್ ಸಿಂಗ್ ಸದನಕ್ಕೆ ಸ್ಪಷ್ಟಪಡಿಸಿದ್ದರು.

ADVERTISEMENT

‌‌ಭಾರತದ ಭೂಪ್ರದೇಶದಲ್ಲಿ ಚೀನಾವು ಅತಿಕ್ರಮಣ ನಡೆಸುತ್ತಿದೆ. ತವಾಂಗ್‌ ವಲಯದಲ್ಲಿ ಪ್ರಚೋದನೆ ನೀಡುತ್ತಿದೆ. ಈ ವಿಚಾರದ ಬಗ್ಗೆ ತುರ್ತಾಗಿ ಚರ್ಚಿಸಬೇಕಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಈ ಬಗ್ಗೆ ಹೇಳಿಕೆ ನೀಡಬೇಕು ಮತ್ತು ಸಂಸತ್ತಿನಲ್ಲಿ ಚರ್ಚಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿ‌ತ್ತು.

ತವಾಂಗ್‌ ವಲಯದಲ್ಲಿನ ಯಾಂಗ್‌ಟ್ಸೆ ಬಳಿ ಡಿಸೆಂಬರ್ 9ರಂದು ಚೀನಾದ ಸೈನಿಕರು ಎಲ್‌ಎಸಿ ದಾಟಿ ಬಂದಿದ್ದರು. ಆದರೆ ಅಲ್ಲಿಯೇ ಇದ್ದ ನಮ್ಮ ಸೈನಿಕರು ಇದನ್ನು ಪ್ರತಿಭಟಿಸಿದರು. ಇದರಿಂದ ಎರಡೂ ಕಡೆಯ ಸೈನಿಕರ ಮಧ್ಯೆ ಸಂಘರ್ಷ ನಡೆಯಿತು. ಎರಡೂ ಕಡೆಯವರಿಗೆ ಸಣ್ಣ–ಪುಟ್ಟ ಗಾಯಗಳಾದವು ಎಂದು ಸೇನೆಯ ಪ್ರಕಟಣೆಯಲ್ಲಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.