ADVERTISEMENT

ನೈರುತ್ಯ ಮುಂಗಾರು- ಈ ಬಾರಿ ವಾಡಿಕೆಯಂತೆ ಮಳೆ ಸುರಿಯಲಿದೆ ಎಂದ ಐಎಂಡಿ

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ

ಪಿಟಿಐ
Published 11 ಏಪ್ರಿಲ್ 2023, 12:48 IST
Last Updated 11 ಏಪ್ರಿಲ್ 2023, 12:48 IST
-
-   

ನವದೆಹಲಿ: ಮುಂಬರುವ ನೈರುತ್ಯ ಮುಂಗಾರು ಅವಧಿಯಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಹೇಳಿದೆ.

ಹಿಂದೂ ಮಹಾಸಾಗರದ ಮೇಲ್ಮೈ ಉಷ್ಣಾಂಶದಲ್ಲಿ ಕಂಡುಬರುವ ವ್ಯತ್ಯಾಸ ಹಾಗೂ ಉತ್ತರ ಗೋಳಾರ್ಧವು ಕಡಿಮೆ ಪ್ರಮಾಣದಲ್ಲಿ ಹಿಮಾಚ್ಛಾಧಿತವಾಗಿದೆ. ಈ ಎರಡು ವಿದ್ಯಮಾನಗಳು ಎಲ್‌ ನಿನೊದಿಂದಾಗುವ ಪರಿಣಾಮವನ್ನು ತಗ್ಗಿಸುವ ಮೂಲಕ ವಾಡಿಕೆಯಂತೆ ಮಳೆ ಬೀಳುವುದಕ್ಕೆ ಪೂರಕವಾಗಲಿವೆ ಎಂದು ಇಲಾಖೆ ತಿಳಿಸಿದೆ.

‘ಈ ವರ್ಷದ ಮುಂಗಾರು ಹಂಗಾಮಿನಲ್ಲಿ ದೇಶದೆಲ್ಲೆಡೆ ವಾಡಿಕೆಗಿಂತಲೂ ಕಡಿಮೆ ಮಳೆಯಾಗಲಿದೆ. ಲಾ ನಿನಾ (ಸಾಗರ ಮತ್ತು ವಾತಾವರಣದ ವಿದ್ಯಮಾನ) ಪರಿಸ್ಥಿತಿ ಕೊನೆಗೊಂಡ ಕಾರಣ ಬರಗಾಲ ಆವರಿಸುವ ಸಾಧ್ಯತೆ ಶೇ 20ರಷ್ಟಿದೆ’ ಎಂದು ಖಾಸಗಿ ಹವಾಮಾನ ಸಂಸ್ಥೆಯಾಗಿರುವ ಸ್ಕೈಮೆಟ್‌ ಸೋಮವಾರ ನೀಡಿದ್ದ ಮುನ್ಸೂಚನೆ ಆತಂಕಕ್ಕೆ ಕಾರಣವಾಗಿತ್ತು.

ADVERTISEMENT

ಈಗ, ನೈರುತ್ಯ ಮುಂಗಾರಿನಲ್ಲಿ ವಾಡಿಕೆ ಮಳೆಯಾಗಲಿದೆ ಎಂಬ ಐಎಂಡಿ ಮುನ್ಸೂಚನೆಯು ದೇಶದ ರೈತ ಸಮುದಾಯದಲ್ಲಿ ಮೂಡಿದ್ದ ಆತಂಕವನ್ನು ದೂರ ಮಾಡಲಿದೆ. ದೇಶದ ಕೃಷಿ ವಲಯವು ನೈರುತ್ಯ ಮುಂಗಾರನ್ನೇ ಹೆಚ್ಚು ಅವಲಂಬಿಸಿದೆ.

‘ದೀರ್ಘಾವಧಿ ಸರಾಸರಿ (ಎಲ್‌ಪಿಎ) ಮಳೆ ಪ್ರಮಾಣ 87 ಸೆಂ.ಮೀ. ಇದೆ. ಈ ಬಾರಿಯ ನೈರುತ್ಯ ಮುಂಗಾರು ಅವಧಿಯಲ್ಲಿ (ಜೂನ್‌ನಿಂದ ಸೆಪ್ಟೆಂಬರ್‌), ದೀರ್ಘಾವಧಿ ಸರಾಸರಿಯ ಶೆ 96ರಷ್ಟು ಮಳೆಯಾಗುವ ನಿರೀಕ್ಷೆ ಇದೆ’ ಎಂದು ಭೂವಿಜ್ಞಾನಗಳ ಸಚಿವಾಲಯದ ಕಾರ್ಯದರ್ಶಿ ಎಂ.ರವಿಚಂದ್ರನ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ವಾಡಿಕೆ ಹಾಗೂ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಶೇ 76ರಷ್ಟಿದೆ’ ಎಂದು ಇಲಾಖೆಯ ಪ್ರಧಾನ ನಿರ್ದೇಶಕ ಎಂ.ಮಹಾಪಾತ್ರ ಹೇಳಿದರು.

‘ಯುರೋಪ್‌ ಮತ್ತು ಏಷ್ಯಾ ಖಂಡಗಳನ್ನು ಒಳಗೊಂಡ ಉತ್ತರ ಗೋಳಾರ್ಧದಲ್ಲಿ, 2022 ಡಿಸೆಂಬರ್‌ನಿಂದ ಕಳೆದ ಮಾರ್ಚ್‌ ವರೆಗಿನ ಅವಧಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಹಿಮ ಆವರಿಸಿರುವುದು ಕಂಡು ಬಂದಿದೆ. ಈ ಪ್ರಾಕೃತಿಕ ವಿದ್ಯಮಾನವು ಮುಂಬರುವ ನೈರುತ್ಯ ಮುಂಗಾರು ಅವಧಿಯಲ್ಲಿ ಬೀಳುವ ಮಳೆಗೆ ಪೂರಕ ವಾತಾವರಣ ಸೃಷ್ಟಿಸಲಿದೆ’ ಎಂದು ಮಹಾಪಾತ್ರ ಹೇಳಿದರು.

ದೇಶದ ವಾಯವ್ಯ, ಪಶ್ಚಿಮಮಧ್ಯ ಹಾಗೂ ಈಶಾನ್ಯ ಭಾಗದಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣ ಮಳೆ ಬೀಳುವ ಸಾಧ್ಯತೆ ಇದೆ ಎಂದೂ ಅವರು ಹೇಳಿದರು.

ಎಲ್‌ ನಿನೊ: ದಕ್ಷಿಣ ಅಮೆರಿಕ ಬಳಿ ಪೆಸಿಫಿಕ್‌ ಸಾಗರದ ಮೇಲ್ಮೈ ಉಷ್ಣಾಂಶದಲ್ಲಿ ಆಗುವ ಹೆಚ್ಚಳವು ಮುಂಗಾರು ಮಾರುತಗಳನ್ನು ದುರ್ಬಲಗೊಳಿಸುತ್ತದೆ. ಈ ಪ್ರಾಕೃತಿಕ ವಿದ್ಯಮಾನವನ್ನು ಎಲ್‌ ನಿನೊ ಎನ್ನಲಾಗುತ್ತದೆ.

ಇದರ ಪರಿಣಾಮ, ಭಾರತದಲ್ಲಿ ನೈರುತ್ಯ ಮುಂಗಾರು ಅವಧಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆ ಬೀಳುತ್ತದೆ.

ಮುಂಗಾರಿನಲ್ಲಿ ಬಿದ್ದ ಮಳೆ ಪ್ರಮಾಣ

ವರ್ಷ;ಪ್ರಮಾಣ (ಸೆಂ.ಮೀ.ನಲ್ಲಿ)

2019;97.18

2020;96.14

2021;87.45

2022;92.48

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.