ADVERTISEMENT

ಟರ್ಕಿ, ಅಜರ್‌ಬೈಜಾನ್‌ ಪ್ರವಾಸ, ಚಿತ್ರೀಕರಣ ಬೆಂಬಲಿಸದಿರಲು ಕೇಂದ್ರ ನಿರ್ಧಾರ?

ಪಿಟಿಐ
Published 16 ಮೇ 2025, 0:30 IST
Last Updated 16 ಮೇ 2025, 0:30 IST
<div class="paragraphs"><p>ಜಮ್ಮುವಿನಲ್ಲಿ ರಾಷ್ಟ್ರೀಯ ಬಜರಂಗದಳ ಕಾರ್ಯಕರ್ತರು ಪಾಕಿಸ್ತಾನ, ಟರ್ಕಿ, ಚೀನಾ, ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದರು&nbsp;</p></div>

ಜಮ್ಮುವಿನಲ್ಲಿ ರಾಷ್ಟ್ರೀಯ ಬಜರಂಗದಳ ಕಾರ್ಯಕರ್ತರು ಪಾಕಿಸ್ತಾನ, ಟರ್ಕಿ, ಚೀನಾ, ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದರು 

   

ಪಿಟಿಐ ಚಿತ್ರ

ನವದೆಹಲಿ: ಪಾಕಿಸ್ತಾನವನ್ನು ಬೆಂಬಲಿಸಿದ ಟರ್ಕಿ ಮತ್ತು ಅಜರ್‌ಬೈಜಾನ್‌ಗೆ ಪ್ರವಾಸ ಕೈಗೊಳ್ಳುವುದು ಮತ್ತು ಈ ಎರಡು ದೇಶಗಳಲ್ಲಿ ವಿವಾಹ ಸಮಾರಂಭಗಳನ್ನು ನಡೆಸದಂತೆ ಭಾರತೀಯರಿಗೆ ಕೇಂದ್ರ ಸರ್ಕಾರ ಸೂಚನೆ ನೀಡುವ ಸಾಧ್ಯತೆ ಇದೆ.

ADVERTISEMENT

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ, ಮುಂದಿನ ದಿನಗಳಲ್ಲಿ ಈ ಎರಡು ದೇಶಗಳಲ್ಲಿ ಭಾರತೀಯ ಪ್ರವಾಸಿಗರ ಭೇಟಿ, ಮದುವೆಗಳ ಸಂಭ್ರಮಾಚರಣೆ ಮತ್ತು ಭಾರತೀಯ ಸಿನಿಮಾಗಳ ಚಿತ್ರೀಕರಣವು ಗಮನಾರ್ಹವಾಗಿ ಕಡಿಮೆಯಾಗಬಹುದು ಎಂದು ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಪ್ರವಾಸಿಗರು ಟರ್ಕಿ ಮತ್ತು ಅಜರ್‌ಬೈಜಾನ್‌ಗೆ ಭೇಟಿ ನೀಡುತ್ತಿದ್ದರು. ಇದರಿಂದ ಈ ರಾಷ್ಟ್ರಗಳು ಗಣನೀಯ ಪ್ರಮಾಣದ ಆದಾಯ ಗಳಿಸುತ್ತಿದ್ದವು. ಭಾರತೀಯರು ಈ ದೇಶಗಳಿಗೆ ಭೇಟಿ ನೀಡದಂತೆ ಸೂಚನೆ ನೀಡಲು ಸರ್ಕಾರ ಗಂಭೀರವಾಗಿ ಆಲೋಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಎರಡೂ ದೇಶಗಳೊಂದಿಗಿನ ಭಾರತದ ವಾಣಿಜ್ಯ ಸಂಬಂಧಗಳು ಮುಂದುವರಿಯಬೇಕೆ ಅಥವಾ ಬೇಡವೇ ಎನ್ನುವುದು ಈಗಾಗಲೇ ಪರಿಶೀಲನೆಯಲ್ಲಿವೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಸೇರಿ ಅನೇಕ ಶಿಕ್ಷಣ ಸಂಸ್ಥೆಗಳು ಟರ್ಕಿಯ ವಿಶ್ವವಿದ್ಯಾಲಯಗಳೊಂದಿಗಿನ ತಮ್ಮ ಸಹಯೋಗವನ್ನು ಈಗಾಗಲೇ ಸ್ಥಗಿತಗೊಳಿಸಿವೆ.

ಪಾಕಿಸ್ತಾನ ಪರ ನಿಲುವು ಹೊಂದಿರುವ ಟರ್ಕಿಯನ್ನು ಚಿತ್ರೀಕರಣದ ತಾಣವಾಗಿ ಬಳಸಿಕೊಳ್ಳದಂತೆ  ಫೆಡರೇಶನ್ ಆಫ್ ಸಿನೆಮಾಟೋಗ್ರಾಫಿಕ್ ಎಂಪ್ಲಾಯೀಸ್ ಆಫ್ ದಿ ವೆಸ್ಟ್ ಇಂಡಿಯಾ (ಎಫ್‌ಡಬ್ಲ್ಯುಐಸಿಇ) ಮತ್ತು ಅಸೋಸಿಯೇಷನ್ ಆಫ್ ಫಿಲ್ಮ್ ವರ್ಕರ್ಸ್ ಆಫ್ ಆಲ್ ಇಂಡಿಯಾ (ಎಐಸಿಡಬ್ಲ್ಯುಎ) ಭಾರತೀಯ ಕಲಾವಿದರು ಮತ್ತು ನಿರ್ಮಾಪಕರಿಗೆ ಬುಧವಾರ ಕರೆ ನೀಡಿವೆ.

‘ಟರ್ಕಿ ಮತ್ತು ಅಜರ್‌ಬೈಜಾನ್‌ನಲ್ಲಿ ಚಿತ್ರೀಕರಣ ಮಾಡುವ ಚಲನಚಿತ್ರ ನಿರ್ಮಾಪಕರಿಗೆ ಸರ್ಕಾರದ ವತಿಯಿಂದ ಯಾವುದೇ ಬೆಂಬಲ ಇರುವುದಿಲ್ಲ’ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ  ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತವು ಇತ್ತೀಚೆಗೆ ನಡೆಸಿದ ದಾಳಿಯನ್ನು ಟರ್ಕಿ ಮತ್ತು ಅಜರ್‌ಬೈಜಾನ್ ಖಂಡಿಸಿದ್ದವು‌. ಪಾಕಿಸ್ತಾನವು ಭಾರಿ ಪ್ರಮಾಣದಲ್ಲಿ ಟರ್ಕಿಯ ಡ್ರೋನ್‌ಗಳನ್ನು ಭಾರತದ ವಿರುದ್ಧ ಬಳಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.