ADVERTISEMENT

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ: ಶಾಂತಿ, ಭದ್ರತೆಗೆ ನಮ್ಮ ಬೆಂಬಲ ಎಂದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಆಗಸ್ಟ್ 2021, 14:37 IST
Last Updated 6 ಆಗಸ್ಟ್ 2021, 14:37 IST
   

ನವದೆಹಲಿ: ಭಾರತವು ಅಂತರರಾಷ್ಟ್ರೀಯ ಕಾನೂನು ಪಾಲನೆ, ಶಾಂತಿ, ಭದ್ರತೆ ಮತ್ತುಸಮೃದ್ಧಿಯಪರವಾಗಿ ಯಾವಾಗಲು ಧ್ವನಿ ಎತ್ತಲಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್‌ ಬಾಗ್ಚಿ ಹೇಳಿದ್ದಾರೆ.

ಸಾಗರ ಭದ್ರತೆ, ಅಂತರರಾಷ್ಟ್ರೀಯ ಸಹಕಾರ, ಶಾಂತಿ ಪಾಲನೆ ಮತ್ತು ಭದ್ರತೆಯ ವಿಚಾರವಾಗಿ ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಉನ್ನತ ಮಟ್ಟದವರ್ಚುವಲ್ ಸಭೆಯು ಆಗಸ್ಟ್‌9ರಂದು ನಡೆಯಲಿದೆ.ಪ್ರಧಾನಿ ಮೋದಿ ಅವರು ಈ ಸಭೆಯ ಅಧ್ಯಕ್ಷತೆವಹಿಸಲಿದ್ದು, ಅದಕ್ಕೂ ಮುನ್ನ ಬಾಗ್ಚಿ ಹೇಳಿಕೆ ನೀಡಿದ್ದಾರೆ.

ಆಗಸ್ಟ್‌9ರಂದು ನಡೆಯುವ ಯುಎನ್‌ಎಸ್‌ಸಿ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಿಕೊಳ್ಳಲಿದ್ದಾರೆ. ಭಾರತ ಯಾವಾಗಲೂ ಅಂತರರಾಷ್ಟ್ರೀಯ ಕಾನೂನಿನ ಧ್ವನಿಯಾಗಲಿದೆ. ಶಾಂತಿ, ಭದ್ರತೆ ಮತ್ತು ಸಮೃದ್ಧಿಯನ್ನು ಬೆಂಬಲಿಸುತ್ತದೆ. ಅಂತರರಾಷ್ಟ್ರೀಯಸಮಸ್ಯೆಗಳ ಬಗ್ಗೆ ಭಾರತ ಸಮಾಲೋಚನೆ, ಸಂವಾದ ನಡೆಸಲಿದ್ದು, ನ್ಯಾಯವನ್ನು ಪ್ರತಿಪಾದಿಸಲಿದೆ ಎಂದು ಬಾಗ್ಚಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಮತ್ತುವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರೂ ಈ ತಿಂಗಳು ನ್ಯೂಯಾರ್ಕ್‌ಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಸಂಘರ್ಷ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಭಾರತವು ಆಗಸ್ಟ್‌ 1ರಿಂದ ಒಂದು ತಿಂಗಳ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಿಕೊಂಡಿದೆ.ಈ ಅವಧಿಯಲ್ಲಿ ಕಡಲ ಭದ್ರತೆ, ಶಾಂತಿ ಪಾಲನೆ ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿರುವ ಭಾರತದ ಎರಡು ವರ್ಷಗಳ ಅಧಿಕಾರಾವಧಿಯು 2021ರ ಜನವರಿ 1ರಿಂದ ಆರಂಭವಾಗಿದೆ. ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಮತ್ತೆ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಗಲಿದೆ.

ಭದ್ರತಾ ಮಂಡಳಿಗೆ ಜುಲೈ ತಿಂಗಳಲ್ಲಿ ಫ್ರಾನ್ಸ್ಅಧ್ಯಕ್ಷತೆ ವಹಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.