ADVERTISEMENT

4.5 ಲಕ್ಷ ರೆಮ್‌ಡಿಸಿವಿರ್ ಚುಚ್ಚುಮದ್ದು ಆಮದು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 15:06 IST
Last Updated 30 ಏಪ್ರಿಲ್ 2021, 15:06 IST
ರೆಮ್‌ಡಿಸಿವಿರ್
ರೆಮ್‌ಡಿಸಿವಿರ್   

ನವದೆಹಲಿ: ರೆಮ್‌ಡಿಸಿವಿರ್‌ನ ತೀವ್ರ ಅಭಾವ ಇರುವುದರಿಂದ ಬೇರೆ ದೇಶಗಳಿಂದ 4.5 ಲಕ್ಷ ರೆಮ್‌ಡಿಸಿವಿರ್ ಚುಚ್ಚುಮದ್ದುಗಳನ್ನು ಭಾರತ ಆಮದು ಮಾಡಿಕೊಳ್ಳಲಿದೆ. ಮೊದಲ ಹಂತದಲ್ಲಿ 75 ಸಾವಿರ ಚುಚ್ಚುಮದ್ದುಗಳು ಭಾರತಕ್ಕೆ ತಲುಪುವ ನಿರೀಕ್ಷೆ ಇದೆ.

‘ಅಮೆರಿಕದ ಗಿಲ್ಯಾಡ್ ಸೈನ್ಸ್‌ಸ್ ಕಂಪನಿ ಹಾಗೂ ಈಜಿಪ್ಟ್‌ನ ಇವಿಎ ಫಾರ್ಮಾದಿಂದ 4.5 ಲಕ್ಷ ರೆಮ್‌ಡಿಸಿವಿರ್ ಚುಚ್ಚುಮದ್ದುಗಳನ್ನು ಖರೀದಿಸಲು ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್ ಆದೇಶಿಸಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯವು ಶುಕ್ರವಾರ ತಿಳಿಸಿದೆ.

‘ಒಂದೆರಡು ದಿನಗಳಲ್ಲಿ ಗಿಲ್ಯಾಡ್ ಸೈನ್ಸ್‌ಸ್ ಕಂಪನಿಯು 75 ಸಾವಿರದಿಂದ 1 ಲಕ್ಷ ಚುಚ್ಚುಮದ್ದುಗಳನ್ನು ಭಾರತಕ್ಕೆ ರವಾನಿಸಲಿದೆ. ಮೇ 15ಕ್ಕೂ ಮುನ್ನ ಇನ್ನೂ 1 ಲಕ್ಷ ಚುಚ್ಚುಮದ್ದುಗಳನ್ನು ಪೂರೈಸಲಿದೆ’ ಎಂದು ಸಚಿವಾಲಯವು ಮಾಹಿತಿ ನೀಡಿದೆ.

ADVERTISEMENT

‘ಇವಿಎ ಫಾರ್ಮಾ ಆರಂಭಿಕ ಹಂತದಲ್ಲಿ ಸುಮಾರು 10 ಸಾವಿರ ಚುಚ್ಚುಮದ್ದುಗಳನ್ನು ಪೂರೈಸಲಿದ್ದು, ನಂತರ ಪ್ರತಿ 15 ದಿನಗಳಿಗೊಮ್ಮೆ ಅಥವಾ ಜುಲೈವರೆಗೆ 50 ಸಾವಿರ ರೆಮ್‌ಡಿಸಿವಿರ್ ಚುಚ್ಚುಮದ್ದುಗಳನ್ನು ಪೂರೈಸಲಿದೆ. ಭಾರತದಲ್ಲೂ ರೆಮ್‌ಡಿಸಿವಿರ್ ಚುಚ್ಚುಮದ್ದುಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ’ ಎಂದೂ ಸಚಿವಾಲಯವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.