ADVERTISEMENT

ಮೆಟ್ರೊ ರೈಲು ಸಂಪರ್ಕದಲ್ಲಿ ಅಮೆರಿಕವನ್ನು ಹಿಂದಿಕ್ಕಲಿದೆ ಭಾರತ: ಸಚಿವ ಖಟ್ಟರ್

ಪಿಟಿಐ
Published 12 ಸೆಪ್ಟೆಂಬರ್ 2025, 12:04 IST
Last Updated 12 ಸೆಪ್ಟೆಂಬರ್ 2025, 12:04 IST
ನಮ್ಮ ಮೆಟ್ರೊ ಹಳದಿ ಮಾರ್ಗ
ನಮ್ಮ ಮೆಟ್ರೊ ಹಳದಿ ಮಾರ್ಗ   

ಕೊಚಿ: ‘ಮೆಟ್ರೊ ರೈಲು ಸಂಪರ್ಕಕ್ಕೆ ಸಂಬಂಧಿಸಿದಂತೆ ಅತಿ ಶೀಘ್ರದಲ್ಲಿ ಭಾರತವು ಅಮೆರಿಕವನ್ನು ಹಿಂದಿಕ್ಕಲಿದೆ. ಆ ಮೂಲಕ ಜಗತ್ತಿನ ಎರಡನೇ ಅತಿ ದೊಡ್ಡ ಸಂಪರ್ಕ ಜಾಲ ಹೊಂದಿದ ರಾಷ್ಟ್ರವಾಗಲಿದೆ’ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ ಲಾಲ್ ಖಟ್ಟರ್ ಶುಕ್ರವಾರ ಹೇಳಿದ್ದಾರೆ.

ಕೇರಳ ಸ್ಥಳೀಯ ಸ್ವ-ಸರ್ಕಾರಿ ಇಲಾಖೆ (LSGD) ಆಯೋಜಿಸಿದ್ದ ನಗರಾಭಿವೃದ್ಧಿ ಕುರಿತ ಎರಡು ದಿನಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಚೀನಾ ಹಾಗೂ ಅಮೆರಿಕ ನಂತರ ಮೆಟ್ರೊ ಸಂಪರ್ಕದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಸದ್ಯ ದೇಶದ 24 ನಗರಗಳಲ್ಲಿ ಮೆಟ್ರೊ ಸಂಪರ್ಕವಿದ್ದು, ಒಟ್ಟು 1,065 ಕಿ.ಮೀ. ಸಂಪರ್ಕ ಜಾಲವನ್ನು ಹೊಂದಿದೆ. ಅಮೆರಿಕವು 1,400 ಕಿ.ಮೀ. ಮೆಟ್ರೊ ಜಾಲ ಹೊಂದಿದ್ದು, ಅದನ್ನು ಶೀಘ್ರದಲ್ಲಿ ಭಾರತ ಹಿಂದಿಕ್ಕಲಿದೆ. ಐದು ಹೊಸ ಯೋಜನೆಗಳು ಕಾಮಗಾರಿ ಹಂತದಲ್ಲಿದ್ದು, ಅವು 955 ಕಿ.ಮೀ. ಹೆಚ್ಚುವರಿ ಸಂಪರ್ಕ ಜಾಲಕ್ಕೆ ವಿಸ್ತರಿಸಲಿದೆ’ ಎಂದಿದ್ದಾರೆ.

ADVERTISEMENT

‘ದೇಶದಲ್ಲಿ ನಗರೀಕರಣವು 1960ರಲ್ಲಿ ಶೇ 20ರಷ್ಟಿತ್ತು. 2027ಕ್ಕೆ ಇದು ಶೇ 30ಕ್ಕೆ ಏರಿಕೆಯಾಗಲಿದೆ. 2047ರಲ್ಲಿ ಭಾರತವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸಿಕೊಳ್ಳಲಿದ್ದು, ಆಗ ನಗರೀಕರಣ ಪ್ರಮಾಣ ಶೇ 50ಕ್ಕೆ ಹೆಚ್ಚಳವಾಗಲಿದೆ’ ಎಂದು ಅಂದಾಜಿಸಿದರು.

‘ನಗರಾಭಿವೃದ್ಧಿಯಲ್ಲಿ ಇ–ಮೊಬಿಲಿಟಿ ಅತ್ಯಂತ ಪ್ರಮುಖ. 10 ಸಾವಿರ ಹೊಸ ಇ– ಬಸ್ಸುಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ನಗರೀಕರಣದಲ್ಲಿ ರಸ್ತೆ ಅಭಿವೃದ್ಧಿಯೂ ಪ್ರಮುಖ ಪಾತ್ರ ಹೊಂದಿದೆ. ದೊಡ್ಡ ಹಾಗೂ ಸಣ್ಣ ನಗರಗಳಲ್ಲಿ ಸ್ವಚ್ಛ ಭಾರತ ಯೋಜನೆಯ ಸಮರ್ಪಕ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಕೆಲ ನಗರಗಳಷ್ಟೇ ಅಗ್ರ ಸ್ಥಾನದಲ್ಲಿದ್ದು, ‘ಸೂಪರ್ ಸ್ವಚ್ಛ ಲೀಗ್‌’ ಎಂಬ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು. ಇದರಲ್ಲಿ ಕೆಳ ಶ್ರೇಯಾಂಕದ ನಗರಗಳೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕಿದೆ. ಆ ಮೂಲಕ ಎಲ್ಲರನ್ನೂ ಜತೆಯಾಗಿ ತೆಗೆದುಕೊಂಡು ಹೋಗುವ ಉದ್ದೇಶ ಹೊಂದಲಾಗಿದೆ’ ಎಂದು ಖಟ್ಟರ್ ಹೇಳಿದರು.

‘ಯಾವುದೇ ಅಭಿವೃದ್ಧಿಗಳಿಗೆ ನಗರ ಸ್ಥಳೀಯ ಸಂಸ್ಥೆಗಳು ಕೇಂದ್ರ ಸರ್ಕಾರದ ಅನುದಾನಕ್ಕಾಗಿ ಕಾಯಬಾರದು. ತಮ್ಮ ಆದಾಯವನ್ನೇ ತಾವೇ ತೆರಿಗೆ ರೂಪದಲ್ಲಿ ಸಂಗ್ರಹಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು. ನಾಗರಿಕರಿಗೆ ಸೇವೆ ನೀಡಲು ಡಿಜಿಟಲ್ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.