
ಢಾಕಾದಲ್ಲಿರುವ ಭಾರತದ ಹೈಕಮಿಷನ್ ಕಚೇರಿಯತ್ತ ಬರುತ್ತಿದ್ದ ಪ್ರತಿಭಟನಕಾರರನ್ನು ಪೊಲೀಸರು ಬ್ಯಾರಿಕೇಡ್ ಹಾಕುವುದರ ಮೂಲಕ ತಡೆದು ನಿಲ್ಲಿಸಿದರು –ಪಿಟಿಐ ಚಿತ್ರ
ಢಾಕಾ/ನವದೆಹಲಿ: ಮಾಜಿ ಪ್ರಧಾನಿ ಶೇಕ್ ಹಸೀನಾ ವಾಪಸು ಕಳುಹಿಸಿಕೊಡುವುದು ಸೇರಿ ಅನೇಕ ವಿಚಾರಗಳಿಗೆ ಸಂಬಂಧಿಸಿ ಢಾಕಾದಲ್ಲಿರುವ ಭಾರತದ ಹೈಕಮಿಷನ್ ಕಚೇರಿ ಎದುರು ‘ಜುಲೈ ಒಯಿಕ್ಯಾ’ ಸಂಘಟನೆಯ ನೂರಾರು ಸದಸ್ಯರು ಪ್ರತಿಭಟನೆ ನಡೆಸಿ, ಭಾರತ ವಿರೋಧಿ ಘೋಷಣೆಗಳನ್ನು ಬುಧವಾರ ಕೂಗಿದರು.
‘ಭಾರತ ಹೈಕಮಿಷನ್ ಕಚೇರಿ ಮೇಲೆ ದಾಳಿ ನಡೆಸುವ ಬಗ್ಗೆ ಯೋಜನೆ ಇದೆ ಎಂದು ಉಗ್ರರು ಘೋಷಿಸಿದ್ದರ ಬಗ್ಗೆ ಮಧ್ಯಂತರ ಸರ್ಕಾರವು ತನಿಖೆಯನ್ನೂ ನಡೆಸಿಲ್ಲ ಅಥವಾ ನಮ್ಮೊಂದಿಗೆ ಸಾಕ್ಷ್ಯಗಳನ್ನೂ ಹಂಚಿಕೊಂಡಿಲ್ಲ. ಇದು ದುರದೃಷ್ಟಕರ’ ಎಂದು ಬಾಂಗ್ಲಾದೇಶದ ರಾಯಭಾರಿ ರಿಯಾಜ್ ಹಮೀದುಲ್ಲಾ ಅವರನ್ನು ಕರೆಸಿದ ಭಾರತದ ವಿದೇಶಾಂಗ ಸಚಿವಾಲಯ ಬುಧವಾರ ಬೆಳಿಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸಿತ್ತು.
ಇದಾದ ಕೆಲವೇ ಗಂಟೆಗಳಲ್ಲಿ ಢಾಕಾದಲ್ಲಿ ಪ್ರತಿಭಟನೆ ನಡೆಯಿತು. ಭಾರತದ ಹೈಕಮಿಷನ್ ಕಚೇರಿ ಸುತ್ತ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಇದನ್ನು ತಳ್ಳಿದ ಪ್ರತಿಭಟನಕಾರರು ಕಚೇರಿಯ ಹತ್ತಿರ ಬಂದರು. ಆದರೆ, ಇಲ್ಲಿ ದೊಡ್ಡ ಪ್ರಮಾಣದ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು. ಇದರಿಂದ ಅಲ್ಲಿಯೇ ನಿಂತ ಪ್ರತಿಭಟನಕಾರರು ಭಾರತ ವಿರೋಧಿ ಭಾಷಣಗಳನ್ನು ಮಾಡಿದರು.
ಬೆದರಿಕೆ ಇದ್ದ ಕಾರಣ ಢಾಕಾದಲ್ಲಿರುವ ಭಾರತದ ವೀಸಾ ಅರ್ಜಿ ಕೇಂದ್ರವನ್ನು (ಐವಿಎಸಿ) ಇತ್ತೀಚೆಗೆ ಮುಚ್ಚಲಾಗಿದೆ. ಕಳೆದ ವರ್ಷ ನಡೆದ ಮೀಸಲಾತಿ ವಿರೋಧಿ ಪ್ರತಿಭಟನೆಯ ಮುಂಚೂಣಿ ನಾಯಕ ಶಾರಿಫ್ ಒಸ್ಮಾನ್ ಹಾದಿ ಅವರ ಮೇಲೆ ವ್ಯಕ್ತಿಯೊಬ್ಬರು ಕಳೆದ ವಾರ ಗುಂಡಿನ ದಾಳಿ ನಡೆಸಿದ್ದರು. ಇದಾದ ಬಳಿಕ ಭಾರತದ ವಿರೋಧಿ ಚಟುವಟಿಕೆಗಳು ನಡೆಯಿತ್ತಿವೆ.
‘ಬಾಂಗ್ಲಾದೇಶದ ಜನರೊಂದಿಗೆ ಭಾರತಕ್ಕೆ ಸ್ನೇಹ ಸಂಬಂಧವಿದೆ. ಇದು ಬಾಂಗ್ಲಾ ವಿಮೋಚನಾ ಸಂಘರ್ಷದ ಸಮಯದಿಂದಲೂ ಇದೆ. ಅಲ್ಲಿ ಶಾಂತಿ ಮತ್ತು ಸ್ಥಿರತೆ ನೆಲಸುವ ಪರ ನಾವಿದ್ದೇವೆ. ಆದ್ದರಿಂದ ಮಧ್ಯಂತರ ಸರ್ಕಾರವು ದ್ವಿಪಕ್ಷೀಯ ಸಂಬಂಧವನ್ನೂ ಗಮನದಲ್ಲಿ ಇರಿಸಿಕೊಂಡು, ನಮ್ಮ ಹೈಕಮಿಷನ್‌ಗೆ ಸೂಕ್ತ ಭದ್ರತೆ ಒದಗಿಸುತ್ತದೆ ಎಂದು ನಿರೀಕ್ಷಿಸುತ್ತೇವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
‘ನಮ್ಮ ಮೇಲೆ ಪ್ರಾಲಬ್ಯ ಸಾಧಿಸಬೇಡಿ’
ನಾವು ಭಾರತದ ಹೈಕಮಿಷನ್ ಮೇಲೆ ದಾಳಿ ನಡೆಸುವುದಿಲ್ಲ. ನಮಗೆ ಭಯವಿಲ್ಲ. ಆದರೆ ಯಾರಾದರೂ ಬಾಂಗ್ಲಾದೇಶದ ಮೇಲೆ ಪ್ರಾಬಲ್ಯ ಸಾಧಿಸಲು ಮುಂದಾದರೆ ನಾವು ಅವರನ್ನು ಬಿಡುವುದಿಲ್ಲ. ಭಾರತದ ರಾಜಕೀಯ ಪಕ್ಷಗಳು ಮಾಧ್ಯಮ ಮತ್ತು ಸರ್ಕಾರದ ಅಧಿಕಾರಿಗಳು ಪಿತೂರಿ ಮಾಡುತ್ತಿದ್ದಾರೆ ಪ್ರತಿಭಟನಕಾರರು
ಬಾಂಗ್ಲಾದಲ್ಲಿ ನ್ಯಾಯಯುತವಾಗಿ ಶಾಂತಿಯುತ ಚುನಾವಣೆಗಳು ನಡೆಯುವುದರ ಪರ ನಾವಿದ್ದೇವೆ. ಅಲ್ಲಿ ಶಾಂತಿ ಮತ್ತು ಸ್ಥಿರತೆ ನೆಲಸಬೇಕುಭಾರತದ ವಿದೇಶಾಂಗ ಸಚಿವಾಲಯ
ಕಳೆದ 15 ವರ್ಷಗಳಿಂದ ಬಾಂಗ್ಲಾದಲ್ಲಿ ಚುನಾವಣೆ ಎನ್ನುವುದು ಪ್ರಹಸನವಾಗಿತ್ತು. ಆಗ ಒಮ್ಮೆಯೂ ಒಂದು ಮಾತು ಆಡಲಿಲ್ಲ. ನಮಗೇನು ಮಾಡಬೇಕು ಎಂಬುದು ನಮಗೆ ಗೊತ್ತಿದೆತೌಹಿದ್ ಹುಸೇನ್, ಮಧ್ಯಂತರ ಸರ್ಕಾರಕ್ಕೆ ವಿದೇಶಾಂಗ ವ್ಯವಹಾರಗಳ ಸಲಹೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.