
ಸಾಂಧರ್ಭಿಕ ಚಿತ್ರ
ಶ್ರೀನಗರ: ಇಲ್ಲಿನ ಶಾಹ್‌ಪುರ್–ಕಂಡಿ ಬ್ಯಾರೇಜ್ ನಿರ್ಮಾಣ ಪೂರ್ಣಗೊಂಡಿದ್ದು, ಈ ಮೂಲಕ ರಾವಿ ನದಿಯಿಂದ ಪಾಕಿಸ್ತಾನ ಅಭಿಮುಖವಾಗಿ ನೀರಿನ ಹರಿವು ತಡೆಯಲಾಗಿದೆ. ಕಠುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ 32,000 ಹೆಕ್ಟೇರ್ ಭೂಮಿ ನೀರಾವರಿ ಸೌಲಭ್ಯಕ್ಕೆ ಒಳಪಡಲಿದೆ.
ಶಾಹ್‌ಪುರ್–ಕಂಡಿ ಬ್ಯಾರೇಜ್‌ನ ನೀರಾವರಿ ಮತ್ತು ಜಲವಿದ್ಯುತ್ ಉತ್ಪಾದನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಈ ಕುರಿತ ವರದಿ ತಿಳಿಸಿದೆ. ಬ್ಯಾರೇಜ್‌ನ ನಿರ್ಮಾಣ ಕಾರ್ಯಕ್ಕೆ ಕಳೆದ ಮೂರು ದಶಕಗಳಲ್ಲಿ ಹಲವು ತೊಡಕುಗಳು ಎದುರಾಗಿದ್ದವು.
1995ರಲ್ಲಿ ಆಗಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಶಂಕುಸ್ಥಾಪನೆ ನೆರವೇರಿಸಿದ್ದರು. ಬ್ಯಾರೇಜ್ ನಿರ್ಮಾಣಕ್ಕೆ ಜಮ್ಮು ಕಾಶ್ಮೀರ ಹಾಗೂ ಪಂಜಾಬ್ ಸರ್ಕಾರಗಳ ನಡುವೆ ವಿವಾದವಿತ್ತು. 2018ರ ಡಿಸೆಂಬರ್‌ನಲ್ಲಿ ಕೇಂದ್ರದ ಸಮ್ಮತಿಯೊಂದಿಗೆ ನಿರ್ಮಾಣ ಪುನರಾರಂಭವಾಗಿತ್ತು.
ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಇಂಗ್ಲಿಷ್ ದೈನಿಕ ‘ಡೈಲಿ ಎಕ್ಸೆಲ್ಸಿಯರ್’ ವರದಿ ಮಾಡಿರುವಂತೆ, ಬ್ಯಾರೇಜ್ ನಿರ್ಮಾಣ ಕಾರ್ಯ ಈಗ ಪೂರ್ಣಗೊಳ್ಳುವ ಮೂಲಕ ಶಾಹ್‌ಪುರ್ ಭಾಗದಿಂದ ನೀರು ಹರಿಯುವಿಕೆಯು ತಗ್ಗಿದೆ.
1960ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಆಗಿದ್ದ ಇಂಡಸ್ ಜಲ ಒಪ್ಪಂದದ (ಐಡಬ್ಲ್ಯೂಟಿ) ಪ್ರಕಾರ ರಾವಿ, ಸಟ್ಲೇಜ್, ಬಿಯಾಸ್ ನದಿಗಳ ನೀರಿನ ಮೇಲೆ ಭಾರತಕ್ಕೆ ವಿಶೇಷ ಹಕ್ಕಿದೆ. ಇಂಡಸ್. ಝೆಲುಂ, ಚೆನಾಬ್ ನದಿಗಳ ನೀರಿನ ಮೇಲೆ ಪಾಕಿಸ್ತಾನಕ್ಕೆ ಹಕ್ಕಿದೆ.
ಈ ಒಪ್ಪಂದದ ಅನುಸಾರ, ಭಾರತವು ರಾವಿ ನದಿ ನೀರಿನ ಪೂರ್ಣ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಹಿಂದೆ ರಾವಿ ನದಿಯ ನೀರು ಹಳೆಯ ಲಖಾನ್‌ಪುರ್ ಅಣೆಕಟ್ಟಿನ ಮೂಲಕ ಪಾಕಿಸ್ತಾನ ಅಭಿಮುಖವಾಗಿ ಹರಿದು ಹೋಗುತ್ತಿತ್ತು.
ಬ್ಯಾರೇಜ್ ನಿರ್ಮಾಣ ಪೂರ್ಣಗೊಂಡಿರುವುದರಿಂದ ನೀರಾವರಿ ಜೊತೆಗೆ 206 ಮೆಗಾವಾಟ್ ವಿದ್ಯುತ್ ಉತ್ಪಾದನೆಗೂ ಸಹಕಾರಿಯಾಗಲಿದೆ. ಉತ್ಪಾದನೆಯಾಗುವ ವಿದ್ಯುತ್‌ನ ಹೆಚ್ಚಿನ ಅನುಕೂಲ ಪಂಜಾಬ್‌ಗೆ ಸಿಗಲಿದೆ ಎಂದು ವರದಿಯು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.