ADVERTISEMENT

ವಿಸ್ತರಣಾವಾದ ಮಾನಸಿಕ ರೋಗ: ಚೀನಾ ವಿರುದ್ಧ ಮೋದಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 18:49 IST
Last Updated 14 ನವೆಂಬರ್ 2020, 18:49 IST
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೈಸಲ್ಮೇರ್‌ ಸಮೀಪದ ಲೊಂಗೇವಾಲದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸುವ ವೇಳೆ ದೇಶವನ್ನುದ್ದೇಶಿಸಿ ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೈಸಲ್ಮೇರ್‌ ಸಮೀಪದ ಲೊಂಗೇವಾಲದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸುವ ವೇಳೆ ದೇಶವನ್ನುದ್ದೇಶಿಸಿ ಮಾತನಾಡಿದರು.   

ನವದೆಹಲಿ: ‘ಪ್ರಚೋದಿಸಿದರೆ ಪ್ರಚಂಡ ಉತ್ತರ ನೀಡುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಗುಡುಗಿದ್ದಾರೆ. ಆ ಮೂಲಕ ಅವರು ನೆರೆ ರಾಷ್ಟ್ರಗಳಿಗೆ ಸ್ಪಷ್ಟ ಸಂದೇಶ ರವಾನಿಸಿ
ದ್ದಾರೆ. ಚೀನಾ ಹಾಗೂ ಪಾಕಿಸ್ತಾನ ಜೊತೆಗಿನ ಬಿಕ್ಕಟ್ಟು ಹಸಿರಾಗಿರುವಾಗಲೇ ಮೋದಿ ಅವರು ನೀಡಿರುವ ಈ ಹೇಳಿಕೆ ಸಾಕಷ್ಟು ಮಹತ್ವ ಪಡೆದಿದೆ.

ರಾಜಸ್ಥಾನದ ಭಾರತ– ಪಾಕ್ ಗಡಿಯ ಲೊಂಗೆವಾಲಾದಲ್ಲಿ ಶನಿವಾರ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಸತತ ಏಳನೇ ವರ್ಷ ಸೈನಿಕರ ಜೊತೆ ದೀಪಾವಳಿ ಆಚರಿಸಿದರು.

‘ಪರಸ್ಪರರನ್ನು ಅರ್ಥ ಮಾಡಿಕೊಳ್ಳುವ ಮತ್ತು ತಿಳಿವಳಿಕೆ ಮೂಡಿಸುವ ನೀತಿಯನ್ನು ಭಾರತವು ಅನುಸರಿಸುತ್ತಾ ಬಂದಿದೆ. ನಮ್ಮ ಈ ಸಂಕಲ್ಪವನ್ನು ಪರೀಕ್ಷಿಸಲು ಯಾರಾದರೂ ಮುಂದಾ
ದರೆ, ತಕ್ಕ ಪ್ರತ್ಯುತ್ತರ ಪಡೆಯಲಿದ್ದಾರೆ. ವಿಸ್ತರಣಾ ನೀತಿ ಒಂದು ಮಾನಸಿಕ ರೋಗ. ಈ ನೀತಿಯು 18ನೇ ಶತಮಾನದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಇದರಿಂದ ಇತ್ತೀಚಿನ ದಿನಗಳಲ್ಲಿ ಜಗತ್ತು ತೊಂದರೆ ಅನುಭವಿಸುತ್ತಿದೆ. ಇದರ ವಿರುದ್ಧ ಭಾರತ ಧ್ವನಿ ಎತ್ತುತ್ತದೆ’ ಎಂದು ಪ್ರಧಾನಿ ಹೇಳಿದ್ದಾರೆ.

ADVERTISEMENT

‘ದೇಶದ ಹಿತಾಸಕ್ತಿಯ ವಿಚಾರಗಳಲ್ಲಿ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದು ಇಡೀ ಜಗತ್ತಿಗೆ ಅರಿವಾಗಿದೆ. ಸರ್ಕಾರದ ದಿಟ್ಟ ನಿಲುವುಗಳಿಗೆ ಸೈನಿಕರ ಶೌರ್ಯವೇ ಕಾರಣ. ದಾಳಿಕೋರರಿಗೆ ತಿರುಗೇಟು ನೀಡಿದ್ದ ದೇಶಗಳು ಸುಭದ್ರವಾಗಿದ್ದವು ಎಂದು ಇತಿಹಾಸ ತಿಳಿಸುತ್ತದೆ’ ಎಂದರು.

1971ರಲ್ಲಿ ನಡೆದ ಲೊಂಗೆವಾಲ ಸಂಘರ್ಷವನ್ನು ಅವರು ಸ್ಮರಿಸಿದರು. ‘ಸೈನಿಕರ ಶೌರ್ಯದ ಮಾತು ಬಂದಾಗ ನೆನಪಾಗುವುದೇ ಲೊಂಗೆವಾಲ. ಅಂದು ಪಾಕಿಸ್ತಾನಕ್ಕೆ ನಮ್ಮ ಯೋಧರು ದಿಟ್ಟ ಪ್ರತ್ಯುತ್ತರ ನೀಡಿದ್ದರು’ ಎಂದು ಪ್ರಧಾನಿ ಹೇಳಿದರು.

ಸೈನಿಕರ ಕುರಿತು ಮೋದಿ ಮಾತು..

*ದೇಶದ ಸೈನಿಕರ ಜೊತೆ 130 ಕೋಟಿ ಜನರು ಇದ್ದಾರೆ. ಯೋಧರ ಶೌರ್ಯಕ್ಕೆ ದೇಶವಾಸಿಗಳು ತಲೆಬಾಗುತ್ತಾರೆ

*ಕಾಡು, ಮರಳುಗಾಡು, ಸಮುದ್ರ–ಎಲ್ಲೇ ಆಗಲಿ, ತಮ್ಮ ಶೌರ್ಯದಿಂದ ಸೈನಿಕರು ಬಿಕ್ಕಟ್ಟುಗಳಿಂದ ಪಾರುಮಾಡಿದ್ದಾರೆ

*ಸೈನಿಕರ ಜೊತೆ ಕಳೆದಾಗಲೇ ನನ್ನ ದೀಪಾವಳಿ ಆಚರಣೆ ಸಂಪೂರ್ಣವಾಗುತ್ತದೆ

*ಯೋಧರ ಜತೆ ಸಮಯ ಕಳೆಯುವುದರಿಂದ, ದೇಶಕ್ಕೆ ಸೇವೆ ಸಲ್ಲಿಸುವ, ದೇಶ ರಕ್ಷಣೆಯ ಸಂಕಲ್ಪ ಬಲಗೊಳ್ಳುತ್ತದೆ

* ಪಾಕಿಸ್ತಾನದ ಸೈನ್ಯವು ಬಾಂಗ್ಲಾದೇಶದ ಮುಗ್ಧ ನಾಗರಿಕರನ್ನು ಭಯಭೀತಗೊಳಿಸಿ, ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದು, ಅದರ ಕೊಳಕು ಮುಖ ಬಹಿರಂಗವಾಗುತ್ತಿದೆ.

-ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.