ADVERTISEMENT

ಶಿಕ್ಷಣದ ನಿಯಂತ್ರಣವನ್ನು ಆರ್‌ಎಸ್‌ಎಸ್‌ ತೆಗೆದುಕೊಂಡರೆ ದೇಶ ನಾಶ: ರಾಹುಲ್ ಗಾಂಧಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 9:31 IST
Last Updated 24 ಮಾರ್ಚ್ 2025, 9:31 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

– ಪಿಟಿಐ ಚಿತ್ರ

ನವದೆಹಲಿ: ಶಿಕ್ಷಣದ ನಿಯಂತ್ರಣವನ್ನು ಆರ್‌ಎಸ್‌ಎಸ್‌ ತೆಗೆದುಕೊಂಡರೆ ದೇಶ ನಾಶವಾಗಲಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದರು.

ADVERTISEMENT

‘ಇಂಡಿಯಾ ಒಕ್ಕೂಟದ ಪಾಲುದಾರರ ನಡುವೆ ಸಿದ್ಧಾಂತ ಹಾಗೂ ನೀತಿಯಲ್ಲಿ ಸಣ್ಣ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ನಾವು ಯಾರೂ ದೇಶದ ಶಿಕ್ಷಣ ವ್ಯವಸ್ಥೆಯ ಬಗ್ಗೆ ರಾಜಿ ಮಾಡಿಕೊಂಡಿಲ್ಲ’ ಎಂದು ಅವರು ನುಡಿದರು.

‘ದೇಶದ ಭವಿಷ್ಯ ಹಾಗೂ ಶಿಕ್ಷಣ ವ್ಯವಸ್ಥೆಯನ್ನು ನಾಶ ಪಡಿಸಲು ಒಂದು ಸಂಸ್ಥೆ ಪ್ರಯತ್ನಿಸುತ್ತಿದೆ. ಆ ಸಂಸ್ಥೆಯ ಹೆಸರು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ದೇಶದ ಶಿಕ್ಷಣ ವ್ಯವಸ್ಥೆ ಈಗ ನಿಧಾನವಾಗಿ ಅವರ ಕೈಗೆ ಹೋಗುತ್ತಿದೆ. ಸಂಪೂರ್ಣವಾಗಿ ಅವರ ಕೈಗೆ ಹೋದರೆ ದೇಶ ನಶಿಸಿ ಹೋಗಲಿದೆ. ಯಾರಿಗೂ ಉದ್ಯೋಗ ಸಿಗುವುದಿಲ್ಲ. ದೇಶ ಮುಗಿದು ಹೋಗುತ್ತದೆ’ ಎಂದು ಇಂಡಿಯಾ ಒಕ್ಕೂಟಕ್ಕೆ ಸೇರಿದ ವಿದ್ಯಾರ್ಥಿ ಸಂಘಟನೆಯೊಂದು ಹೊಸ ಶಿಕ್ಷಣ ನೀತಿ ವಿರೋಧಿಸಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಹೇಳಿದರು.

‘ಭಾರತದ ವಿಶ್ವವಿದ್ಯಾಲಯದ ಕುಲಪತಿಗಳು ಆರ್‌ಎಸ್‌ಎಸ್‌ಗೆ ಸೇರಿದವರು ಎಂದು ವಿದ್ಯಾರ್ಥಿ ಒಕ್ಕೂಟದ ಸದಸ್ಯರು ಇತರೆ ವಿದ್ಯಾರ್ಥಿಗಳಿಗೆ ಹೇಳಬೇಕು. ಮುಂದಿನ ದಿನಗಳಲ್ಲಿ ರಾಜ್ಯಗಳ ವಿಶ್ವವಿದ್ಯಾಲಯಗಳ ಕುಲಪತಿಗಳು ಆರ್‌ಎಸ್‌ಎಸ್‌ನ ಶಿಫಾರಸು ಮೇರೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಇದನ್ನು ನಾವು ನಿಲ್ಲಿಸಬೇಕಿದೆ’ ಎಂದು ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಹೇಳಿದರು.

ಕಳೆದ ವಾರ ಸಂಸತ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕುಂಭಮೇಳದ ಬಗ್ಗೆ ಮಾತನಾಡಿದ್ದನ್ನು ರಾಹುಲ್ ಗಾಂಧಿ ಟೀಕಿಸಿದರು. ‘ಪ್ರಧಾನ ಮಂತ್ರಿ ನಿರುದ್ಯೋಗ, ಹಣದುಬ್ಬರ ಹಾಗೂ ಶಿಕ್ಷಣ ವ್ಯವಸ್ಥೆಯ ಬಗ್ಗೆ ಒಂದೇ ಒಂದು ಪದ ಮಾತನಾಡಲಿಲ್ಲ. ಎಲ್ಲಾ ಸಂಪನ್ಮೂಲಗಳನ್ನು ಅಂಬಾನಿ ಹಾಗೂ ಅದಾನಿಗೆ, ಎಲ್ಲಾ ಸಂಸ್ಥೆಗಳನ್ನು ಆರ್‌ಎಸ್‌ಎಸ್‌ಗೆ ಹಸ್ತಾಂತರಿಸುವುದು ಅವರ ಮಾದರಿ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

‘ನೀವು ಇಂಡಿಯಾ ಒಕ್ಕೂಟಕ್ಕೆ ಸೇರಿದ ವಿದ್ಯಾರ್ಥಿಗಳು, ನಮ್ಮ ಸಿದ್ಧಾಂತಗಳು ಮತ್ತು ನೀತಿಗಳಲ್ಲಿ ಕೆಲವು ವ್ಯತ್ಯಾಸಗಳಿರಬಹುದು. ಆದರೆ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ಈ ಹೋರಾಟವನ್ನು ಒಟ್ಟಾಗಿ ಹೋರಾಡುತ್ತೇವೆ ಮತ್ತು ಆರ್‌ಎಸ್‌ಎಸ್ ಅನ್ನು ಹಿಮ್ಮೆಟ್ಟಿಸುತ್ತೇವೆ’ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.