ADVERTISEMENT

ವರ್ಷಾಂತ್ಯಕ್ಕೆ ರಷ್ಯಾದಿಂದ ಭಾರತ ತೈಲ ಖರೀದಿ ಸ್ಥಗಿತಗೊಳಿಸಲಿದೆ: ಟ್ರಂಪ್

ಪಿಟಿಐ
Published 23 ಅಕ್ಟೋಬರ್ 2025, 14:16 IST
Last Updated 23 ಅಕ್ಟೋಬರ್ 2025, 14:16 IST
<div class="paragraphs"><p>ನರೇಂದ್ರ ಮೋದಿ– ಡೊನಾಲ್ಡ್‌ ಟ್ರಂಪ್‌</p></div>

ನರೇಂದ್ರ ಮೋದಿ– ಡೊನಾಲ್ಡ್‌ ಟ್ರಂಪ್‌

   

–ಪಿಟಿಐ ಚಿತ್ರ

ವಾಷಿಂಗ್ಟನ್‌/ನವದೆಹಲಿ: ‘ಈ ವರ್ಷಾಂತ್ಯದ ವೇಳೆಗೆ ಭಾರತವು ರಷ್ಯಾದಿಂದ ಕಚ್ಚಾತೈಲ ಖರೀದಿಯನ್ನು ಬಹುತೇಕ ಸ್ಥಗಿತಗೊಳಿಸಲಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಪುನರುಚ್ಚರಿಸಿದ್ದಾರೆ.

ADVERTISEMENT

ಆದಾಗ್ಯೂ,‘ಈ ಪ್ರಕ್ರಿಯೆ ನಡೆಯಲು ಸ್ವಲ್ಪ ಕಾಲಾವಕಾಶದ ಅಗತ್ಯವಿದೆ. ಈ ವಿಚಾರದಲ್ಲಿ ಚೀನಾದ ಮನವೊಲಿಸಲು ಯತ್ನಿಸುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

ರಷ್ಯಾದಿಂದ ಚೀನಾ ಹಾಗೂ ಭಾರತವು ದೊಡ್ಡ ಪ್ರಮಾಣದಲ್ಲಿ ಕಚ್ಚಾತೈಲ ಖರೀದಿಸುತ್ತಿರುವ ರಾಷ್ಟ್ರಗಳಾಗಿವೆ.

‘ಭಾರತವು ರಷ್ಯಾದಿಂದ ಕಚ್ಚಾತೈಲ ಖರೀದಿಯನ್ನು ಸ್ಥಗಿತಗೊಳಿಸಲಿದೆ ಎಂದು ಭರವಸೆ ನೀಡಿತ್ತು. ಈ ಪ್ರಕ್ರಿಯೆಯೂ ನಡೆಯುತ್ತಿದೆ. ಈಗಲೇ ನಿಲ್ಲಿಸಲು ಸಾಧ್ಯವಿಲ್ಲ. ಈ ವರ್ಷಾಂತ್ಯಕ್ಕೆ ಪೂರ್ತಿ ಕಡಿಮೆಯಾಗಲಿದ್ದು, ಬಹುತೇಕ ಕೊನೆಯಾಗಲಿದೆ. ಭಾರತ ತನ್ನ ಬೇಡಿಕೆಯ ಶೇಕಡ 40ರಷ್ಟು ಕಚ್ಚಾತೈಲವನ್ನು ಅಲ್ಲಿಂದಲೇ ಖರೀದಿಸುತ್ತಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಮಂಗಳವಾರವಷ್ಟೇ ಮಾತನಾಡಿದ್ದೇನೆ. ಅವರು ಕೂಡ ತುಂಬಾ ಸಕಾರಾತ್ಮಕವಾಗಿ ಮಾತನಾಡಿದ್ದಾರೆ’ ಎಂದು ಶ್ವೇತಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

ರಷ್ಯಾದಿಂದ ಕಚ್ಚಾತೈಲವನ್ನು ಗಣನೀಯವಾಗಿ ಕಡಿಮೆ ಮಾಡಲಾಗುವುದು ಎಂದು ಭಾರತ ಭರವಸೆ ನೀಡಿದೆ ಎಂದು ಕಳೆದ ಕೆಲವು ದಿನಗಳಿಂದ ಡೊನಾಲ್ಡ್‌ ಟ್ರಂಪ್‌ ಹೇಳಿಕೆ ನೀಡುತ್ತಿದ್ದಾರೆ. 

ರಷ್ಯಾದಿಂದ ಕಚ್ಚಾತೈಲ ಖರೀದಿಸುವ ಮೂಲಕ ಉಕ್ರೇನ್‌ ವಿರುದ್ಧದ ಸಂಘರ್ಷಕ್ಕೆ ಭಾರತವು ಪರೋಕ್ಷವಾಗಿ ಆರ್ಥಿಕ ನೆರವು ಒದಗಿಸುತ್ತಿದೆ ಎಂದು ಅಮೆರಿಕ ಆರೋಪಿಸುತ್ತಿದೆ.

ಸುಂಕ ಸಮರ:

ಭಾರತದ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ಅಮೆರಿಕವು ಶೇಕಡ 50ರಷ್ಟು ಸುಂಕ ಹೇರುವ ಮೂಲಕ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧ ಹದಗೆಟ್ಟಿತ್ತು. ರಷ್ಯಾದಿಂದ ಕಚ್ಚಾತೈಲ ಖರೀದಿಸಿದ್ದಕ್ಕೆ ಶೇಕಡ 25ರಷ್ಟು ಹೆಚ್ಚುವರಿ ಸುಂಕ ಹೇರಲಾಗಿತ್ತು. ಅಮೆರಿಕದ ಈ ನಿರ್ಧಾರವು ‘ಅನ್ಯಾಯ, ನ್ಯಾಯಸಮ್ಮವಲ್ಲದ ನಿರ್ಧಾರ’ ಎಂದು ಭಾರತವು ಟೀಕಿಸಿತ್ತು.

ಚೀನಾದ ಜೊತೆಗೂ ಮಾತುಕತೆ:

‘ರಷ್ಯಾ– ಉಕ್ರೇನ್ ನಡುವಿನ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌‍ಪಿಂಗ್‌ ಜೊತೆಗೂ ಮಾತುಕತೆ ನಡೆಸಲಿದ್ದೇನೆ’ ಎಂದು ಡೊನಾಲ್ಡ್‌ ಟ್ರಂಪ್ ತಿಳಿಸಿದ್ದಾರೆ.

‘ನಾನು ನಿಜವಾಗಿಯೂ ರಷ್ಯಾ ಮತ್ತು ಉಕ್ರೇನ್‌ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಮಾತನಾಡಲು ನಿರ್ಧರಿಸಿದ್ದೇನೆ. ಅದು ಕಚ್ಚಾ ತೈಲ ಇಂಧನ ವಿಚಾರವೇ ಆಗಿರಲಿ ಅಥವಾ ಇತರೆ ವಿಚಾರವೇ ಇರಲಿ. ಯಾವ ವಿಚಾರದ ಕುರಿತು ತುಂಬಾ ಸ್ವೀಕರಾರ್ಹವಾಗಿರುತ್ತಾರೆ ಎಂಬುದರ ಮೇಲೆ ನಿಂತಿದೆ’ ಎಂದು ತಿಳಿಸಿದ್ದಾರೆ.

ಇದೇ ಅಕ್ಟೋಬರ್‌ 31 ಹಾಗೂ ನವೆಂಬರ್‌ 1ರಂದು ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಏಷ್ಯಾ–ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಯಲ್ಲಿ (ಅಪೆಕ್‌) ಟ್ರಂಪ್‌ ಹಾಗೂ ಷಿ ಜಿನ್‌ಪಿಂಗ್‌ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ವ್ಯಾಪಾರ ನೀತಿ ಸಮರ್ಥನೆ: ತನ್ನ ವ್ಯಾಪಾರ ನೀತಿಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಡೊನಾಲ್ಡ್‌ ಟ್ರಂಪ್‌, ಇದರಿಂದ ಅಮೆರಿಕದ ಅರ್ಥಿಕತೆಯೂ ಮತ್ತಷ್ಟು ಬಲವರ್ಧನೆಯಾಗಲಿದೆ ಎಂದು ತಿಳಿಸಿದ್ದಾರೆ.

‘ಸುಂಕದಿಂದಾಗಿ ಒಂದು ದೇಶವಾಗಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ, ದಶಕದಿಂದಲೂ ನಮ್ಮ ಮೇಲೆ ಸುಂಕ ಹೇರುವ ಮೂಲಕ ದೇಶಕ್ಕೆ ನಿಧಾನವಾಗಿ ಹಾನಿಯುಂಟು ಮಾಡಲಾಗಿತ್ತು. ಇದರಿಂದಾಗಿ ನಾವು 37 ಟ್ರಿಲಿಯನ್‌ ಡಾಲರ್‌ ಸಾಲದ ಹೊರೆಗೆ ಸಿಲುಕುವಂತಾಯಿತು. ಈಗ ನಾವು ಶ್ರೀಮಂತ ರಾಷ್ಟ್ರವಾಗಿದ್ದೇವೆ. ನಾವು ಹಿಂದೆಂದೂ ಮಾಡದ ರೀತಿಯಲ್ಲಿ ಹಣವನ್ನು ಪಡೆಯುತ್ತಿದ್ದೇವೆ’ ಎಂದು ಬಲವಾಗಿ ಸಮರ್ಥಿಸಿಕೊಂಡರು.

‘ಅಮೆರಿಕದ ಸಮೃದ್ಧಿಗಾಗಿ ಸುಂಕ ಹೇರುತ್ತಿದ್ದೇನೆ. ಸುಂಕ ಹೇರದಿದ್ದರೆ, ಅಮೆರಿಕವೂ ಕೂಡ ಮೂರನೇ ಜಗತ್ತಿನ ರಾಷ್ಟ್ರವಾಗಿರಲಿದೆ. ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ. ಸುಂಕದಿಂದ ನಾವು ಶ್ರೀಮಂತರಾಗುತ್ತಿದ್ದು, ದೇಶವು ಹೆಚ್ಚು ಸುರಕ್ಷಿತವಾಗಿದೆ. ಅದಿಲ್ಲದಿದ್ದರೆ, ನಾವು ಸಂಕಷ್ಟಕ್ಕೆ ಸಿಲುಕಲಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಇದುವರೆಗೂ ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಸುಂಕದ ಕಾರಣದಿಂದಾಗಿಯೇ ಐದರಿಂದ ಆರು ಯುದ್ಧಗಳನ್ನು ನಿಲ್ಲಿಸಿದ್ದೇನೆ
ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷ

ವ್ಯಾಪಾರ: ಮೋದಿ ಟ್ರಂಪ್‌ ಮಾತುಕತೆ 

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಚರ್ಚಿಸಿದ್ದಾರೆ. ಸುಂಕ ಹೇರಿಕೆ ಬಳಿಕ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿರುವ ಮಧ್ಯೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. 

ಶ್ವೇತಭವನದಲ್ಲಿ ಹಮ್ಮಿಕೊಂಡಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ದೀಪ ಬೆಳಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ‘ಮೋದಿ ಅವರೊಂದಿಗೆ ವ್ಯಾಪಾರ ಕುರಿತು ಮಾತನಾಡಿರುವೆ’ ಎಂದು ಹೇಳಿದ್ದಾರೆ. ಟ್ರಂಪ್‌ ಶುಭಾಶಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ‘ದೀಪಾವಳಿ ಶುಭಾಶಯ ತಿಳಿಸಲು ದೂರವಾಣಿ ಕರೆ ಮಾಡಿದ್ದಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಧನ್ಯವಾದಗಳು. ಬೆಳಕಿನ ಹಬ್ಬದ ಈ ಸಂದರ್ಭದಲ್ಲಿ ವಿಶ್ವದ ಎರಡು ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳ ಸಂಬಂಧ ಮತ್ತಷ್ಟು ಪ್ರಕಾಶಮಾನವಾಗಲಿದೆ. ಎಲ್ಲ ಮಾದರಿಯ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನಿಂದ ನಿಲ್ಲಬೇಕು’ ಎಂದು ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ. ‘ಮಾತುಕತೆ ವೇಳೆ ಪಾಕಿಸ್ತಾನದ ಯಾವುದೇ ವಿಚಾರವೂ ಕೂಡ ಚರ್ಚೆಗೆ ಬಂದಿಲ್ಲ’ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.