ಭಾರತ, ಅಮೆರಿಕ
ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಹಾಗೂ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ 10 ವರ್ಷಗಳ ಯೋಜನೆ ಹಾಕಿಕೊಳ್ಳಲು ಉಭಯ ದೇಶಗಳು ಒಪ್ಪಿಕೊಂಡಿವೆ.
ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಬುಧವಾರ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಅದರ ಮರುದಿನ ಪೆಂಟಗನ್ ಹೊರಡಿಸಿದ ಹೇಳಿಕೆಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.
‘ರಕ್ಷಣಾ ಕಾರ್ಯದರ್ಶಿ ಹೆಗ್ಸೆತ್ ಮತ್ತು ಸಚಿವ ಸಿಂಗ್ ಅವರು ತಮ್ಮ ಮುಂದಿನ ಭೇಟಿಯ ಸಂದರ್ಭದಲ್ಲಿ ಭಾರತ–ಅಮೆರಿಕ ನಡುವಣ 10 ವರ್ಷಗಳ ರಕ್ಷಣಾ ಯೋಜನೆಗೆ ಸಹಿ ಹಾಕಲು ಒಪ್ಪಿಕೊಂಡಿದ್ದಾರೆ’ ಎಂದು ಪ್ರಕಟಣೆ ಹೇಳಿದೆ.
ಅಮೆರಿಕವು ಭಾರತಕ್ಕೆ ಹಸ್ತಾಂತರಿಸಲು ಬಾಕಿಯಿರುವ ರಕ್ಷಣಾ ಪರಿಕರಗಳು ಮತ್ತು ರಕ್ಷಣಾ ಕೈಗಾರಿಕಾ ಸಹಕಾರದ ಬಗ್ಗೆ ಇಬ್ಬರೂ ಚರ್ಚಿಸಿದ್ದಾರೆ ಎಂದು ತಿಳಿಸಿದೆ.
ಭಾರತಕ್ಕೆ ಪೂರೈಸಲು ಬಾಕಿಯಿರುವ ಪ್ರಮುಖ ರಕ್ಷಣಾ ಸಾಮಗ್ರಿಗಳು ಮತ್ತು ಎರಡೂ ದೇಶಗಳ ನಡುವೆ ನಿಕಟ ರಕ್ಷಣಾ ಕೈಗಾರಿಕಾ ಸಹಕಾರದ ಬಗ್ಗೆ ಎರಡೂ ಕಡೆಯವರು ಚರ್ಚಿಸಿದ್ದಾರೆ ಎಂದು ಹೇಳಿದೆ. ಆದರೆ ಮಾತುಕತೆಯ ಹೆಚ್ಚಿನ ವಿವರಗಳನ್ನು ಪೆಂಟಗನ್ ಬಹಿರಂಗಪಡಿಸಿಲ್ಲ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು 2025ರ ಫೆಬ್ರುವರಿಯಲ್ಲಿ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಗದಿಪಡಿಸಿದ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ಸಾಧಿಸಿರುವ ಪ್ರಗತಿಯನ್ನು ಉಭಯ ನಾಯಕರು ಪರಿಶೀಲಿಸಿದರು ಎಂದು ಹೇಳಿದೆ.
ತೇಜಸ್‌ಗೆ ಎಂಜಿನ್ ಪೂರೈಕೆ ತ್ವರಿತಗೊಳಿಸಲು ಒತ್ತಾಯ
ತೇಜಸ್ ಯುದ್ಧ ವಿಮಾನಗಳ ತಯಾರಿಕೆಗೆ ಅಗತ್ಯವಿರುವ ಜಿಇ ಎಫ್–404 ಎಂಜಿನ್‌ಗಳ ಪೂರೈಕೆಯನ್ನು ತ್ವರಿತಗೊಳಿಸುವಂತೆ ರಾಜನಾಥ ಸಿಂಗ್ ಅವರು ಪೀಟ್ ಹಗ್ಸೆತ್ ಅವರನ್ನು ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮೆರಿಕ ಮೂಲದ ಜಿಇ ಏರೋಸ್ಪೇಸ್ ಕಂಪನಿಯು ನಿಗದಿತ ಸಮಯಕ್ಕೆ ಎಂಜಿನ್ ಪೂರೈಸದಿರುವ ಕಾರಣ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ (ಎಚ್‌ಎಎಲ್) ಗಡುವಿನ ಒಳಗಾಗಿ ಭಾರತೀಯ ವಾಯುಪಡೆಗೆ ತೇಜಸ್ ಯುದ್ಧವಿಮಾನಗಳನ್ನು ಪೂರೈಸಲು ಸಾಧ್ಯವಾಗಿಲ್ಲ. ಭಾರತದಲ್ಲಿ ಎಫ್–414 ಜೆಟ್ ಎಂಜಿನ್‌ಗಳ ಜಂಟಿ ಉತ್ಪಾದನೆಗಾಗಿ ಎಚ್‌ಎಎಲ್ ಮತ್ತು ಜಿಇ ಏರೋಸ್ಪೇಸ್ ನಡುವಿನ ಪ್ರಸ್ತಾವಿತ ಒಪ್ಪಂದವನ್ನು ಶೀಘ್ರವಾಗಿ ಅಂತಿಮಗೊಳಿಸುವಂತೆಯೂ ರಕ್ಷಣಾ ಸಚಿವರು ಒತ್ತಾಯಿಸಿದ್ದಾರೆ.
ಚೀನಾ ನೀತಿ; ಖರ್ಗೆ ಪ್ರಶ್ನೆ
ಭಾರತಕ್ಕೆ ವಿರಳ ಲೋಹಗಳು ಮತ್ತು ಮ್ಯಾಗ್ನೆಟ್‌ಗಳ ರಫ್ತಿಗೆ ಚೀನಾ ನಿರ್ಬಂಧ ಹೇರುತ್ತಿರುವುದು ಹಾಗೂ ಚೀನಾದ ಎಂಜಿನಿಯರ್‌ಗಳು ಭಾರತ ತೊರೆಯುತ್ತಿರುವ ವರದಿಗಳನ್ನು ಉಲ್ಲೇಖಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ‘ನರೇಂದ್ರ ಮೋದಿ ಅವರೇ ಚೀನಾ ತನ್ನ ಎಂಜಿನಿಯರುಗಳನ್ನು ಭಾರತದ ಉತ್ಪಾದನಾ ವಲಯದಿಂದ ಹಿಂತೆಗೆದುಕೊಂಡಿದೆ ಎಂದು ವರದಿಯಾಗಿದೆ. ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ದಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಮೋದಿ ಸರ್ಕಾರವು ದೋಕ್ಲಾಮ್ ಮತ್ತು ಗಾಲ್ವನ್ ಘಟನೆಗಳನ್ನು ಮರೆತು ಚೀನಾದ ಕಂಪನಿಗಳಿಗೆ ‘ಕೆಂಪು ಹಾಸು’ ಹಾಸಿ ಅಲ್ಲಿನ ಪ್ರಜೆಗಳಿಗೆ ವೀಸಾ ನೀಡುವುದನ್ನು ಸುಲಭಗೊಳಿಸಿದೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಫಾಕ್ಸ್‌ಕಾನ್‌ನ ಐಫೋನ್ ಘಟಕದಿಂದ ಚೀನಾದ ಎಂಜಿನಿಯರ್‌ಗಳು ನಿರ್ಗಮಿಸುತ್ತಿರುವ ವರದಿಯನ್ನು ಅವರು ಉಲ್ಲೇಖಿಸಿದ್ದಾರೆ. ಭಾರತಕ್ಕೆ ರಸಗೊಬ್ಬರ ರಫ್ತು ನಿಲ್ಲಿಸಿರುವ ಚೀನಾದ ಕ್ರಮವನ್ನು ಪ್ರಸ್ತಾಪಿಸಿದ ಖರ್ಗೆ ‘ಇದರಿಂದ ನಮ್ಮ ಕೋಟ್ಯಂತರ ರೈತರಿಗೆ ತೊಂದರೆಯಾಗಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.