ADVERTISEMENT

2026ರ ವೇಳೆಗೆ ಹಿಂದೂ ರಾಷ್ಟ್ರವಾಗಿ ಭಾರತ: ಬಿಜೆಪಿ ಶಾಸಕ ಟಿ. ರಾಜಾಸಿಂಗ್

ಪಿಟಿಐ
Published 14 ಮಾರ್ಚ್ 2023, 12:21 IST
Last Updated 14 ಮಾರ್ಚ್ 2023, 12:21 IST
ಟಿ. ರಾಜಾ ಸಿಂಗ್  –ಪಿಟಿಐ ಚಿತ್ರ 
ಟಿ. ರಾಜಾ ಸಿಂಗ್  –ಪಿಟಿಐ ಚಿತ್ರ    

ಪುಣೆ: ‘2026ರ ವೇಳೆಗೆ ಭಾರತವನ್ನು ‘ಅಖಂಡ ಹಿಂದೂ ರಾಷ್ಟ್ರ’ವನ್ನಾಗಿ ಘೋಷಿಸಲಾಗುವುದು’ ಎಂದು ಬಿಜೆಪಿಯಿಂದ ಅಮಾನತುಗೊಂಡಿರುವ ಶಾಸಕ ಟಿ. ರಾಜಾಸಿಂಗ್ ಹೇಳಿದ್ದಾರೆ.

ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ರಹತಾದಲ್ಲಿ ಈಚೆಗೆ ಹಿಂದುತ್ವ ಸಂಘಟನೆಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಿಂದೂಗಳು ದೇಶವನ್ನು ‘ಅಖಂಡ ಹಿಂದೂ ರಾಷ್ಟ್ರ’ವನ್ನಾಗಿ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. 50ಕ್ಕೂ ಹೆಚ್ಚು ಇಸ್ಲಾಮಿಕ್ ರಾಷ್ಟ್ರಗಳು ಹಾಗೂ 150ಕ್ಕೂ ಹೆಚ್ಚಿನ ಕ್ರಿಶ್ಚಿಯನ್ ರಾಷ್ಟ್ರಗಳು ಇರಬಹುದಾದರೆ, ಹಿಂದೂಗಳೇ ಬಹುಸಂಖ್ಯಾತರಾಗಿರುವ ಕಾರಣ ಭಾರತವನ್ನು ಹಿಂದೂ ರಾಷ್ಟ್ರವೆಂದು ಏಕೆ ಘೋಷಿಸಬಾರದು? ಏನೇ ಆಗಲಿ 2025 ಮತ್ತು 2026ರಲ್ಲಿ ಭಾರತವನ್ನು ಅಖಂಡ ಹಿಂದೂ ರಾಷ್ಟ್ರ ಎಂದು ಘೋಷಿಸಲಾಗುವುದು’ ಎಂದು ಹೇಳಿದ್ದಾರೆ.

‘ಇದನ್ನು ನಾನು ಹೇಳುತ್ತಿಲ್ಲ. ಇದು ಎಲ್ಲಾ ಸಾಧು ಮತ್ತು ಸಂತರ ಭವಿಷ್ಯವಾಣಿಯಾಗಿದೆ’ ಎಂದು ರಾಜಾಸಿಂಗ್ ಹೇಳಿದಾಗ ಜನರು ಹರ್ಷೋದ್ಗಾರ ಮಾಡಿದರು.

ADVERTISEMENT

ನಗರ ಹೆಸರು ಮರುನಾಮಕರಣ: ಮಹಾರಾಷ್ಟ್ರದ ಔರಂಗಾಬಾದ್ (ಛತ್ರಪತಿ ಸಂಭಾಜಿ ನಗರ) ಮತ್ತು ಉಸ್ಮಾನಾಬಾದ್ (ಧರಶಿವ) ನಗರಗಳ ಹೆಸರುಗಳನ್ನು ಇತ್ತೀಚೆಗೆ ಕೇಂದ್ರ ಸರ್ಕಾರವು ಮರು ನಾಮಕರಣ ಮಾಡಿದೆ. ಈ ನಗರಗಳ ಹೆಸರನ್ನು ಮರುನಾಮಕರಣ ಮಾಡಿರುವುದು ಕೆಲವರಿಗೆ ತಲೆನೋವಾಗಿದೆ. ಆದರೆ, ಇದು ಆರಂಭವಷ್ಟೇ. ಅಹ್ಮದ್‌ನಗರವನ್ನು ಅಹಲ್ಯಾಬಾಯಿ ನಗರ ಹಾಗೂ ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಲಾಗುವುದು. ಕೆಲವರು ತಾವು ಔರಂಗಾಬಾದ್‌ನಲ್ಲಿ ಹುಟ್ಟಿದ್ದೇವೆ, ಔರಂಗಾಬಾದ್‌ನಲ್ಲಿಯೇ ಸಾಯುತ್ತೇವೆ ಎಂದು ಹೇಳುತ್ತಾರೆ ಎಂದು ಔರಂಗಾಬಾದ್‌ನ ಮರುನಾಮಕರಣ ವಿರೋಧಿಸುತ್ತಿರುವ ಎಐಎಂಐಎಂನ ಸಂಸದ ಇಮ್ತಿಯಾಜ್ ಕಲೀಲ್ ಅವರನ್ನು ಪರೋಕ್ಷವಾಗಿ ಕೆಣಕಿದರು.

‘ನೀವು ಔರಂಗಾಬಾದ್‌ನಲ್ಲಿ ಹುಟ್ಟಿದರೂ, ಸಂಭಾಜಿನಗರದಲ್ಲಿ ಸಾಯಬೇಕು. ನೀವು ಹಿಂದೂ ರಾಷ್ಟ್ರದಲ್ಲಿ ಸಾಯುತ್ತೀರಿ. ಏನೂ ಬಂದರೂ ಹೊಸ ಹೆಸರು ಬದಲಾಗುವುದಿಲ್ಲ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ’ ಎಂದೂ ರಾಜಾಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.